ಭಾರತೀಯ ಮೀನುಗಾರರ ವಾಪಸಿಗೆ ನೆರವಾದ ಪಾಕಿಸ್ತಾನ ಎನ್‌ಜಿಒ

Update: 2017-07-13 04:54 GMT

ಅಮೃತಸರ, ಜು. 13: ಪಾಕಿಸ್ತಾನದ ಜಲಪ್ರದೇಶವನ್ನು ಉಲ್ಲಂಘಿಸಿದ ಆರೋಪದಲ್ಲಿ ಬಂಧಿತರಾಗಿದ್ದ 78 ಮಂದಿ ಭಾರತೀಯ ಮೀನುಗಾರರು ಬಂಧಮುಕ್ತಗೊಂಡು ಭಾರತಕ್ಕೆ ಮರಳಿದ್ದಾರೆ. ಆದರೆ ಎರಡು ವರ್ಷಗಳ ಜೈಲುವಾಸದ ಬಳಿಕ ಸ್ವದೇಶಕ್ಕೆ ಮರಳಲು ಪಾಕಿಸ್ತಾನದ ಸ್ವಯಂಸೇವಾ ಸಂಸ್ಥೆಯೊಂದು ನೀಡಿದ ನೆರವನ್ನು ಮರೆಯುವಂತಿಲ್ಲ ಎಂದು ಮೀನುಗಾರರು ಹೇಳಿದ್ದಾರೆ.

ಪಾಕಿಸ್ತಾನದ ಎಧಿ ಫೌಂಡೇಷನ್ ಈ ಮೀನುಗಾರರ ಹೊಣೆ ಹೊತ್ತ ಬಳಿಕ ಪಾಕಿಸ್ತಾನ ಕಳೆದ ರವಿವಾರ ಕರಾಚಿ ಜೈಲಿನಿಂದ 78 ಮಂದಿಯನ್ನು ಬಿಡುಗಡೆ ಮಾಡಿತ್ತು.

"ಕೆಲವು ವ್ಯಕ್ತಿಗಳಿಗೆ ನಮ್ಮನ್ನು ಹಸ್ತಾಂತರಿಸಿದ್ದು, ನಮಗೆ ಮೊದಲು ಆತಂಕ ತಂದಿತ್ತು. ಅದರೆ ಬಿಡುಗಡೆಯಾದ ತಕ್ಷಣ ನಮಗೆ ಆಹಾರ, ಹಣ ಹಾಗೂ ಉಡುಗೊರೆ ನೀಡಿ ಫೌಂಡೇಷನ್‌ನ ಸ್ವಯಂ ಸೇವಕರು ಅಚ್ಚರಿ ಮೂಡಿಸಿದರು" ಎಂದು ಸ್ವದೇಶಕ್ಕೆ ಮರಳಿರುವ ಖಾಂಜಿ ಬಹಿರಂಗಪಡಿಸಿದ್ದಾರೆ.

"ಎರಡೂ ಸರ್ಕಾರಗಳ ಭವಿಷ್ಯದ ನಡೆಗಳಿಗೆ ಎಧಿ ಫೌಂಡೇಷನ್‌ನ ಕಾರ್ಯಕರ್ತರು ಮಾದರಿಯಾಗಬೇಕು" ಎಂದು ಅವರು ಬಣ್ಣಿಸಿದ್ದಾರೆ. "ಎರಡು ವರ್ಷದ ಜೈಲುವಾಸದ ಅವಧಿಯನ್ನು ನಾನು ಮರೆಯಬಹುದು. ಆದರೆ ಎಧಿ ಫೌಂಡೇಷನ್ ಕಾರ್ಯಕರ್ತರು ತೋರಿದ ಪ್ರೀತಿ ಹಾಗೂ ಅನುಕಂಪವನ್ನು ಮರೆಯಲು ಸಾಧ್ಯವಿಲ್ಲ. ನಮ್ಮನ್ನು ಅವರಿಗೆ ಪರಿಚಯವೇ ಇರಲಿಲ್ಲ. ಆದರೂ ಎಲ್ಲರಿಗೂ ತಲಾ 5,000 ರೂ. ನಗದು ಹಾಗೂ ಉಡುಗೊರೆಗಳನ್ನು ನೀಡಿದ್ದಾರೆ. ನಿಜವಾಗಿಯೂ ಅವರು ಉದಾರಿಗಳು" ಎಂದು ಮತ್ತೊಬ್ಬ ಮೀನುಗಾರ ಕರ್ಸರ್ ಹೇಳಿದ್ದಾರೆ.

ನಗದು ಹಾಗೂ ಉಡುಗೊರೆ ನೀಡಿದ್ದಲ್ಲದೇ, ಈ ಸ್ವಯಂಸೇವಾ ಸಂಸ್ಥೆ, ನಿಗದಿತ ದಿನಾಂಕದಂದು ರೈಲು ಟಿಕೆಟ್ ಲಭ್ಯವಾಗದ ಹಿನ್ನೆಲೆಯಲ್ಲಿ ಕರಾಚಿ- ಲಾಹೋರ್ ರೈಲಿನ ವಿಶೇಷ ಬೋಗಿಯನ್ನು ಇವರಿಗಾಗಿ ಮೀಸಲಿರಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News