×
Ad

ನಿವೇಶನದ ಹಕ್ಕಿಗಾಗಿ ಒತ್ತಾಯ: ಆ.20 ರಂದು ಮತ್ತೊಂದು ಸುತ್ತಿನ ಹೋರಾಟ

Update: 2017-07-12 17:34 IST

ಮಡಿಕೇರಿ, ಜು.12: ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿಯ ಹೋರಾಟದ ಫಲವಾಗಿ ದಿಡ್ಡಳ್ಳಿ ನಿರಾಶ್ರಿತರಿಗೆ ಆಶ್ರಯ ದೊರೆತಿದೆ.. ಇದೇ ರೀತಿ ಇನ್ನೂ ಅನೇಕ ನಿವೇಶನ ರಹಿತರು ಕೊಡಗು ಜಿಲ್ಲೆಯಲ್ಲಿದ್ದು, ಎಲ್ಲರಿಗೂ ಭೂಮಿಯ ಹಕ್ಕು ನೀಡಬೇಕೆಂದು ಒತ್ತಾಯಿಸಿ ಆ.20 ರಂದು ಮತ್ತೊಂದು ಸುತ್ತಿನ ಹೋರಾಟವನ್ನು ಆರಂಭಿಸುವುದಾಗಿ ಸಮಿತಿಯ ಜಿಲ್ಲಾ ಸಂಚಾಲಕರಾದ ಡಿ.ಎಸ್.ನಿರ್ವಾಣಪ್ಪ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮಿತಿಯು ದಿಡ್ಡಳ್ಳಿಯಲ್ಲಿ ನಡೆಸಿದ ಹೋರಾಟಕ್ಕೆ ಫಲ ಸಿಕ್ಕಿದ್ದು, ಇತರ ಒಂದು ಸಾವಿರ ನಿವೇಶನ ರಹಿತರಿಗೂ ನಿವೇಶನ ನೀಡಲು ಜಿಲ್ಲಾಡಳಿತ ಮುಂದಾಗಿರುವುದು ಮತ್ತು ಇದಕ್ಕಾಗಿ 60 ಏಕರೆ ಭೂಮಿ ಗುರುತಿಸಿರುವುದು ಸ್ವಾಗತಾರ್ಹವೆಂದರು. ಆದರೆ, ಚೆರಿಯಪರಂಬು, ಪಾಲೇಮಾಡು, ನಾಗರಹೊಳೆ, ಯಡವನಾಡು, ಬಾಳೆಗುಂಡಿ ವ್ಯಾಪ್ತಿಯಲ್ಲಿ ನಡೆಯುತ್ತಿರುವ ನಿವೇಶನ ರಹಿತರ ಹೋರಾಟಕ್ಕೆ ಇನ್ನೂ ಫಲ ಸಿಕ್ಕಿಲ್ಲ. ಇದೇ ಮಾದರಿಯ 20ಕ್ಕೂ ಹೆಚ್ಚು ಪ್ರಕರಣಗಳು ಜಿಲ್ಲೆಯ ಮೂರು ತಾಲ್ಲೂಕುಗಳಲ್ಲಿವೆ. ಯಡವನಾಡಿನಲ್ಲಿ 25 ಆದಿವಾಸಿ ಕುಟುಂಬಗಳಿಗೆ ತಲಾ 3 ಏಕರೆ ಭೂಮಿಯನ್ನು ಹಂಚಿಕೆ ಮಾಡಿ, ನಕ್ಷೆ ಕೂಡ ತಯಾರಾಗಿದೆ.

ಈ ಜಾಗದಲ್ಲಿ ಆದಿವಾಸಿಗಳು ಗುಡಿಸಲುಗಳನ್ನು ನಿರ್ಮಿಸಿಕೊಳ್ಳಲು ಅರಣ್ಯ ಇಲಾಖೆ ಅಡ್ಡಿ ಪಡಿಸುತ್ತಿದೆ. ಇದು ಅರಣ್ಯ ಪ್ರದೇಶವೆಂದು ಹೇಳಿಕೊಳ್ಳುತ್ತಿರುವ ಅರಣ್ಯ ಇಲಾಖೆ, ಸಸಿಗಳನ್ನು ನೆಡಲು ಮುಂದಾಗಿದೆ. ಸರ್ಕಾರ ನ್ಯಾಯಯುತವಾಗಿ ಗುರುತಿಸಿರುವ ಪ್ರದೇಶದಲ್ಲಿ ನಿವೇಶನ ರಹಿತರಿಗೆ ನಿವೇಶನ ನೀಡದಿದ್ದಲ್ಲಿ ಮತ್ತು ಅರಣ್ಯ ಇಲಾಖೆ ಕಾನೂನು ರೀತಿಯಲ್ಲಿ ನಡೆದುಕೊಳ್ಳದಿದ್ದಲ್ಲಿ ಗಿಡಗಳನ್ನು ಕಿತ್ತೆಸೆದು ಗುಡಿಸಲುಗಳನ್ನು ನಿರ್ಮಿಸಿಕೊಳ್ಳಬೇಕಾಗುತ್ತದೆ ಎಂದು ನಿರ್ವಾಣಪ್ಪ ಎಚ್ಚರಿಕೆ ನೀಡಿದರು.

