ಮಲಯಾಳಂ ಚಿತ್ರೋದ್ಯಮದ ದುರಂತ

Update: 2017-07-11 18:38 GMT

ತನ್ನ ಸದಭಿರುಚಿಯ ಚಿತ್ರಗಳ ಕಾರಣದಿಂದಲೇ ಇಂದು ಮಲಯಾಳಂ ಭಾಷೆ ರಾಷ್ಟ್ರಮಟ್ಟದಲ್ಲಿ ಗುರುತಿಸಲ್ಪಡುತ್ತಿದೆ. ಬಂಗಾಳಿ ಭಾಷೆಯ ನಂತರ ಕಲಾತ್ಮಕ ಚಿತ್ರಗಳಿಗಾಗಿ ದಕ್ಷಿಣ ಭಾರತದಲ್ಲಿ ಕರ್ನಾಟಕ ಬಿಟ್ಟರೆ ಕೇರಳದ ಕಡೆಗೇ ಜನರು ಕಣ್ಣು ಹೊರಳಿಸುತ್ತಾರೆ. ಒಂದು ಕಾಲದಲ್ಲಿ ಮಲಯಾಳಂ ಸಿನೆಮಾಗಳೆಂದರೆ ‘ಅಶ್ಲೀಲ ಸಿನೆಮಾ’ ಎಂಬ ಕಲ್ಪನೆಯಿತ್ತು. ಚಿತ್ರೋದ್ಯಮದ ಬೆಳವಣಿಗೆಯ ಆರಂಭದಲ್ಲಿ ಇಂತಹದೊಂದು ಕುಖ್ಯಾತಿಗೆ ಮಲಯಾಳಂ ಚಿತ್ರೋದ್ಯಮ ಸಿಲುಕಿಕೊಂಡಿತ್ತು.

ದಕ್ಷಿಣ ಭಾರತದಲ್ಲಿ ಮಲಯಾಳಂನ ನಟಿಯರ ಕುರಿತಂತೆ ಒಂದು ವ್ಯಂಗ್ಯ ಭಾವ ನೆಲೆಗೊಂಡಿತ್ತು. ಆದರೆ ಯಾವಾಗ ಮಲಯಾಳಂನಲ್ಲಿ ಸೃಜನಶೀಲ ಚಟುವಟಿಕೆಗಳು ತೀವ್ರತೆಯನ್ನು ಪಡೆಯತೊಡಗಿದವೋ, ಆಗ ಅಶ್ಲೀಲ ಚಿತ್ರಗಳು ಹಿನ್ನೆಲೆಗೆ ಸರಿದು ಕಲಾತ್ಮಕ ಚಿತ್ರಗಳು ಮುನ್ನೆಲೆಗೆ ಬಂದವು. ಶಶಿ, ಅಡೂರುರಂತಹ ನಿರ್ದೇಶಕರಿಂದಾಗಿ ಮಲಯಾಳಂ ಚಿತ್ರಗಳು ಘನತೆಯನ್ನು ಪಡೆದುಕೊದುಕೊಳ್ಳತೊಡಗಿದವು. ಪ್ರೇಮ್    

ನಝೀರ್ ಕಾಲಘಟ್ಟದ ಆನಂತರದಲ್ಲಿ ಮಮ್ಮುಟ್ಟಿ ಮತ್ತು ಮೋಹನ್‌ಲಾಲ್‌ರಂತಹ ಶ್ರೇಷ್ಠ ನಟರಿಂದಾಗಿ ಮಲಯಾಳಂ ಚಿತ್ರರಂಗದ ವರ್ಚಸ್ಸು ಇನ್ನಷ್ಟು ಹೆಚ್ಚಿತು. ಬರೇ ಗಂಭೀರ ಚಿತ್ರಗಳಿಗಾಗಿ ಹೆಸರು ಪಡೆದಿದ್ದ ಮಲಯಾಳಂ ಚಿತ್ರ, ಕಲಾತ್ಮಕತೆ ಮತ್ತು ಕಮರ್ಶಿಯಲ್ ನಡುವೆ ಒಂದು ಸೇತುವೆಯನ್ನು ಕಟ್ಟಿಕೊಂಡಿತು. ಅತ್ಯುತ್ತಮ ನಿರ್ದೇಶಕರು, ಗಂಭೀರ ಮತ್ತು ಸಾಮಾನ್ಯ ಪ್ರೇಕ್ಷಕರ ನಡುವಿನ ಗೋಡೆಯನ್ನು ಕೆಡವಿ, ಮನರಂಜನೆ ಮತ್ತು ಕಲಾತ್ಮಕತೆಯ ನಡುವೆ ಸಮನ್ವಯವನ್ನು ಸ್ಥಾಪಿಸಿದರು. ಪರಿಣಾಮವಾಗಿ ಸಂದೇಶ ಮತ್ತು ಮನರಂಜನೆ ಎರಡೂ ಉಳ್ಳ ಸದಭಿರುಚಿಯ ಚಿತ್ರಗಳು ಮಲಯಾಳಂನಲ್ಲಿ ನಿರ್ಮಾಣಗೊಳ್ಳ ತೊಡಗಿದವು.

