×
Ad

ಪ್ರತಾಪ್‌ಸಿಂಹ ಇತಿಹಾಸವನ್ನು ತಿರುಚುತ್ತಿದ್ದಾರೆ: ಜಿಲ್ಲಾ ಕಾಂಗ್ರೆಸ್ ಟೀಕೆ

Update: 2017-07-12 20:44 IST

ಮಡಿಕೇರಿ, ಜು.12: ಇತಿಹಾಸವನ್ನು ತಿರುಚುತ್ತಿರುವ ಸಂಸದ ಪ್ರತಾಪಸಿಂಹ ಅವರು ಜನರ ಹಾದಿ ತಪ್ಪಿಸಿ ರಾಜಕೀಯ ಲಾಭವನ್ನು ಪಡೆಯುವ ಭ್ರಮೆಯಲ್ಲಿದ್ದಾರೆ ಎಂದು ಆರೋಪಿಸಿರುವ ಜಿಲ್ಲಾ ಕಾಂಗ್ರೆಸ್ ವಕ್ತಾರ ಟಾಟುಮೊಣ್ಣಪ್ಪ, ಮಾಜಿ ಪ್ರಧಾನಿ ನೆಹರು ಅವರ ವಿರುದ್ಧ ಮಾಡಿರುವ ಟೀಕೆ ಖಂಡನೀಯವೆಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಪತ್ರಿಕಾ ಹೇಳಿಕೆ ನೀಡಿರುವ ಟಾಟುಮೊಣ್ಣಪ್ಪ, ಬಾಯಿ ಚಪಲಕ್ಕಾಗಿ ಮಾತನಾಡುತ್ತಿರುವ ಸಂಸದ ಪ್ರತಾಪಸಿಂಹ ಅವರಿಗೆ ಇತಿಹಾಸದ ಬಗ್ಗೆ ಅರಿವಿಲ್ಲವೆಂದು ಟೀಕಿಸಿದ್ದಾರೆ. ದೇಶದ ಪ್ರಥಮ ಪ್ರಧಾನಿ ಪಂಡಿತ್ ಜವಾಹರ್‌ಲಾಲ್ ನೆಹರು ಅವರು ಹುಟ್ಟು ಶ್ರೀಮಂತರಾಗಿದ್ದರು. ಸ್ವಾತಂತ್ರ್ಯ ಪೂರ್ವದಲ್ಲೆ ವಿದೇಶದಲ್ಲಿ ವಿದ್ಯಾಭ್ಯಾಸ ಮುಗಿಸಿ ತಾಯ್ನಾಡಿಗೆ ಮರಳಿದ ತಕ್ಷಣ ತನ್ನ ಎಲ್ಲಾ ಸಿರಿವಂತಿಕೆ, ಆಸೆ ಆಕಾಂಕ್ಷೆಗಳನ್ನು ಬದಿಗೊತ್ತಿ ಸ್ವಾತಂತ್ರ್ಯ ಚಳುವಳಿಗೆ ಧುಮುಕಿದರು. ಕೇವಲ ಕಾಂಗ್ರೆಸ್‌ನ್ನು ಟೀಕಿಸುವ ಉದ್ದೇಶದಿಂದ ಕೀಳು ಮಟ್ಟದ ಹೇಳಿಕೆ ನೀಡುವುದು ಪ್ರತಾಪಸಿಂಹ ಅವರಿಗೆ ಶೋಭೆ ತರುವುದಿಲ್ಲ. ಸುಳ್ಳು ಹೇಳಿ ಜನರನ್ನು ಮೂರ್ಖರನ್ನಾಗಿಸುವ ಬದಲು ಇತಿಹಾಸದ ವಾಸ್ತವಾಂಶವನ್ನು ಮೊದಲು ಅರಿತುಕೊಳ್ಳಲಿ ಎಂದು ಟಾಟುಮೊಣ್ಣಪ್ಪ ಒತ್ತಾಯಿಸಿದ್ದಾರೆ.

ಮಾನವೀಯ ಮೌಲ್ಯಗಳಿಗೆ ಬೆಲೆ ನೀಡದೆ, ಆಗಿ ಹೋದ ಇತಿಹಾಸವನ್ನು ಕೆಣಕುತ್ತಾ ಪ್ರಚೋದನೆ ನೀಡುವುದು ಪ್ರತಾಪಸಿಂಹರ ಚಾಳಿಯಾಗಿದೆ. ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷದ ಬೆಳವಣಿಗೆಯನ್ನು ಕಂಡು ಹತಾಶಗೊಂಡಿರುವ ಸಂಸದರು ಸುಳ್ಳು ಹೇಳಿ ಜನರ ಹಾದಿ ತಪ್ಪಿಸುವ ಯತ್ನ ಮಾಡುತ್ತಿದ್ದಾರೆ ಎಂದು ಆರೋಪಿಸಿರುವ ಟಾಟುಮೊಣ್ಣಪ್ಪ, ಇತಿಹಾಸವನ್ನು ತಿರುಚುವ ಕೆಲಸವನ್ನು ಬಿಟ್ಟು ಜನರ ಏಳಿಗೆಗಾಗಿ ಶ್ರಮಿಸಲಿ ಎಂದು ತಿರುಗೇಟು ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News