×
Ad

ಬಾರ್‌ನಲ್ಲಿ ದಾಂಧಲೆ : 6 ಆರೋಪಿಗಳ ಬಂಧನ

Update: 2017-07-13 20:45 IST

ಮಡಿಕೇರಿ, ಜು.13: ನಗರದ ಬಾರ್‌ವೊಂದಕ್ಕೆಕಲ್ಲು ತೂರಿ, ದಾಂಧಲೆ ನಡೆಸಿ, ಕೆಲಸಗಾರರ ಮೇಲೆ ಹಲ್ಲೆ ನಡೆಸಿದ ಘಟನೆಗೆ ಸಂಬಂಧಿಸಿದಂತೆ ಆರು ಆರೋಪಿಗಳನ್ನು ಬಂಧಿಸುವಲ್ಲಿ ಜಿಲ್ಲಾ ಪೊಲೀಸರು ಯಶಸ್ವಿಯಾಗಿದ್ದಾರೆ.

ಮಡಿಕೇರಿ ಬಳಿಯ ಅರುವತೊಕ್ಲು ಗ್ರಾಮದ ನಿವಾಸಿ ಪ್ರಸ್ತುತ ನಗರದ ಮೆಡಿಕಲ್ ಕಾಲೇಜಿನಲ್ಲಿ ಸ್ಟೋರ್ ಕೀಪರ್ ಆಗಿರುವ ಟಿ.ಜಿ.ದೇಶಿಕ್, ಕಾರುಗುಂದ ಗ್ರಾಮದ ನಿವಾಸಿ ಮನೋಜ್ ಕೆ.ಎಸ್., ಫ್ಯಾಶನ್ ಡಿಸೈನಿಂಗ್ ವಿದ್ಯಾರ್ಥಿಯಾಗಿರುವ ಅರುವತೊಕ್ಲು ಗ್ರಾಮದ ಪಿ.ಡಿ.ಕುಶ, ಚೆಟ್ಟಳ್ಳಿ ಬಳಿಯ ಕಂಡಕೆರೆ ನಿವಾಸಿಗಳಾದ ಶ್ರವಣ್, ಫಯಾಜ್, ಮತ್ತು ಮಂಗಳಾದೇವಿ ನಗರದ ಕಿರಣ್ ಎಂಬುವವರೇ ಬಂಧಿತ ಆರೋಪಿಗಳು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಪಿ.ರಾಜೇಂದ್ರ ಪ್ರಸಾದ್ ಕಾರ್ಯಾಚರಣೆ ಕುರಿತು ಮಾಹಿತಿ ನೀಡಿದರು.
ಜು.10 ರಂದು ಮಾರುತಿ ಬಾರ್‌ಗೆ ಮದ್ಯಪಾನ ಮಾಡಲು ಬಂದಿದ್ದ ಗಾಳಿಬೀಡು ಗ್ರಾಮದ ಮೊಣ್ಣಪ್ಪ ಸರಾ ಎಂಬವರು ಮನೆಯಲ್ಲಿ ಇಟ್ಟಿದ್ದ ಕೋವಿ ಕಾಣೆಯಾಗಿರುವ ಬಗ್ಗೆ ಅದೇ ಗ್ರಾಮದ ಕುಡಿಯರ ಲವ ಮತ್ತು ಕೀರ್ತನ್ ಇವರ ಜೊತೆಯಲ್ಲಿ ವಾಗ್ವಾದ ಮಾಡಿದ್ದಾರೆ. ಈ ಸಂದರ್ಭ ಅಲ್ಲಿಗೆ ಮದ್ಯಪಾನ ಮಾಡಲು ಬಂದ ದೇಶಿಕ್ ಮತ್ತು ಮನೋಜ್ ಎಂಬವರುಗಳು ಅವರಿಗೆ ಸಂಬಂಧ ಇಲ್ಲದ ವಿಷಯಕ್ಕೆ ಜಗಳವಾಡಿದಾಗ ಬಾರಿನಲ್ಲಿದ್ದವರು ಜಗಳ ಬಿಡಿಸಿ ಕಳುಹಿಸಿದ್ದಾರೆ. ಮದ್ಯಪಾನ ಮಾಡಿದ್ದ ದೇಶಿಕ್ ಬಾರಿನಲ್ಲಿದ್ದವರು ತಮ್ಮ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಸಿಟ್ಟಿಗೆದ್ದು ಮೊಬೈಲ್ ಕರೆ ಮಾಡಿ ತಮ್ಮ ಗೆಳೆಯರನ್ನು ಮಡಿಕೇರಿಗೆ ಕರೆಸುತ್ತಾನೆ.