ಮಲಯಾಳಂ ಸಿನೆಮಾದ ಅತೀ ದೊಡ್ಡ ಹೆಗ್ಗಳಿಕೆಯೆಂದರೆ ಅದು ವಾಸ್ತವಕ್ಕೆ ಹೆಚ್ಚು ಹತ್ತಿರವಾಗಿರುವುದು. ಸಿನೆಮಾವೆಂದರೆ ರಮ್ಯ, ರೋಚಕ ಮೆಲೋಡ್ರಾಮಗಳಿಂದ ಕಂಗೊಳಿಸುತ್ತಿರಬೇಕು ಎನ್ನುವ ಸಿದ್ಧ ಸೂತ್ರಗಳನ್ನು ಮುರಿದು, ತಳಸ್ತರದ ಬದುಕನ್ನು ವಸ್ತುವಾಗಿಟ್ಟುಕೊಂಡು, ಅವರ ಮ್ಯಾನರಿಸಂಗಳನ್ನು ಬಳಸಿಕೊಂಡು ಮಲಯಾಳಂ ಚಿತ್ರರಂಗ ಬೆಳೆಯಿತು. ಅದ್ಭುತ ನಿರ್ದೇಶಕರು, ನಟರು, ಬರಹಗಾರರ ಕಾರಣದಿಂದ ತನ್ನ ಹಿಂದಿನ ಎಲ್ಲ ಕಳಂಕವನ್ನೂ ತೊಳೆದು ಮಲಯಾಳಂ ಚಿತ್ರವೆಂದರೆ ಸದಭಿರುಚಿಯ ಚಿತ್ರ ಎನ್ನುವ ಬ್ರಾಂಡ್‌ನ್ನು ರಾಷ್ಟ್ರಮಟ್ಟದಲ್ಲಿ ತನ್ನದಾಗಿಸಿಕೊಂಡಿತು.

ಇಂದು ಮಲಯಾಳಂ ಚಿತ್ರಗಳಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರೇಕ್ಷಕರಿದ್ದಾರೆ. ಕಡಿಮೆ ಬಜೆಟ್‌ನಲ್ಲಿ ಅಪಾರ ಹಣ ಸಂಪಾದಿಸುವ ಉದ್ಯಮವಾಗಿ ಮಲಯಾಳ ಸಿನೆಮಾ ರಂಗ ಪರಿವರ್ತನೆಗೊಂಡಿದೆ. ಆದರೆ ಚಿತ್ರೋದ್ಯಮ ತನ್ನ ಸೃಜನಶೀಲ ಉದ್ದೇಶವನ್ನು ಸಂಪೂರ್ಣ ಮರೆತು, ಹಣ ಸಂಪಾದಿಸುವ ದಂಧೆಯಾಗಿ ಪರಿವರ್ತನೆಯಾದಾಗ ಅದು ಹೇಗೆ ಒಳ ಹೊರಗೆ ಸರ್ವನಾಶವಾಗಬಹುದು ಎನ್ನುವುದಕ್ಕೂ ಇದೀಗ ಮಲಯಾಳಂ ಚಿತ್ರರಂಗವೇ ಉದಾಹರಣೆಯಾಗಿ ಮಾಧ್ಯಮಗಳಲ್ಲಿ ಚರ್ಚೆಗೊಳಗಾಗುತ್ತಿದೆ.

