ಸಿ.ಟಿ.ರವಿಯ ಅನುಕೂಲ ಸಿಂಧು ಹಾಗೂ ಅವಕಾಶವಾದಿ ರಾಜಕಾರಣ ಬಹಿರಂಗ: ವಿಜಯಕುಮಾರ್
ಚಿಕ್ಕಮಗಳೂರು, ಜು.13 :ಜಿ.ಪರಮೇಶ್ವರ್ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾಗ ಅವರ ಕಾರ್ಯಶೈಲಿ ಹಾಗೂ ಅನುಭವದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದ ಶಾಸಕ ಸಿ.ಟಿ.ರವಿ ಈಗ ಅವರ ಬಗ್ಗೆ ಕಾಟಾಚಾರ ಎಂಬ ಶಬ್ಧ ಬಳಸುದತ್ತಿರುವುದು ಅವರ ಅನುಕೂಲ ಸಿಂಧು ಹಾಗೂ ಅವಕಾಶವಾದಿ ರಾಜಕಾರಣವನ್ನು ಬಹಿರಂಗಗೊಳಿಸಿದೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ. ವಿಜಯ ಕುಮಾರ್ ಟೀಕಿಸಿದ್ದಾರೆ.
ಅವರು ನಗರದಲ್ಲಿ ಪತ್ರಿಕಾಗೋಷ್ಟಿ ಮಾತನಾಡಿ, ಶಾಸಕ ಸಿ.ಟಿ.ರವಿ ಅವರು ಹಿಂದಿನ ಉಸ್ತುವಾರಿ ಸಚಿವರ ಡಾ. ಪರಮೇ ಶ್ವರ್ ಹಾಗೂ ಈಗಿನ ಸಚಿವ ರೋಷನ್‌ಬೇಗ್ ಅವರ ಬಗ್ಗೆ ಮಾಡಿರುವ ಟೀಕಿಗೆ ಪ್ರತಿಕ್ರಿಯೆ ವ್ಯಕ್ತಪಡಿಸಿದರು.
ಶಾಸಕ ಸಿ.ಟಿ.ರವಿ ಅವರು ಡಾ. ಪರಮೇಶ್ವರ್ ಅವರ ಉಸ್ತುವಾರಿ ಹೊಣೆಗಾರಿಕೆ ಬಗ್ಗೆ ಪತ್ರಿಕೆಗಳಿಗೆ ನೀಡಿರುವ ಹೇಳಿಕೆಯಲ್ಲಿ ಕಾಟಾಚಾರಕ್ಕೆ ಜಿಲ್ಲೆಗೆ ಬಂದು ಹೋಗುತ್ತಿದ್ದರು. ಕೆಲಸದ ಬಗ್ಗೆ ಗಮನ ಹರಿಸಿರಲಿಲ್ಲ. ಅಭಿವೃದ್ಧಿ ಬಗ್ಗೆನಿಗಾವಹಿಸಿಲ್ಲ. ಆಡಳಿತ ಚುರುಕುಗೊಳಿಸಲಿಲ್ಲ್ಲ. ಹಾಗೆ ಈಗಿನ ಉಸ್ತುವಾರಿ ಸಚಿವರಿಂದಲೂ ಹೆಚ್ಚಿನ ನಿರೀಕ್ಷೆಮಾಡಲಾಗದು ಎಂದು ಟೀಕಿ ಸಿದ್ದಾರೆ. ಆದರೆ ಪರಮೇಶ್ವರ ಅವರು ಉಸ್ತುವಾರಿ ಜೊತೆಗೆ ಗೃಹಖಾತೆ ಯನ್ನು ಸಮರ್ಥವಾಗಿ ನಿಭಾಯಿಸಿದ್ದರು. ಜಿಲ್ಲೆಯಲ್ಲಿ ಉತ್ತಮ ಹೊಣೆಗಾರಿಕೆ ತೋರಿದ್ದರು ಎಂದರು.