ಪ್ರತೀಕಾರ ತೀರಿಸಲು ಆತನ ಸ್ನೇಹಿತರ ತಂಡವೊಂದು ರಾತ್ರಿ ವೇಳೆ ಮಡಿಕೇರಿಗೆ ಬಂದು ಕಲ್ಲು ಮತ್ತು ಸೋಡಾ ಬಾಟಲಿಗಳನ್ನು ಸಂಗ್ರಹಿಸಿ ಸಿನಿಮೀಯ ಮಾದರಿಯಲ್ಲಿ ಹಠಾತ್ತಾಗಿ ಬಾರಿನ ಮೇಲೆ ದಾಳಿ ಮಾಡಿ ಬಾರಿನಲ್ಲಿದ್ದ ಕೆಲಸಗಾರರ ಮೇಲೆ ಹಲ್ಲೆ ನಡೆಸುತ್ತಾರೆ. ಮದ್ಯದ ಬಾಟಲಿಗಳನ್ನು ನಾಶಪಡಿಸುತ್ತಾರೆ. ಘಟನೆಯ ಸಿಸಿಟಿವಿ ದೃಶಾ್ಯವಳಿಗಳು ನಗರದ ಸಾರ್ವಜನಿಕರಲ್ಲಿ ಆತಂಕವನ್ನು ಸೃಷ್ಟಿಸಿತ್ತು.  ಈ ಬಗ್ಗೆ ಮಡಿಕೇರಿ ನಗರ ಠಾಣೆಯಲ್ಲಿ ಮೊಕದ್ದಮೆ ದಾಖಲಿಸಿ ತನಿಖೆ ಕೈಗೊಳ್ಳಲಾಗಿತ್ತು. ಪ್ರಕರಣದ ಆರೋಪಿಗಳನ್ನು ಪತ್ತೆ ಮಾಡಲು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ.ರಾಜೇಂದ್ರ ಪ್ರಸಾದ್ಅವರ ಮಾರ್ಗದರ್ಶನದಲ್ಲಿ  ಡಿಸಿಐಬಿ ವಿಭಾಗಕಾರ್ಯಾಚರಣೆ ನಡೆಸಿತು.

ಪೊಲೀಸ್ ನಿರೀಕ್ಷಕರಾದ ಕರೀಂ ರಾವ್‌ತರ್, ಎಎಸ್‌ಐಗಳಾದ ಕೆ.ವೈ.ಹಮೀದ್, ಎನ್.ಟಿ.ತಮ್ಮಯ್ಯ, ಸಿಬ್ಬಂದಿಗಳಾದ ವಿ.ಜಿ.ವೆಂಕಟೇಶ್, ಕೆ.ಎಸ್.ಅನಿಲ್‌ಕುಮಾರ್, ಎಂ.ಎನ್.ನಿರಂಜನ್, ಬಿ.ಎಲ್.ಯೊಗೇಶ್ ಕುಮಾರ್, ಕೆ.ಆರ್.ವಸಂತ, ಕೆ.ಎಸ್.ಶಶಿಕುಮಾರ್ ಮತ್ತು ಯು.ಎ.ಮಹೇಶ್ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News