ಒಂದು ಕಾಲದಲ್ಲಿ, ಸಿನೆಮಾದ ಒಳಗೆ ನಡೆಯುತ್ತಿರುವ ಅಶ್ಲೀಲ ಮತ್ತು ಪಾತಕ ದೃಶ್ಯಗಳು ಇದೀಗ ಸಿನೆಮಾದ ಹೊರಗೆ ಕಾಣಿಸಿಕೊಳ್ಳುವ ಮೂಲಕ ಮಲಯಾಳಂ ಚಿತ್ರೋದ್ಯಮ ತೀವ್ರ ಮುಜುಗರಕ್ಕೆ ಸಿಲುಕಿಕೊಂಡಿದೆ. ತಿಂಗಳುಗಳ ಹಿಂದೆ, ಓರ್ವ ಖ್ಯಾತ ದಕ್ಷಿಣ ಭಾರತೀಯ ನಟಿಯ ಮೇಲೆ ದುಷ್ಕರ್ಮಿಗಳಿಂದ ಅತ್ಯಾಚಾರ ನಡೆಯಿತು. ಆದರೆ ಅತ್ಯಂತ ಆಘಾತಕಾರಿ ಅಂಶವೆಂದರೆ ಈ ಅತ್ಯಾಚಾರ ನಡೆದಿರುವುದರ ಹಿಂದೆ ಒಬ್ಬ ಖ್ಯಾತ ನಟನಿದ್ದಾನೆ ಎನ್ನುವುದು ಬೆಳಕಿಗೆ ಬಂತು. ನಟಿಯ ಮೇಲೆ ನಡೆದಿರುವ ಅತ್ಯಾಚಾರ ಆತನ ಸೇಡಿನ ಕ್ರಮವಾಗಿದೆ ಎನ್ನುವುದು ಹೊರ ಬೀಳುತ್ತಿದ್ದಂತೆಯೇ ಮಲಯಾಳಂ ಚಿತ್ರರಂಗ ಸಿಲುಕಿಕೊಂಡಿರುವ ಪಾತಕ ಸನ್ನಿವೇಶದ ಒಂದೊಂದೇ ವಿವರಗಳು ಮುನ್ನೆಲೆಗೆ ಬರತೊಡಗಿದವು.

ಮಮ್ಮುಟ್ಟಿ ಮತ್ತು ಮೋಹನ್ ಲಾಲ್‌ರಂತಹ ಶ್ರೇಷ್ಠ ನಟರ ಆನಂತರ ಹೊಸತೊಂದು ತಲೆಮಾರು ಮಲಯಾಳಂ ಚಿತ್ರೋದ್ಯಮಕ್ಕೆ ಕಾಲಿಟ್ಟವು. ಹಾಸ್ಯಚಿತ್ರಗಳಿಗೆ ಜೀವ ಕೊಡುವ ಮೂಲಕ ಇವರೆಲ್ಲ ಸುಂದರ ಮೈಕಟ್ಟು ಇಲ್ಲದಿದ್ದರೂ ಜನಸಾಮಾನ್ಯರಿಗೆ ಹತ್ತಿರವಾಗತೊಡಗಿದರು. ಇಂತಹ ಕಾಲಘಟ್ಟದಲ್ಲಿ ಬಂದ ಪ್ರತಿಭಾವಂತ ನಟ ದಿಲೀಪ್. ಆರಂಭದಲ್ಲಿ ಒಬ್ಬ ಮಿಮಿಕ್ರಿ ಪಟುವಾಗಿ ಗುರುತಿಸಿಕೊಂಡಿದ್ದ ಈತ ಬಳಿಕ, ಖ್ಯಾತ ನಟರ ಜೊತೆಗೆ ಸಹಕಲಾವಿದನಾಗಿ ಕಾಣಿಸಿಕೊಂಡರು. ಬಳಿಕ ತನ್ನ ಪ್ರತಿಭೆಯ ಕಾರಣದಿಂದಲೇ ನಾಯಕ ಪಟ್ಟಕ್ಕೇರಿದರು.

