ಹೊರ ರಾಜ್ಯದವರಿಗೆ ಸೀಟು ಹಂಚಿಕೆ ಖಂಡಿಸಿ ಜು.13ರಂದು ಪ್ರತಿಭಟನೆ
ಬೆಂಗಳೂರು, ಜು.11: ಕರ್ನಾಟಕದಲ್ಲಿ ವೈದ್ಯಕೀಯ ಸೀಟುಗಳ ಹಂಚಿಕೆಯಲ್ಲಿ ಕನ್ನಡಿಗರನ್ನು ಕಡೆಗಣಿಸಿ, ಹೊರ ರಾಜ್ಯದವರಿಗೆ ನೀಡಲು ಮುಂದಾಗಿರುವುದನ್ನು ಖಂಡಿಸಿ ಜು.13ರಂದು ನಗರದ ಮೈಸೂರು ಬ್ಯಾಂಕ್ ವೃತ್ತದಿಂದ ವೌರ್ಯ ವೃತ್ತದವರೆಗೆ ಕರ್ನಾಟಕ ವೈದ್ಯಕೀಯ ವಿದ್ಯಾರ್ಥಿಗಳು ಮತ್ತು ಯುವ ವೈದ್ಯರ ಸಂಘದ ವತಿಯಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.
ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕರ್ನಾಟಕ ವೈದ್ಯಕೀಯ ವಿದ್ಯಾರ್ಥಿಗಳು ಮತ್ತು ಯುವ ವೈದ್ಯರ ಸಂಘದ ಅಧ್ಯಕ್ಷ ಡಾ. ಭರತ್ ಕುಮಾರ್, ಎಂಬಿಬಿಎಸ್ ಮತ್ತು ಬಿಡಿಎಸ್ ಕೋರ್ಸ್‌ಗಳಿಗೆ ನೀಟ್ ಪದವಿಪೂರ್ವ ಕೌನ್ಸಿಲಿಂಗ್ ನಡೆಸಲಾಗುತ್ತದೆ. ಇದಕ್ಕೆ ದೇಶಾದ್ಯಂತ ಯಾವುದೇ ರಾಜ್ಯದವರು ಬೇಕಿದ್ದರೂ ಅರ್ಜಿ ಸಲ್ಲಿಸುವಂತೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಘೋಷಿಸಿದೆ ಎಂದು ಕಿಡಿಕಾರಿದರು.
ತಮಿಳುನಾಡು, ಆಂಧ್ರಪ್ರದೇಶ, ಉತ್ತರ ಪ್ರದೇಶ, ಮಹಾರಾಷ್ಟ್ರ ಸೇರಿದಂತೆ ಮುಂತಾದ ರಾಜ್ಯಗಳಲ್ಲಿ ತಮ್ಮ ರಾಜ್ಯದ ವಿದ್ಯಾರ್ಥಿಗಳಿಗೆ ಮಾತ್ರ ಎಂಬಿಬಿಎಸ್, ಬಿಡಿಎಸ್ ಕೋರ್ಸ್‌ಗಳಿಗೆ ಅರ್ಜಿ ಸಲ್ಲಿಸಲು ಮೊದಲ ಆದ್ಯತೆ ನೀಡಲಾಗುತ್ತಿದೆ. ಆದರೆ, ನಮ್ಮ ರಾಜ್ಯದಲ್ಲಿ ಮಾತ್ರ ಬೇರೆ ರಾಜ್ಯದ ವಿದ್ಯಾರ್ಥಿಗಳಿಗೆ ಮಣೆ ಹಾಕಲು ಮುಂದಾಗಿದ್ದಾರೆ. ಇದರಿಂದಾಗಿ ನೀಟ್ ಪರೀಕ್ಷೆಯಲ್ಲಿ ರ್ಯಾಂಕ್ ಪಡೆದ ಕನ್ನಡದ ವಿದ್ಯಾರ್ಥಿಗಳಿಗೂ ಕರ್ನಾಟಕದಲ್ಲಿ ವೈದ್ಯಕೀಯ ಸೀಟು ಸಿಗದಂತಾಗುತ್ತದೆ. ನಮ್ಮ ರಾಜ್ಯದಲ್ಲೂ ಅವಕಾಶವಿಲ್ಲದೆ, ಬೇರೆ ರಾಜ್ಯದಲ್ಲೂ ಕೋರ್ಸ್‌ಗೆ ಸೇರಲು ಸಾಧ್ಯವಾಗದೆ ವಿದ್ಯಾರ್ಥಿಗಳು ಬಹಳ ತೊಂದರೆ ಅನುಭವಿಸುವಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ನಮ್ಮ ರಾಜ್ಯದಲ್ಲಿ ಖಾಸಗಿ ಮತ್ತು ಸರಕಾರಿ ಕಾಲೇಜುಗಳಲ್ಲಿ ಸಾಕಷ್ಟು ವೈದ್ಯಕೀಯ ಸೀಟುಗಳಿವೆ. ಸರಕಾರಿ ಕಾಲೇಜುಗಳಲ್ಲಿ ನಮ್ಮ ರಾಜ್ಯದವರಿಗೆ ಶೇ. 