×
Ad

ಬಿ.ಎಸ್.ಯಡಿಯೂರಪ್ಪಗೆ ಘೇರಾವ್: ಯುವ ಕಾಂಗ್ರೆಸ್ ಕಾರ್ಯಕರ್ತರ ಬಂಧನ

Update: 2017-07-11 18:16 IST

ಶಿವಮೊಗ್ಗ, ಜು. 11: ರಾಜ್ಯದ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿರುವ ರೈತರ ಸಾಲ ಮನ್ನಾಕ್ಕೆ ಆಗ್ರಹಿಸಿ ಮಂಗಳವಾರ ಬಿ.ಎಸ್.ಯಡಿಯೂರಪ್ಪಗೆ ಘೇರಾವ್ ಹಾಕಲು ಯತ್ನಿಸಿದ ಯುವ ಕಾಂಗ್ರೆಸ್ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ ಘಟನೆ ಮಂಗಳವಾರ ನಗರದಲ್ಲಿ ನಡೆಯಿತು.
ಸೋಮವಾರವಷ್ಟೆ ಇದೇ ವಿಷಯ ಮುಂದಿಟ್ಟುಕೊಂಡು ಯುವ ಕಾಂಗ್ರೆಸ್ ಕಾರ್ಯಕರ್ತರು ನಗರದ ವಿನೋಬನಗರದಲ್ಲಿರುವ ಬಿ.ಎಸ್.ಯಡಿಯೂರಪ್ಪ ನಿವಾಸಕ್ಕೆ ಮುತ್ತಿಗೆ ಹಾಕಲು ಮುಂದಾಗಿ ಬಂಧನಕ್ಕೊಳಗಾಗಿದ್ದರು.

ಬಂಧನ: ವಿದೇಶಾಂಗ ಇಲಾಖೆಯು ಶಿವಮೊಗ್ಗ ನಗರಕ್ಕೆ ಅಂಚೆ ಕಚೇರಿ ಪಾಸ್‌ಪೋರ್ಟ್ ಸೇವಾ ಕೇಂದ್ರ ಮಂಜೂರುಗೊಳಿಸಿದೆ. ಮುಖ್ಯ ಅಂಚೆ ಕಚೇರಿ ಆವರಣದಲ್ಲಿ ಸೇವಾ ಕೇಂದ್ರ ತೆರೆಯಲು ನಿರ್ಧರಿಸಿ, ಸ್ಥಳ ಗುರುತಿಸಲಾಗಿದೆ. ಇದನ್ನು ಪರಿಶೀಲನೆ ನಡೆಸಲು ಸಂಬಂಧಿಸಿದ ಅಧಿಕಾರಿಗಳೊಂದಿಗೆ ಮಂಗಳವಾರ ಬೆಳಿಗ್ಗೆ ಬಿ.ಎಸ್.ವೈ.ರವರು ಅಂಚೆ ಕಚೇರಿ ಆವರಣಕ್ಕೆ ಆಗಮಿಸಿದ್ದರು.

ಸ್ಥಳ ಪರಿಶೀಲನೆ ನಡೆಸಿ ಹಿಂದಿರುಗುವ ವೇಳೆ ಎದುರಾದ ಯುವ ಕಾಂಗ್ರೆಸ್ ಕಾರ್ಯಕರ್ತರು ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿರುವ ರೈತರ ಸಾಲ ಮನ್ನಾಕ್ಕೆ ಸೂಕ್ತ ಕ್ರಮಕೈಗೊಳ್ಳಬೇಕು. ಈ ಸಂಬಂಧ ಪ್ರಧಾನ ಮಂತ್ರಿಯೊಂದಿಗೆ ಚರ್ಚೆ ನಡೆಸಿ ಆದೇಶ ಹೊರಡಿಸಬೇಕು ಎಂದು ಬಿ.ಎಸ್.ವೈ.ಗೆ ಆಗ್ರಹಿಸಿದರು.
ಈ ಹಂತದಲ್ಲಿ ಬಿ.ಎಸ್.ವೈ. ಹಾಗೂ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆಯಿತು. ಕಾರ್ಯಕರ್ತರು ದಿಕ್ಕಾರದ ಘೋಷಣೆ ಕೂಗಿ ಮುತ್ತಿಗೆ ಹಾಕಲು ಮುಂದಾದ ವೇಳೆ ಸ್ಥಳದಲ್ಲಿದ್ದ ಪೊಲೀಸರು ಯುವ ಕಾಂಗ್ರೆಸ್ ಕಾರ್ಯಕರ್ತರನ್ನು ಬಂಧಿಸಿ ಕರೆದೊಯ್ದರು.