ಅಂಗವಿಕಲ, ಹೆಣ್ಣಿಗ, ಮುಗ್ಧ, ಹುಚ್ಚ ಮೊದಲಾದ ವೈವಿಧ್ಯ ಪಾತ್ರಗಳ ಮೂಲಕ ಮಲಯಾಳಂ ಚಿತ್ರರಂಗದಲ್ಲಿ ತನ್ನದೇ ಸ್ಥಾನವನ್ನು ಕಾಯ್ದುಕೊಂಡರು. ಕಲಾವಿದ ತನ್ನೊಳಗಿನ ಸೃಜನಶೀಲತೆ, ಕಲೆಯ ಘನತೆಯನ್ನು ಮರೆತು, ನಿಧಾನಕ್ಕೆ ಅದು ನೀಡುವ ವರ್ಚಸ್ಸು, ಹಣ, ಜನಪ್ರಿಯತೆಗೆ ಬಲಿಯಾದರೆ ಆತನ ಕಲೆಯ ಹೊರಗಿನ ವ್ಯವಹಾರಗಳ ಕಡೆಗೆ ಆಸಕ್ತನಾಗುತ್ತಾನೆ. ಮಮ್ಮುಟ್ಟಿ, ಮೋಹನ್‌ಲಾಲ್‌ರಂತಹ ಹಿರಿಯ ನಟರಿಗೆ ಹೋಲಿಸಿದರೆ ಏನೇನೂ ಅಲ್ಲದ ಈ ಪುಡಿ ನಟ, ನಿಧಾನಕ್ಕೆ ಚಿತ್ರೋದ್ಯಮದ ಹೊರಗಿನ ವ್ಯವಹಾರಗಳ ಮೇಲೆ ನಿಯಂತ್ರಣವನ್ನು ಸಾಧಿಸುತ್ತಾ ಅಂತಿಮವಾಗಿ, ಇಡೀ ಉದ್ಯಮವನ್ನು ನಿಯಂತ್ರಿಸುವ ಶಕ್ತಿಯಾದುದು ಒಂದು ಅಚ್ಚರಿಯೇ ಸರಿ.

ಹಣವಂತರು, ಗೂಂಡಾಗಳು ಹಾಗೂ ತಮ್ಮ ಇತರ ಸಹೋದ್ಯೋಗಿಗಳ ಶಕ್ತಿಯನ್ನು ಬಳಸಿಕೊಂಡು ಮಲಯಾಳಂ ಚಿತ್ರರಂಗಕ್ಕೆ ಅಕ್ಷರಶಃ ದಿಲೀಪ್ ಒಂದು ತಲೆನೋವಾಗಿ ಪರಿಣಮಿಸಿದರು. ಕಲಾವಿದರ ಸಂಘಟನೆಯಾಗಿರುವ ‘ಅಮ್ಮ’ದ ಚುಕ್ಕಾಣಿಯನ್ನು ಕೈಯೊಳಗಿಟ್ಟು, ನಿರ್ದೇಶಕರು, ನಿರ್ಮಾಪಕರನ್ನು ಬ್ಲಾಕ್‌ಮೇಲ್ ಮಾಡತೊಡಗಿದ್ದರು. ಅದೆಷ್ಟೇ ದೊಡ್ಡ ನಿರ್ದೇಶಕರು, ನಿರ್ಮಾಪಕರೂ ಈತನ ವಿರುದ್ಧ ಬಾಯಿ ತೆರೆಯದಂತಹ ಸ್ಥಿತಿ ಚಿತ್ರೋದ್ಯಮದೊಳಗೆ ನಿರ್ಮಾಣವಾಗಿ ಬಿಟ್ಟಿತು. ಇದರಿಂದಾಗಿ ಒಳ್ಳೆಯ ಸಿನೆಮಾ ಮಾಡಬೇಕು ಎಂದು ಬಯಸುವ ನಿರ್ದೇಶಕರಲ್ಲಿ ಹಲವರು ತೊಂದರೆ ಅನುಭವಿಸುವಂತಹ ಸ್ಥಿತಿ ಬಂತು.

