ಕೆ.ಎಸ್.ಈಶ್ವರಪ್ಪ ಆಪ್ತನ ಅಪಹರಣ, ಹಲ್ಲೆ ಪ್ರಕರಣ: ಯಡಿಯೂರಪ್ಪ ಆಪ್ತನ ವಿಚಾರಣೆ

Update: 2017-07-11 16:36 GMT

ಬೆಂಗಳೂರು, ಜು.11: ವಿಧಾನ ಪರಿಷತ್ ಪ್ರತಿಪಕ್ಷದ ನಾಯಕ ಈಶ್ವರಪ್ಪ ಅವರ ಆಪ್ತ ಸಹಾಯಕ ಎಸ್.ವಿನಯ್‌ನನ್ನು ಅಪಹರಿಸಿ ಹಲ್ಲೆ ನಡೆಸಿ ಪರಾರಿಯಾಗಿದ್ದ ಪ್ರಕರಣ ಸಂಬಂಧ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯೂಡಿಯೂರಪ್ಪ ಆಪ್ತ ಎನ್ನಲಾದ ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಅರಸ್ ಎಂಬಾತನನ್ನು ಪೊಲೀಸರು ವಿಚಾರಣೆಗೊಳಪಡಿಸಿದರು.

 ಮಂಗಳವಾರ ನಗರದ ಮಹಾಲಕ್ಷ್ಮೀ ಲೇಔಟ್ ಪೊಲೀಸ್ ಠಾಣೆಯಲ್ಲಿ ಇನ್ಸ್‌ಪೆಕ್ಟರ್ ಸೇರಿ ನಾಲ್ವರು ಸಿಬ್ಬಂದಿ ರಾಜೇಂದ್ರ ಅರಸ್‌ನನ್ನು ವಿಚಾರಣೆ ನಡೆಸಿದರು ಎಂದು ಮೂಲಗಳು ತಿಳಿಸಿವೆ. ಪ್ರಕರಣ ಸಂಬಂಧ ಈಗಾಗಲೇ ನಾಲ್ವರನ್ನು ಪೊಲೀಸರು ಬಂಧಿಸಿದ್ದು, ವಿಚಾರಣೆಯ ವೇಳೆ ಆರೋಪಿಗಳು, ರಾಜೇಂದ್ರ ಅರಸ್ ಆಣತಿಯಂತೆ ನಾವು ವಿನಯ್ನನ್ನು ಅಪಹರಣ ಮಾಡಲು ಮುಂದಾಗಿದ್ದು ಬಾಯಿಬಿಟ್ಟಿರುವ ಹಿನ್ನಲೆಯಲ್ಲಿ ರಾಜೇಂದ್ರ ಅರಸ್‌ನನ್ನು ಇಂದು ವಿಚಾರಣೆಗೆ ಕರೆದಿದ್ದವು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪೊಲೀಸರ ಹುಡುಕಾಟದ ಬೆನ್ನಲ್ಲೇ ನ್ಯಾಯಾಲಯದಿಂದ ರಾಜೇಂದ್ರ ಅರಸ್ ಜಾಮೀನು ಪಡೆದುಕೊಂಡಿರುವುದಾಗಿ ತಿಳಿದುಬಂದಿದ್ದು, ಈ ಸಂಬಂಧ ಮೊಕದ್ದಮೆ ದಾಖಲಿಸಿಕೊಂಡಿರುವ ಮಹಾಲಕ್ಷ್ಮೀ ಲೇಔಟ್ ಠಾಣಾ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

ಏನಿದು ಪ್ರಕರಣ: ಮೇ.11ರಂದು ಮಹಾಲಕ್ಷ್ಮೀ ಲೇಔಟ್ ಬಳಿ ಎಸ್.ವಿನಯ್ ಅವರನ್ನು ಕಾರಿನಲ್ಲಿ ಬಂದ ದುಷ್ಕರ್ಮಿಗಳ ತಂಡ ಏಕಾಏಕಿ ಸುತ್ತುವರಿದು ಅಪಹರಿಸಲು ಯತ್ನಿಸಿತ್ತು. ಬೈಕ್‌ನಲ್ಲಿ ಬಂದಿದ್ದ ಇಬ್ಬರು ವಿನಯ್ ಮೇಲೆ ಹಲ್ಲೆ ನಡೆಸಿದ್ದರು. ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿತ್ತು.

ಅಪಹರಣ ಪ್ರಕರಣ ಸಂಬಂಧ ಪೊಲೀಸರು ತನಿಖೆ ಚುರುಕುಗೊಳಿಸಿರುವುದು ಒಳ್ಳೆಯ ಬೆಳವಣಿಗೆ. ಅಲ್ಲದೆ, ಬಿ.ಎಸ್.ಯಡಿಯೂರಪ್ಪ ಅವರ ಆಪ್ತ ಎನ್ನಲಾದ ರಾಜೇಂದ್ರ ಅರಸ್‌ನ ಕೈವಾಡ ಇರುವುದು ಗೊತ್ತಿಲ್ಲ. ತನಿಖೆಯಾಗಲಿ, ಇವರ ಹಿಂದೆ ಯಾರಿದ್ದಾರೆ ಎಂದು ಗೊತ್ತಾಗಬೇಕು.

-ಎಸ್.ವಿನಯ್, ಕೆ.ಎಸ್.ಈಶ್ವರಪ್ಪ ಅವರ ಆಪ್ತ ಸಹಾಯಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News