ಪತ್ನಿಯನ್ನು ಕೊಂದ ಪತಿಗೆ ಕಠಿಣ ಜೀವಾವಧಿ ಶಿಕ್ಷೆ
ಮಡಿಕೇರಿ, ಜು.11: ಪತ್ನಿಯ ನಡತೆ ಬಗ್ಗೆ ಸಂಶಯಗೊಂಡು ಆಕೆಗೆ ಮಾರಣಾಂತಿಕವಾಗಿ ಥಳಿಸಿ ಕೊಲೆಗೈದ ಆರೋಪ ಸಾಕ್ಷ್ಯಾಧಾರಗಳಿಂದ ಧೃಡಪಟ್ಟ ಹಿನ್ನೆಲೆಯಲ್ಲಿ ಇಲ್ಲಿನ ನ್ಯಾಯಾಲಯವು ವ್ಯಕ್ತಿಯೊಬ್ಬನಿಗೆ ದಂಡ ಸಹಿತ ಕಠಿಣ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
ನಾಪೋಕ್ಲು ಸಮೀಪದ ಕೋಕೇರಿ ಗ್ರಾಮದ ಪಿ.ಎ. ಪಳಂಗಪ್ಪ ಎಂಬವರ ತೋಟದ ಲೈನ್ ಮನೆಯಲ್ಲಿ ವಾಸವಿದ್ದ ಜೇನು ಕುರುಬರ ಚಂದ್ರ ಯಾನೆ ಮರಿ ಎಂಬಾತ ತನ್ನ ಪತ್ನಿ ಜಯರೊಂದಿಗೆ ವಾಸವಾಗಿದ್ದು, 2016ರ ಜೂ.27ರಂದು ಪಳಂಗಪ್ಪ ಅವರು ದಂಪತಿಯನ್ನು ನಾಪೋಕ್ಲುವಿಗೆ ಕರೆದೊಯ್ದು ಮನೆ ಸಾಮಾಗ್ರಿಗಳನ್ನು ಖರೀದಿಸಿ ಕೊಟ್ಟು, ನಂತರ ವಾಪಾಸು ಲೈನ್ ಮನೆಗೆ ಬಿಟ್ಟಿದ್ದಾರೆ. ಆದರೆ ಮರುದಿನ ಬೆಳಗ್ಗೆ 7.30 ಗಂಟೆಗೆ ಪಳಂಗಪ್ಪ ಅವರು ಲೈನ್ ಮನೆಗೆ ಬಂದು ನೋಡಿದಾಗ ಜಯ ಸಂಶಯಾಸ್ಪದವಾಗಿ ಮೃತ ಪಟ್ಟಿದ್ದರಲ್ಲದೆ, ಪತಿ ಚಂದ್ರ ಮಾತ್ರ ಸ್ಥಳದಲ್ಲಿರಲಿಲ್ಲ.
ಇದನ್ನು ಗಮನಿಸಿದ ಪಳಂಗಪ್ಪ ಅವರು, ಅನುಮಾನಗೊಂಡು ಕೂಡಲೇ ನಾಪೋಕ್ಲು ಪೊಲೀಸ್ ಠಾಣೆಗೆ ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿದರು. 2016ರ ಜು.17ರಂದು ಆರೋಪಿಯನ್ನು ಪತ್ತೆ ಮಾಡಿ ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದಾಗ ಚಂದ್ರ ತನ್ನ ಪತ್ನಿ ಜಯ, ಕೂಲಿ ಕೆಲಸಕ್ಕೆ ಬರುತ್ತಿದ್ದ ಪರ ಪುರುಷರೊಂದಿಗೆ ಸಲುಗೆಯಿಂದ ವರ್ತಿಸುತ್ತಿದ್ದಳು. ಇದನ್ನು ಪ್ರಶ್ನಿಸಿದಾಗ ಆಕೆ ನಾನು ಯಾರ ಜೊತೆ ಬೇಕಾದರೂ ಹರಟೆ ಹೊಡೆಯುತ್ತೇನೆ. ಇದು ನಿನಗೆ ಸಂಬಂಧವಿಲ್ಲದ ವಿಷಯ ಎಂದು ತಿಳಿಸಿದ್ದಾಳೆನ್ನಲಾಗಿದ್ದು, ಈ ಬಗ್ಗೆ ಪತಿ ಪತ್ನಿಯ ನಡುವೆ ಮಾತಿನ ಚಕಮಕಿ ನಡೆದಾಗ ಕೋಪಗೊಂಡ ಚಂದ್ರ ಆಕೆಗೆ ಥಳಿಸಿದ್ದಲ್ಲದೆ, ದೊಣ್ಣೆಯಿಂದ ಹೊಡೆದು ಕೊಲೆ ಮಾಡಿರುವುದು ಬೆಳಕಿಗೆ ಬಂದಿತ್ತು.
ಆರೋಪಿಯ ವಿರುದ್ಧ ಕೊಲೆ ಆರೋಪದಡಿ ಸಲ್ಲಿಸಿದ ದೋಷಾರೋಪಣಾ ಪಟ್ಟಿಯ ವಿಚಾರಣೆ ನಡೆಸಿದ ಇಲ್ಲಿನ ಒಂದನೇ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶರಾದ ಡಿ. ಪವನೇಶ್ ಅವರು, ಆರೋಪಿ ಚಂದ್ರನು ಪತ್ನಿ ಜಯಳನ್ನು ಕೊಲೆ ಮಾಡಿರುವುದು ಸಾಕ್ಷ್ಯಾಧಾರಗಳಿಂದ ದೃಢಪಟ್ಟ ಹಿನ್ನಲೆಯಲ್ಲಿ ಆತನಿಗೆ ಕಠಿಣ ಜೀವಾವಧಿ ಶಿಕ್ಷೆಯೊಂದಿಗೆ 5 ಸಾವಿರ ರೂ.ಗಳನ್ನು ದಂಡವಾಗಿ ಪಾವತಿಸುವಂತೆ ತೀರ್ಪು ನೀಡಿದ್ದಾರೆ.
ಒಂದನೇ ಅಧಿಕ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ಸರ್ಕಾರಿ ಅಭಿಯೋಜಕಿ ಎಂ.ಕೃಷ್ಣವೇಣಿ ಅವರು ಸರಕಾರದ ಪರ ವಾದ ಮಂಡಿಸಿದರು.