ನಿವೇಶನ ರಹಿತರ ಬೇಡಿಕೆಗಳನ್ನು ಮುಂದಿಟ್ಟು, ಜು.20 ರಂದು ಜಿಲ್ಲಾ ಮಟ್ಟದ ಬೃಹತ್ ಸಮಾವೇಶವನ್ನು ರಾಜ್ಯ ವ್ಯಾಪಿ ಹಮ್ಮಿಕೊಳ್ಳಲಾಗುವುದೆಂದ ಅವರು, ಸಮಿತಿಯ ಹೋರಾಟವನ್ನು ಹತ್ತಿಕ್ಕಲು ಕೆಲವರು ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದರು. ಕೊಡಗು ಜಿಲ್ಲೆಯಲ್ಲಿ ಜೀತ ಪದ್ಧತಿ ಇಲ್ಲವೆಂದು ಜಿಲ್ಲಾ ಪಂಚಾಯತ್ ಹಾಗೂ ಇನ್ನಿತರ ಸಭೆಗಳಲ್ಲಿ ಪ್ರತಿಬಿಂಬಿಸಲಾಗುತ್ತಿದೆ. ಜೀತ ಇರುವುದನ್ನು ನಾವು ಸಾಬೀತುಪಡಿಸಲು ಸಿದ್ಧರಿದ್ದೇವೆ. ಜೀತ ಇಲ್ಲ ಎಂದು ಹೇಳುತ್ತಿರುವವರು ಬಹಿರಂಗ ಚರ್ಚೆಗೆ ಬರಲಿ ಎಂದು ನಿರ್ವಾಣಪ್ಪ ಸವಾಲು ಹಾಕಿದರು.

ಸಮಿತಿಯ ಪ್ರಮುಖರು ಹಾಗೂ ಎಸ್‌ಡಿಪಿಐ ಜಿಲ್ಲಾಧ್ಯಕ್ಷ ಅಮಿನ್ ಮೊಹಿಸಿನ್ ಮಾತನಾಡಿ, ನಿವೇಶನ ರಹಿತರಿಗೆ ಭೂಮಿ ಹಂಚಲು ಎದುರಾಗಿರುವ ವಿವಾದ ಮತ್ತು ಗೊಂದಲವನ್ನು ಬಗೆಹರಿಸಲು ಹೈ ಪವರ್ ಸಮಿತಿಯನ್ನು ಹಿರಿಯ ಅಧಿಕಾರಿಗಳ ನೇತೃತ್ವದಲ್ಲಿ ರಚಿಸುವಂತೆ ಸರ್ಕಾರಕ್ಕೆ ಸಲಹೆ ನೀಡಲಾಗಿತ್ತು. ಆದರೆ ಈ ಬೇಡಿಕೆ ಇನ್ನೂ ಕೂಡ ಈಡೇರಿಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿದರು.

ಭೂಮಿಯ ಹಕ್ಕಿಗಾಗಿ ಒತ್ತಾಯಿಸಿ ಇತ್ತೀಚೆಗೆ ಬೆಂಗಳೂರಿನಲ್ಲಿ 9 ದಿನಗಳ ಕಾಲ ಹೋರಾಟ ನಡೆಸಲಾಗಿತ್ತು. ಜೈಲು ಭರೋ ಹೋರಾಟಕ್ಕೂ ನಿವೇಶನ ರಹಿತರು ಮುಂದಾಗಿದ್ದರು. ಈ ಸಂದರ್ಭ ರಾಜ್ಯ ವ್ಯಾಪಿ ಇರುವ ಭೂಮಿಯ ಹಕ್ಕಿನ 198 ಪ್ರಕರಣಗಳನ್ನು ಬಗೆಹರಿಸುವಂತೆ ಕಂದಾಯ ಸಚಿವರಲ್ಲಿ ಕೇಳಿಕೊಳ್ಳಲಾಗಿತ್ತು. ಅಲ್ಲದೆ, ಹೈಪವರ್ ಸಮಿತಿಯನ್ನು ರಚಿಸುವಂತೆ ಮನವಿ ಮಾಡಲಾಗಿತ್ತು. ಸಮಿತಿ ರಚನೆಗೆ ಕ್ಯಾಬಿನೆಟ್‌ನಲ್ಲೆ ವಿರೋಧವಿದೆ ಎಂದು ತಿಳಿದು ಬಂದಿದ್ದು, ಆ.20 ರಂದು ಸಮಿತಿ ರಚನೆಗಾಗಿ ಒತ್ತಾಯಿಸಿ ಪ್ರತಿಭಟನೆ ನಡೆಸಲಾಗುವುದು ಎಂದರು.

 ಸುದ್ದಿಗೋಷ್ಠಿಯಲ್ಲಿ ಆದಿವಾಸಿ ಮುಖಂಡ ಸುರೇಶ್, ಚೆರಿಯಪರಂಬುವಿನ ಶರೀಫ್ ಹಾಗೂ ಫೀರ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News