ಈ ಬಗ್ಗೆ ಸ್ವತಃ ಶಾಸಕ ಸಿ.ಟಿ.ರವಿ ಅವರು 2/3 ಬಾರಿ ಪ್ರಶಂಸೆ ವ್ಯಕ್ತಪಡಿಸಿದ್ದರು. ಅವರ ಅವಧಿಯಲ್ಲಿ 29 ಬಾರಿ ಜಿಲ್ಲೆಗೆ ಭೇಟಿ ನೀಡಿ ಪ್ರಗತಿ ಪರಿಶೀಲನೆ, ಜನಸ್ಪಂದನೆ ಸಭೆಗಳನ್ನು ನಡೆಸಿದ್ದರಲ್ಲದೆ, ಬರಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ್ದರು. ಆತ್ಮಹತ್ಯೆ ಮಾಡಿ ಕೊಂಡ ರೈತರ ನಿವಾಸಕ್ಕೆತೆರಳಿ ಸಾಂತ್ವಾನ ಹೇಳಿದ್ದರು. ಕರಗಡ ಕಾಮಗಾರಿ ಸ್ಥಳಕ್ಕೆ 2 ಬಾರಿ ಭೇಟಿ ನೀಡಿ ಕೆಲಸಕ್ಕೆ ಚುರುಕು ಮುಟ್ಟಿಸಿದ್ದರು ಎಂದರು.
ಡಿವೈಎಸ್ಪಿ ಕಲ್ಲಪ್ಪ ಹಂಡಿಬಾಗ್ ಆತ್ಮಹತ್ಯೆ, ಪ್ರವೀಣ್‌ಖಾಂಡ್ಯ ಪ್ರಕರಣ, ಬೆಟ್ಟಿಂಗ್ ದಂಧೆ ಪ್ರಕರಣಗಳಲ್ಲಿ ಶಾಸಕ ಸಿ.ಟಿ.ರವಿ ಅವರ ಹೆಸರು ಕೇಳಿಬಂದಿತ್ತು. ಜೊತೆಗೆ ಅವರು ಹೊಂದಿರುವ ಅಪಾರ ಆಸ್ತಿ ಬಗ್ಗೆಯೂ ಆರೋಪ ಕೇಳಿ ಬಂದಿತ್ತು. ರಿಂತಹ ಸಂದರ್ಭದಲ್ಲಿ ಉಸ್ತುವಾರಿ ಜೊತೆಗೆ ಗೃಹ ಸಚಿವರಗಿದ್ದ ಪರಮೇಶ್ವರ್ ಅವರ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ್ದ ಅವರು ಈಗ ಟೀಕೆಗೆ ಇಳಿದಿದ್ದಾರೆ ಎಂದು ಆರೋಪಿಸಿದರು.
ಪರಮೇಶ್ವರ್ ಅವರು ಬರಪೀಡಿತವಾದ ಈ ಜಿಲ್ಲೆಗೆ 13.5 ಕೋಟಿ ಅನುದಾನ ಬಿಡುಗಡೆ ಮಾಡಿಸಿ ಪರಿಹಾರ ಕ್ರಮಕ್ಕೆ ಒತ್ತು ನೀಡಿದ್ದರು. ಗೋ ಶಾಲೆ, ಜಾನುವಾರುಗಳಿಗೆ ಮೇವಿನ ವ್ಯವಸ್ಥೆಮಾಡಿದ್ದರು. ಆದರೆ ಆಗೊಮ್ಮೆ ಈಗೊಮ್ಮೆ ಕ್ಷೇತ್ರಕ್ಕೆ ಬರುವ ಸಿ.ಟಿ.ರವಿ ಗ್ರಾಮ ವಾಸ್ತವ್ಯವೆಂದು ನೃತ್ಯ ಮಾಡುತ್ತಾ, ಕಬಡ್ಡಿ ಆಡುತ್ತಾ ಜನರಿಗೆ ಮನರಂಜನೆ ಒದಗಿಸಿ ತಮ್ಮ ಇರುವಿ ಕೆಯನ್ನು ಪ್ರದರ್ಶಿಸುತ್ತಿದ್ದಾರೆ ಎಂಧು ಟೀಕಿಸಿದರಲ್ಲದೆ ಮುಂದೆ ಅವರಿಗೆ ಜನತೆ ತಕ್ಕ ಉತ್ತರ ನೀಡಲಿದ್ದಾರೆ ಎಂದರು.
ಗೋಷ್ಠಿಯಲ್ಲಿ ಮಂಜೇಗೌಡ, ಹಿರೇಮಗಳೂರು ರಮಚಂದ್ರ, ನಿಸಾರ್ ಅಹಮ್ಮದ್, ರೂಬಿನ್ ಮೊಸಸ್ ಉಪಸ್ಥಿತರಿದ್ದರು.