ನನ್ನ ಯಶಸ್ಸು ಹಲವು ಮಹಿಳೆಯರಿಗೆ ಸ್ಫೂರ್ತಿಯಾಗಿದೆ : ಪರ್ವೀನ್

Update: 2017-07-13 08:10 GMT

ನಿರ್ಧಾರ ಕೈಗೊಳ್ಳಲು ನನಗೆ ಹಲವು ತಿಂಗಳುಗಳೇ ಹಿಡಿದವು. ಆರಂಭಿಸಲು ನನಗೆ ಭಯವಾಗಿತ್ತು.  ಅನಕ್ಷರಸ್ಥೆಯೊಬ್ಬಳು ಉದ್ಯಮವೊಂದನ್ನು ಹೇಗೆ ನಡೆಸಬಹುದೆಂದು ನಾನು ನನ್ನನ್ನೇ ಕೇಳಿಕೊಂಡೆ. ನನಗಿಂತ ಮೊದಲು ಬೇರೆ ಯಾವುದೇ ಮಹಿಳೆ ಅಂಗಡಿಯೊಂದನ್ನು ಹೊಂದಿರದೇ ಇದ್ದುದರಿಂದ ನನಗೆ ಭಯವಾಗಿತ್ತು. ನನಗೆ ಸರಿಯಾಗಿ ಲೆಕ್ಕ ಮಾಡಲೂ ಬರುತ್ತಿರಲಿಲ್ಲ. ನನ್ನ ಬಗ್ಗೆ ಜನರು ತಪ್ಪಾಗಿ ತಿಳಿದುಕೊಂಡರೇನು ಮಾಡುವುದು ಎಂದು ನನಗೆ ಭಯವಾಗಿತ್ತು.

ನಾನು ಏನು ಬೇಕಾದರೂ ಮಾಡಬಲ್ಲೆ ಎಂದು ನನ್ನಲ್ಲಿ ಧೈರ್ಯ ತುಂಬಿದವನು ನನ್ನ ಮಗ ಸಾಕಿಲ್ ಮಾತ್ರ. ನನಗೆ ಲೆಕ್ಕ ಮಾಡಲು ಕಲಿಸುವುದಾಗಿ ಆತ ಹೇಳಿದ. ನಮ್ಮ ಪ್ರದೇಶದಲ್ಲಿ ಅಂಗಡಿ ಹೊಂದಿದ ಪ್ರಥಮ ಮಹಿಳೆ ನಾನಾಗಿದ್ದೆ. ಇಲ್ಲಿ ಮಹಿಳೆಯೊಬ್ಬಳು ಅಂಗಡಿ ತೆರೆಯಬಹುದು ಹಾಗೂ ಜನರು ಮಹಿಳೆಯ ಅಂಗಡಿಗೆ ಸಾಮಾನು ಖರೀದಿಸಲು ಬರಬಹುದೆಂದು ಯಾರು ಕೂಡಾ ಅಂದುಕೊಂಡಿರಲಿಲ್ಲ. ಧೈರ್ಯ ತುಂಬಿಕೊಂಡು ನಾನು ನನ್ನ ಅಂಗಡಿ `ಸಾಕಿಲ್ ಸ್ಟೋರ್' ಪ್ರಾರಂಭಿಸಿದೆ.