85 ಸೀಟುಗಳನ್ನು ನೀಡಲಾಗ್ತುತದೆ. ಉಳಿದಿದ್ದು ಎಲ್ಲ ರಾಜ್ಯಗಳಲ್ಲಿ ಇರುವಂತೆ ರಾಷ್ಟ್ರಮಟ್ಟದ ಸೀಟುಗಳಾಗಿರುತ್ತವೆ. ಆದರೆ, ಖಾಸಗಿ ಕಾಲೇಜುಗಳಲ್ಲಿ ಶೇ.60 ಸೀಟುಗಳನ್ನು ಬೇರೆ ರಾಜ್ಯದವರಿಗೆ ನೀಡಲಾಗುತ್ತದೆ. ಕಳೆದ ವರ್ಷ 1900 ಎಂಡಿ, ಎಂಎಸ್ ಸೀಟುಗಳಲ್ಲಿ 400 ಸೀಟುಗಳನ್ನು ಹೊರರಾಜ್ಯದವರಿಗೆ ನೀಡಲಾಗಿತ್ತು. ಆ ಸೀಟುಗಳನ್ನು ನಮ್ಮವರಿಗೆ ನೀಡಿದ್ದರೆ ಇನ್ನೂ 400 ವೈದ್ಯರು ಸಿಗುತ್ತಿದ್ದರು. ಅಲ್ಲದೆ, ವಾರ್ಷಿಕವಾಗಿ ಸರಾಸರಿ ಒಂದು ಸಾವಿರ ವೈದ್ಯಕೀಯ ಸೀಟುಗಳನ್ನು ಹೊರ ರಾಜ್ಯದವರಿಗೆ ನೀಡುತ್ತಿರುವುದರಿಂದ ನಮ್ಮ ರಾಜ್ಯದ ಬಡ ವಿದ್ಯಾರ್ಥಿಗಳು ವೈದ್ಯಕೀಯ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ ಎಂದು ಅವರು ಹೇಳಿದರು.
ನಮ್ಮ ರಾಜ್ಯಕ್ಕೆ ಬಂದು ವಿದ್ಯಾಭ್ಯಾಸ ಮುಗಿಸಿಕೊಂಡು ಹೋಗುವ ಹೊರ ರಾಜ್ಯದ ವಿದ್ಯಾರ್ಥಿಗಳು ಅವರ ರಾಜ್ಯದಲ್ಲಿ ಕೆಲಸ ಮಾಡುತ್ತಾರೆ ಹೊರತು ಕರ್ನಾಟಕದ ರೋಗಿಗಳಿಗೆ ಸೇವೆ ಮಾಡುವುದಿಲ್ಲ. ಆದರೆ, ಸರಕಾರ ರಾಜ್ಯದಲ್ಲಿ ವೈದ್ಯರ ಕೊರತೆ ಇದೆ ಎಂದು ಸಬೂಬು ಹೇಳುತ್ತಿರುವುದು ಎಷ್ಟು ಸರಿ. ಹೀಗಾಗಿ ಮೊದಲು ನಮ್ಮ ರಾಜ್ಯದ ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸಿಕೊಟ್ಟಾಗ, ನಮ್ಮ ರಾಜ್ಯಕ್ಕಾಗಿ ಕೆಲಸ ಮಾಡುವ ವೈದ್ಯರು ಸೃಷ್ಟಿಯಾಗುತ್ತಾರೆ ಎಂದು ತಿಳಿಸಿದರು.
ಕರ್ನಾಟಕದಲ್ಲಿ ಅತಿ ಕಡಿಮೆಗೆ ವೈದ್ಯಕೀಯ ಶಿಕ್ಷಣ ಸಿಗುತ್ತಿರುವುದರಿಂದ ಬಾರಿ ಪ್ರಮಾಣದ ಬೇಡಿಕೆ ಹೆಚ್ಚಾಗಿದ್ದು, ವೈದ್ಯಕೀಯ ಶಿಕ್ಷಣಕ್ಕೆ ಅರ್ಜಿ ಸಲ್ಲಿಸುವವರ ಸಂಖ್ಯೆ ಜಾಸ್ತಿಯಾಗಿ ಸ್ಪರ್ಧೆ ಏರ್ಪಟ್ಟಿದೆ. ಹೀಗಾಗಿ ರಾಜ್ಯದಲ್ಲಿಯೇ ಹಲವಾರು ಪ್ರತಿಭಾವಂತರು ಹಣ ಪಾವತಿ ಮಾಡಿ ಶಿಕ್ಷಣ ಪಡೆಯಲು ಶಕ್ತರಿದ್ದು, ಅವರಿಗೆ ಅವಕಾಶ ನೀಡಬೇಕು. ಅನಂತರ ಉಳಿಕೆಯಾದರೆ ಮಾತ್ರ ಹೊರ ರಾಜ್ಯದವರಿಗೆ ಸೀಟುಗಳು ಹಂಚಿಕೆ ಮಾಡಬೇಕು ಎಂದು ಅವರು ಒತ್ತಾಯಿಸಿದರು. ಸುದ್ದಿಗೋಷ್ಠಿಯಲ್ಲಿ ವೈದ್ಯಕೀಯ ವಿದ್ಯಾರ್ಥಿ ಸಂಘಟನೆ ಸದಸ್ಯರು ಹಾಗೂ ವಿದ್ಯಾರ್ಥಿ ಪೋಷಕರು ಉಪಸ್ಥಿತರಿದ್ದರು.