ಈ ಸಂದರ್ಭದಲ್ಲಿ ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಂ.ಪ್ರವೀಣ್‌ಕುಮಾರ್, ಹಿರಿಯ ಮುಖಂಡ, ಕೆ. ರಂಗನಾಥ್, ಶಿವಮೊಗ್ಗ ನಗರ ಘಟಕದ ಅಧ್ಯಕ್ಷ ಹೆಚ್.ಪಿ.ಗಿರೀಶ್, ಟಿ.ವಿ.ರಂಜಿತ್, ಕಿರಣ್ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.

ಆದೇಶ ಹೊರಡಿಸಲಿ: ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರವು ರಾಜ್ಯದಲ್ಲಿ ತಲೆದೋರಿರುವ ಭೀಕರ ಬರ ಪರಿಸ್ಥಿತಿ ಗಮನಿಸಿ, ಸಹಕಾರಿ ಬ್ಯಾಂಕ್‌ಗಳಲ್ಲಿ ರೈತರು ಮಾಡಿರುವ 8165 ಕೋಟಿ ರೂ. ಸಾಲ ಮನ್ನಾ ಆದೇಶ ಹೊರಡಿಸಿದೆ. ಸರ್ಕಾರದ ಈ ಕ್ರಮ ನಿಜಕ್ಕೂ ಸ್ವಾಗತಾರ್ಹವಾದುದಾಗಿದೆ. ಮತ್ತೊಂದೆಡೆ ಕೇಂದ್ರ ಸರ್ಕಾರವು ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿರುವ ರೈತ ಸಾಲ ಮನ್ನಾಕ್ಕೆ ಯಾವುದೇ ಕ್ರಮಕೈಗೊಳ್ಳದೆ ನಿರ್ಲಕ್ಷ್ಯವಹಿಸುತ್ತಿದ್ದು, ರೈತ ವಿರೋಧಿ ಧೋರಣೆ ಅನುಸರಿಸುತ್ತಿದೆ ಯುವ ಕಾಂಗ್ರೆಸ್ ಆರೋಪಿಸಿದೆ.

ಈ ಹಿಂದೆ ಸಾಲಮನ್ನಾ ಬಗ್ಗೆ ಹೋರಾಟ ನಡೆಸಿದ್ದ ಬಿ.ಎಸ್.ಯಡಿಯೂರಪ್ಪರವರು ಇದೀಗ ಈ ವಿಚಾರವನ್ನೇ ಪ್ರಸ್ತಾಪ ಮಾಡದೆ ಮೌನವಾಗಿದ್ದಾರೆ. ಇದು ಸರಿಯಾದ ಕ್ರಮವಲ್ಲವಾಗಿದೆ. ತಕ್ಷಣವೇ ತಮ್ಮದೆ ಪಕ್ಷದ ಕೇಂದ್ರ ಸರ್ಕಾರದ ಜೊತೆ ಚರ್ಚೆ ನಡೆಸಿ ಸಾಲ ಮನ್ನಾಕ್ಕೆ ಕ್ರಮಕೈಗೊಳ್ಳಬೇಕು ಎಂದು ಸಂಘಟನೆ ಆಗ್ರಹಿಸಿದೆ.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News