ಮೊದಲ ದಿನ ಅಂಗಡಿ ತೆರೆದಾಗ ನನಗೆ ಸ್ವಲ್ಪ ಅಂಜಿಕೆಯಾಗಿತ್ತು. ಯಾರು ಕೂಡ ಬರಲಿಲ್ಲ. ಎಲ್ಲರೂ ದೂರದಿಂದಲೇ ನನ್ನ ಅಂಗಡಿಯನ್ನು ನೋಡುತ್ತಿದ್ದುದರಿಂದ ನನಗೆ ಸ್ವಲ್ಪ ಮುಜುಗರವಾಯಿತು. ನನ್ನ ಮಗನಿಗೆ ಹಿಂದೆ ಹೋಗಲು ಹೇಳಿ ಮೊದಲ ದಿನ ಅಂಗಡಿಯನ್ನು ಮುಚ್ಚಿದೆ.  ಆದರೆ ನನ್ನ ಪುಟ್ಟ ಮಗ ಧೈರ್ಯಶಾಲಿಯಾಗಿದ್ದ ಹಾಗೂ ಅಲ್ಲಿರಲು ನಿರ್ಧರಿಸಿದ. ಶಾಲೆ ಆರಂಭಗೊಳ್ಳುವ ಮೊದಲು ನನ್ನ ಅಂಗಡಿ ತುಂಬಾ ಗ್ರಾಹಕರಿರುತ್ತಾರೆ. 

ಆ ಪ್ರದೇಶದ ಎಲ್ಲಾ ಮಹಿಳೆಯರು ಇಲ್ಲಿ ಖರೀದಿಗಾಗಿ ಬರುತ್ತಿದ್ದರು. ನನಗೆ ಇದನ್ನೆಲ್ಲಾ ಸಂಭಾಳಿಸಲು ಕಷ್ಟವಾಗಿತ್ತು, ಲೆಕ್ಕದಲ್ಲೂ ನಾನು ಹಿಂದಿದ್ದೆ. ಪ್ರತಿಯೊಂದು ಖರೀದಿ ಆದಾಗಲೂ ನನಗೆ ಸ್ವಲ್ಪ ಹಿಂಜರಿಕೆಯಾಗುತ್ತಿತ್ತು. ಮಧ್ಯಾಹ್ನ ಸ್ವಲ್ಪ ವಿರಾಮ ದೊರೆತಾಗ ನಾನು ಲೆಕ್ಕ ಹಾಕಿದಾಗ 100 ಟಕಾ ಕಡಿಮೆಯಾಗಿದೆ ಎಂದು ತಿಳಿಯಿತು. ಯಾರಿಗೋ ತಪ್ಪಾಗಿ  ಆ ಹಣ ನೀಡಿದೆ ಎಂದು ನನಗೆ ತಿಳಿಯಿತು. ಮತ್ತೆ ಮತ್ತೆ ಲೆಕ್ಕ ಮಾಡಿದರೂ  ಫಲಿತಾಂಶ ಅದೇ ಆಗಿತ್ತು.  ನನ್ನ ತಪ್ಪಿನಿಂದ ನನಗೆ  ಬೇಸರವಾಯಿತು. ಅಂಗಡಿಯಲ್ಲಿ ನಿಲ್ಲಲು ಸಾಧ್ಯವಾಗದೆ ಮುಚ್ಚಿ ಮನೆಗೆ ಹಿಂದಿರುಗಿದೆ. ಒಬ್ಬಳೇ ಅಂಗಡಿ ತೆರೆಯಲು ನಿರ್ಧರಿಸಿದ್ದ ನಾನೆಷ್ಟು ಮೂರ್ಖಳು ಎಂದು ಯೋಚಿಸುತ್ತಾ ಆ ರಾತ್ರಿ ಕಳೆದೆ.