ಯಾವ ಚಿತ್ರದಲ್ಲಿ ಯಾರು ನಟಿಸಬೇಕು, ಯಾರು ಕತೆ ಬರೆಯಬೇಕು ಎನ್ನುವುದನ್ನೂ ನಿಯಂತ್ರಿಸುವ ಮಟ್ಟಕ್ಕೆ ದಿಲೀಪ್ ತಲುಪಿದ್ದರು ಎಂದು ಆರೋಪಿಸಲಾಗಿದೆ. ಸೃಜನಶೀಲ ಮಾಧ್ಯಮವೊಂದು ಹಣಗಳಿಸುವ ದಂಧೆಯಾಗಿ ರೂಪ ಪಡೆದಾಗ ಅದು ಹೇಗೆ ಒಬ್ಬ ಕಲಾವಿದನನ್ನು ನಾಶ ಮಾಡಬಹುದು ಎನ್ನುವುದಕ್ಕೆ ದಿಲೀಪ್ ಅತ್ಯುತ್ತಮ ಉದಾಹರಣೆ.

ಬಾಲಿವುಡ್‌ನ್ನು ಭೂಗತ ಪಾತಕಿಗಳು ನಿಯಂತ್ರಿಸುವುದನ್ನು ನಾವು ಕಂಡಿದ್ದೇವೆ. ಆದರೆ ಒಬ್ಬ ಕಲಾವಿದನೇ ತನ್ನ ಗೆರೆಯನ್ನು ದಾಟಿದಾಗ ಹೇಗೆ ಸ್ವತಃ ಚಿತ್ರೋದ್ಯಮಕ್ಕೆ ಸಮಸ್ಯೆಯಾಗಬಲ್ಲ ಎನ್ನುವುದಕ್ಕೆ ದಿಲೀಪ್ ಉದಾಹರಣೆಯಾಗಿದ್ದಾನೆ. ಬಹುಶಃ ಇದರ ವಿರುದ್ಧ ಮಮ್ಮುಟ್ಟಿ, ಮೋಹನ್‌ಲಾಲ್‌ರಂತಹ ಹಿರಿಯ ಕಲಾವಿದರು ಈ ಹಿಂದೆಯೇ ಮಧ್ಯ ಪ್ರವೇಶಿಸಿದ್ದರೆ, ಒಬ್ಬ ನಟಿ ಮಧ್ಯ ರಾತ್ರಿ ಸಾಮೂಹಿಕ ಅತ್ಯಾಚಾರಕ್ಕೊಳಗಾಗುವ ಪರಿಸ್ಥಿತಿ ನಿರ್ಮಾಣವಾಗುತ್ತಿರಲಿಲ್ಲ.

ಇನ್ನಾದರೂ ಮಲಯಾಳ ಚಿತ್ರೋದ್ಯಮ ಇಂತಹ ಮಾಫಿಯಾಗಳ ಹಿಡಿತದಿಂದ ಹೊರಬಂದು, ಮತ್ತೆ ಸೃಜನಶೀಲತೆಗೆ ಮುಖಮಾಡಬೇಕಾಗಿದೆ. ಹಾಗೆಯೇ ದಿಲೀಪ್ ಒಂದು ವೇಳೆ ಅಪರಾಧಿಯಾಗಿದ್ದರೆ ಆತನಿಗೆ ಮತ್ತು ಜೊತೆಗಾರರಿಗೆ ಕಠಿಣ ಶಿಕ್ಷೆಯಾಗಬೇಕು. ಹಾಗೂ ಅವರನ್ನು ಚಿತ್ರೋದ್ಯಮದಿಂದ ಶಾಶ್ವತ ಹೊರಗಿಡಬೇಕಾಗಿದೆ. ಸದ್ಯದ ಕಳಂಕದಿಂದ ಚಿತ್ರೋದ್ಯಮ ಆದಷ್ಟು ಬೇಗ ಹೊರಬಂದು ಇನ್ನಷ್ಟು ಹೊಸತನದ ಚಿತ್ರಗಳನ್ನು ನೀಡಲು ನಿರ್ದೇಶಕರಿಗೆ ಸಾಧ್ಯವಾಗಲಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News