×
Ad

ಅಂತರ್ ಜಿಲ್ಲಾ ಬಿಡ್ಡರ್ ಸೇರಿ ಈರ್ವರ ಸೆರೆ

Update: 2017-07-11 17:38 IST

ಶಿವಮೊಗ್ಗ, ಜು. 11: ಇಲ್ಲಿನ ಡಿಸಿಬಿ ಹಾಗೂ ಡಿಎಸ್‌ಬಿ ಪೊಲೀಸರು ನಡೆಸಿದ ಮಹತ್ವದ ಜಂಟಿ ಕಾರ್ಯಾಚರಣೆಯಲ್ಲಿ ಅಂತರ್ ಜಿಲ್ಲಾ ಓ.ಸಿ. ಬಿಡ್ಡರ್ ಹಾಗೂ ಆತನ ಸಹಚರರನ್ನು ಬಂಧಿಸಿ, ಲಕ್ಷಾಂತರ ರೂ. ನಗದು ವಶಕ್ಕೆ ಪಡೆದುಕೊಂಡಿರುವ ಘಟನೆ ವರದಿಯಾಗಿದೆ.

ಶಿವಮೊಗ್ಗ ತಾಲೂಕಿನ ಕುಂಸಿ ಪೊಲೀಸ್ ಠಾಣೆ ವ್ಯಾಪ್ತಿಯ ಹಾರನಹಳ್ಳಿ ರಾಮನಗರದ ನಿವಾಸಿ ಹನೀಫ್ ಸಾಬ್ ಯಾನೆ ತೀರ್ಥಹಳ್ಳಿ ಹನೀಫ್ ಹಾಗೂ ಈತನ ಸಹಚರ ನಾಗರಾಜ್ ಬಂಧಿತ ಆರೋಪಿಗಳೆಂದು ಗುರುತಿಸಲಾಗಿದೆ. ಆರೋಪಿಯು ಸಹಚರನೊಂದಿಗೆ ತನ್ನ ತೋಟದ ಮನೆಯಲ್ಲಿ ಓ.ಸಿ. ದಂಧೆಯಲ್ಲಿ ತೊಡಗಿದ್ದ ಮಾಹಿತಿ ಅರಿತ ಪೊಲೀಸರು ಈ ಕಾರ್ಯಾಚರಣೆ ನಡೆಸಿದ್ದಾರೆ. 1.45 ಲಕ್ಷ ನಗದು, 9 ಮೊಬೈಲ್ ಪೋನ್, 14 ಬಂಡಲ್ ಓ.ಸಿ. ಪಟ್ಟಿಯ ಚೀಟಿ, 3 ಕ್ಯಾಲ್ಕ್ಯುಲೇಟರ್‌ಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಹೆಚ್ಚುವರಿ ಜಿಲ್ಲಾ ರಕ್ಷಣಾಧಿಕಾರಿ ಮುತ್ತುರಾಜ್ ನೇತೃತ್ವದಲ್ಲಿ ಡಿಸಿಬಿ ಇನ್ಸ್‌ಪೆಕ್ಟರ್ ಕುಮಾರ್, ಡಿಎಸ್‌ಬಿ ಇನ್ಸ್‌ಪೆಕ್ಟರ್ ಮುತ್ತಣ್ಣ ಮತ್ತವರ ಸಿಬ್ಬಂದಿಗಳು ಈ ಯಶಸ್ವಿ ಕಾರ್ಯಾಚರಣೆ ನಡೆಸಿದ್ದಾರೆ. ಈ ಸಂಬಂಧ ಡಿಸಿಬಿ ಪೊಲೀಸ್ ಠಾಣೆಯಲ್ಲಿ ಈ ಇಬ್ಬರು ಆರೋಪಿಗಳ ಜೊತೆಗೆ ಇತರೆ 17 ಓ.ಸಿ. ಜೂಜುಕೋರರ ವಿರುದ್ದ ಪ್ರಕರಣ ದಾಖಲಾಗಿದೆ. ತನಿಖೆ ಮುಂದುವರಿದಿದೆ.

ಕಾರ್ಯಾಚರಣೆ: ಆರೋಪಿ ಹನೀಫ್ ಶಿವಮೊಗ್ಗ ಜಿಲ್ಲೆಯ ಜೊತೆಗೆ ದಾವಣಗೆರೆ ಹಾಗೂ ಚಿತ್ರದುರ್ಗ ಜಿಲ್ಲಾ ವ್ಯಾಪ್ತಿಗಳಲ್ಲಿಯೂ ಓ.ಸಿ. ವ್ಯವಹಾರ ದಂಧೆ ನಡೆಸುತ್ತಿದ್ದ. ಓ.ಸಿ. ಬರೆಯುವರಿಂದ ಪಟ್ಟಿ ಸಂಗ್ರಹಿಸುತ್ತಿದ್ದ. ಪ್ರತಿನಿತ್ಯ ಲಕ್ಷಾಂತರ ರೂ. ವ್ಯವಹಾರ ನಡೆಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News