ಮರುದಿನ ಅಂಗಡಿ ತೆರೆದಾಗ ನಾನು ಬಹಳ ಖಿನ್ನಳಾಗಿದ್ದೆ. ನನ್ನ ಬದುಕಿನ ಬಗ್ಗೆ ಯೋಚಿಸಿದೆ ಹಾಗೂ ನಾನು ಯಾವತ್ತೂ  ತಪ್ಪು ಮಾಡುತ್ತಾ ಬಂದಿದ್ದೆ ಎಂದೆನಿಸಿತು.  ನನ್ನ ವೈಫಲ್ಯಗಳ ಬಗ್ಗೆ ಯೋಚಿಸುತ್ತಾ ಕುಳಿತಿದ್ದಾಗ ಆ ಪ್ರದೇಶದ ವೃದ್ಧ ಮಹಿಳೆಯೊಬ್ಬಳು ಬಂದು ನನಗೆ 100 ಟಕಾ ತೋರಿಸಿದಳು.  ಆ ಹಣವನ್ನು ನಾನು ತಿಳಿಯದೆ ಆಕೆಗೆ ನೀಡಿದ್ದೆ. ಆಕೆಗೆ ಧನ್ಯವಾದ ತಿಳಿಸಿ ನಾನು ಲೆಕ್ಕದಲ್ಲಿ ಎಷ್ಟು ಹಿಂದುಳಿದಿದ್ದೇನೆಂದು ಹೇಳಿದೆ. ಅಂಗಡಿಯನ್ನು ಬಹಳ ಬೇಗನೇ ಬಂದ್ ಮಾಡುತ್ತೇನೆಂದೂ ಹೇಳಿದೆ.  ಆಕೆ ನನ್ನ ಕೈ ಹಿಡಿದು ನನ್ನೊಂದಿಗೆ ಅಂಗಡಿಯೊಳಗೆ ಕುಳಿತಳು. 

ಕಳೆದ ರಾತ್ರಿ ಆಕೆ ನನ್ನ ಬಗ್ಗೆ ಯೋಚಿಸಿದ್ದಾಗಿ ಆಕೆ ತಿಳಿಸಿದಳು. ಜೀವನದಲ್ಲಿ ಏನನ್ನಾದರೂ ಮಾಡಬೇಕೆಂದು ಆಕೆಗೆ ಹಿಂದೆ ಅನಿಸಿದ್ದು ಆದರೆ ಆಕೆ ಏನೂ ಮಾಡಲಾರದೇ ಹೋಗಿದ್ದರಿಂದ ಈಗ ಆಕೆಯನ್ನು ನೋಡಿಕೊಳ್ಳುವ ಯಾವುದೇ ಇಚ್ಛೆಯಿಲ್ಲದ ಮಕ್ಕಳ ಹಂಗಿನಲ್ಲಿರುವುದನ್ನು ಆಕೆ ಹೇಳಿಕೊಂಡಳು. ``ನಾನು ಮತ್ತೆ ನಿನ್ನ ವಯಸ್ಸಿಗೆ ಹಿಂದಿರುಗಲು ಸಾಧ್ಯವಾದರೆ ನಿನ್ನ ಅಂಗಡಿ ಪಕ್ಕದಲ್ಲಿಯೇ ಇನ್ನೊಂದು ಅಂಗಡಿ ತೆರೆಯುತ್ತಿದ್ದೆ. ನಿನ್ನ ಅಂಗಡಿ ಮುಚ್ಚಬೇಡ. ನಿನ್ನ ಅಂಗಡಿಯಿಂದ ಹಲವು ಕನಸುಗಳನ್ನು ನನಸಾಗಿಸಬಹುದು,'' ಎಂದಳು. ನಾನು ಸೋಲೊಪ್ಪಿಕೊಳ್ಳಲಿಲ್ಲ, ಈಗ ನನ್ನ ಅಂಗಡಿ ತೆರೆದು ಒಂದು ವರ್ಷವಾಗಿದೆ.  ನನ್ನ ಯಶಸ್ಸನ್ನು ನೋಡಿ ನಮ್ಮ ಪ್ರದೇಶದಲ್ಲಿ ಹಲವು ಮಹಿಳೆಯರು ತಮ್ಮದೇ ಅಂಗಡಿಗಳನ್ನು ನಡೆಸುತ್ತಿದ್ದಾರೆ.

ಪರ್ವೀನ್ ಖಟುನ್ (30)

Full View

Writer - ಜಿ ಎಂ ಬಿ ಆಕಾಶ್

contributor

Editor - ಜಿ ಎಂ ಬಿ ಆಕಾಶ್

contributor

Similar News