ಜುಲೈ14: ಕೂರ್ಗ್ ಇನ್‌ಸ್ಟಿಟ್ಯೂಟ್ ಆಫ್ ಹಾಸ್ಪಿಟ್ಯಾಲಿಟಿ ಕಾಲೇಜು ಉದ್ಘಾಟನೆ
ಮಡಿಕೇರಿ, ಜು.12: ಕೂರ್ಗ್ ಎಜ್ಯುಕೇಶನ್ ಟ್ರಸ್ಟ್ ನಗರದಲ್ಲಿ ಕೂರ್ಗ್ ಇನ್‌ಸ್ಟಿಟ್ಯೂಟ್ ಆಫ್ ಹಾಸ್ಪಿಟ್ಯಾಲಿಟಿ ಕಾಲೇಜನ್ನು ಆರಂಭಿಸಿದ್ದು, ಇದರ ಉದ್ಘಾಟನಾ ಸಮಾರಂಭ ಜುಲೈ 14 ರಂದು ನಡೆಯಲಿದೆ ಎಂದು ಟ್ರಸ್ಟ್‌ನ ಅಧ್ಯಕ್ಷರಾದ ಡಾ ನಿರ್ಮಲಾ ಸೋಮಯ್ಯ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಲೇಜಿನಲ್ಲಿ 3 ವರ್ಷದ ಕೋರ್ಸ್‌ಗಳನ್ನು ನೀಡಲಾಗುತ್ತಿದ್ದು, ವೃತ್ತಿಪರ ತರಬೇತಿಗಳೊಂದಿಗೆ ಉದ್ಯೋಗವನ್ನು ಕೂಡ ಖಾತ್ರಿಗೊಳಿಸಲಾಗುವುದೆಂದರು. ವಿದ್ಯಾರ್ಥಿಗಳನ್ನು ಅಗತ್ಯ ತರಬೇತಿಯನ್ನು ನೀಡಿ ಆಯಾ ಕ್ಷೇತ್ರಗಳಲ್ಲಿ ವೃತ್ತಿಪರರನ್ನಾಗಿ ಸಜ್ಜುಗೊಳಿಸಲಾಗುವುದು. ಜಿಲ್ಲೆಯ ವಿದ್ಯಾರ್ಥಿಗಳಿಗೆ ಉದ್ಯೋಗವನ್ನು ದೊರಕಿಸಿ ಕೊಡಲಾಗುತ್ತದೆ ಎಂದು ತಿಳಿಸಿದರು.
ಟ್ರಸ್ಟಿ ದಿನೇಶ್ ಕಾರ್ಯಪ್ಪ ಮಾತನಾಡಿ, ಕೊಡಗಿನ ವಿದ್ಯಾರ್ಥಿಗಳಿಗೆ ಕಾಲೆೇಜಿನಲ್ಲಿ ಆದ್ಯತೆ ನೀಡಲಾಗುವುದೆಂದರು. ಹೊಟೇಲ್ ಉದ್ಯಮದ ಬಗ್ಗೆ ತರಬೇತಿ ನೀಡಿ ಜಿಲ್ಲೆಯ ಬೃಹತ್ ರೆಸಾರ್ಟ್‌ಗಳಲ್ಲಿ ಅನುಭವ ಪಡೆಯಲು ಅವಕಾಶ ನೀಡಲಾಗುವುದು. ಈಗಾಗಲೆ ಕಾಲೇಜ್ ಆರಂಭಗೊಂಡಿದ್ದು, ವಾರ್ಷಿಕ 35 ಸಾವಿರ ರೂ. ಶುಲ್ಕವನ್ನು ಪಡೆಯಲಾಗುತ್ತದೆ ಎಂದರು.
ಜು.14 ರಂದು ಬೆಳಗ್ಗೆ 9.30 ಕ್ಕೆ ನಗರದ ಜನರಲ್ ತಿಮ್ಮಯ್ಯ ವೃತ್ತದ ಬಳಿ ಎಎಂಸಿ ವಾಣಿಜ್ಯ ಸಂಕೀರ್ಣದಲ್ಲಿರುವ ಕಾಲೇಜನ್ನು ಮಂಗಳೂರು ವಿಶ್ವ ವಿದ್ಯಾನಿಲಯದ ಉಪಕುಲಪತಿ ಪ್ರೊಕೆ.ಬೈರಪ್ಪ ಹಾಗೂ ಪ್ರಯೋಗಾಲಯವನ್ನು ಜಿಲ್ಲಾಧಿಕಾರಿಗಳಾದ ಡಾ ರಿಚರ್ಡ್ ವಿನ್ಸೆಂಟ್ ಡಿಸೋಜ ಉದ್ಘಾಟಿಸಲಿದ್ದಾರೆ.
ಮಹೀಂದ್ರ ಹಾಲಿಡೇಸ್ ಅಂಡ್ ರೆಸಾರ್ಟ್ ರೀಜನಲ್ ಹೆಡ್ ವಿಜಯ ಮೋಹನ್ ಮತ್ತು ಎಕ್ಸಿಕ್ಯೂಟಿವ್ ಚೀಫ್ ದೇಬ್ರಜ್ ಭೂಮಿಕ್ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಟ್ರಸ್ಟಿಗಳಾದ ಅಪ್ಪಾರಂಡ ವೇಣು, ಮಂಡೇಪಂಡ ರತನ್ ಕುಟ್ಟಯ್ಯ ಹಾಗೂ ಗಣಪತಿ ಉಪಸ್ಥಿತರಿದ್ದರು.