×
Ad

ಭಟ್ಕಳ: ಸರಕಾರಿ ಶಾಲೆಗೆ ಕಂಪ್ಯೂಟರ್, ನೀರಿನ ವಾಟರ್ ಫಿಲ್ಟರ್ ಕೊಡುಗೆ ನೀಡಿದ ಅಬ್ದುಲ್ ರಹ್ಮಾನ್ ಮೊಹ್ತೆಶಾಮ್

Update: 2017-07-13 21:13 IST

ಭಟ್ಕಳ, ಜು.13: ಉದ್ಯಮಿ, ಅನಿವಾಸಿ ಭಾರತೀಯ ಅಬ್ದುಲ್ ರಹ್ಮಾನ್ ಮೊಹ್ತೆಶಾಮ್ (ಜಾನ್) ತಾಲೂಕಿನ ಮುಠ್ಠಳ್ಳಿ ಹಾಗೂ ತಲಾಂದ ಶಾಲೆಗೆ ಕಂಪ್ಯೂಟರ್ ಹಾಗೂ ಕುಡಿಯುವ ನೀರಿನ ಯಂತ್ರವನ್ನು ದೇಣಿಗೆಯಾಗಿ ನೀಡಿದ್ದು, ವಿದ್ಯಾರ್ಥಿಗಳಿಗೆ ಧನಸಹಾಯ ಮಾಡಿದ್ದಾರೆ.

ಪವಿತ್ರ ರಮಝಾನ್ ಪ್ರಯುಕ್ತ ಅವರು ವಿವಿಧ ಸಮಾಜ ಸೇವಾ ಕಾರ್ಯ ಮಾಡುತ್ತಿದ್ದು, ಈ ವರ್ಷ ಸರಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕ, ಶಾಲಾ ಬ್ಯಾಗ್ ಖರೀದಿಗಾಗಿ 153 ವಿದ್ಯಾರ್ಥಿಗಳಿಗೆ ತಲಾ 200 ರೂ. ಧನ ಸಹಾಯ ನೀಡಿದರು. ಅಲ್ಲದೆ ಮುಠ್ಠಳ್ಳಿ ಶಾಲೆಗೆ ಕಂಪ್ಯೂಟರ್ ಖರೀದಿಗಾಗಿ 30 ಸಾವಿರ ರೂ., ತಲಾಂದ ಶಾಲೆಗೆ ಕುಡಿಯುವ ನೀರಿನ ವಾಟರ್ ಫಿಲ್ಟರ್, ಕುರ್ಚಿ, ಡೆಸ್ಕ್ ಖರೀದಿಗಾಗಿ 20 ಸಾವಿರ ರೂ. ಧನಸಹಾಯ ನೀಡಿದರು.

ಈ ಸಂದರ್ಭ ಮಾತನಾಡಿದ ಅವರು, ಮೊದಲಿನಿಂದಲೂ ಬಡ ಜನರಿಗೆ ಸಹಾಯ ಮಾಡಬೇಕೆಂಬ ಆಸೆ ನನ್ನಲ್ಲಿದ್ದು, ಈ ನಿಟ್ಟಿನಲ್ಲಿ ಹಬ್ಬದ ನಿಮಿತ್ತ ಪ್ರತಿ ವರ್ಷ ಈ ರೀತಿ ಕಾರ್ಯ ಮಾಡುತ್ತಾ ಬಂದಿದ್ದೇನೆ. ಹಿಂದೆಲ್ಲ ಭಟ್ಕಳದಲ್ಲಿ ಎಲ್ಲಾ ಹಿಂದೂ-ಮುಸ್ಲಿಮರು ಪರಸ್ಪರ ಸಹಾಯ ಸೇರಿದಂತೆ ಕುಟುಂಬದ ಎಲ್ಲಾ ಕಾರ್ಯಕ್ರಮಗಳಲ್ಲಿ ಒಟ್ಟಾಗಿ ಇರುತ್ತಿದ್ದೆವು. ಆದರೆ ದಿನ ಕಳೆದಂತೆ ಎಲ್ಲರೂ ದೂರವಾಗುತ್ತಾ ಹೋಗುತ್ತಿರುವುದು ಬೇಸರ ತಂದಿದೆ. ನಮ್ಮ ತಾಲೂಕಿನಲ್ಲಿ ನೂರಾರು ಬಡ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಅನೂಕೂಲವಾಗುವಂತೆ ಪಠ್ಯೇತರ ವಸ್ತುಗಳ ಖರೀದಿಗೆ ಹಾಗೂ ಶಾಲೆಗೆ ಬೇಕಾದ ಕೆಲವು ವಸ್ತುಗಳ ಖರೀದಿಗೆ ಸಹಾಯ ಮಾಡಿದ್ದೇನೆ. ಇದು ನನ್ನ ಕನಸು ಎಂದರು.

ಈ ಸಂದರ್ಭ ಭಟ್ಕಳ ಪುರಸಭಾ ಉಪಾಧ್ಯಕ್ಷ ಕೆ.ಎಂ. ಅಷ್ಫಾಕ್, ತಂಝೀಮ್ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಮುಹಿಯುದ್ದೀನ್ ಅಲ್ತಾಫ್ ಖರೂರಿ, ಭಟ್ಕಳ ಮುಸ್ಲಿಮ್ ಯೂತ್ ಫೆಡರೇಶನ್ ಅಧ್ಯಕ್ಷ ಇಮ್ತಿಯಾಝ್ ಉದ್ಯಾವರ್, ಬಶೀರ್ ದಾಮ್ದಾ, ಇರ್ಷಾದ್ ಖತೀಬ್, ಕಟ್ಟೇವೀರ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ಶ್ರೀಧರ ನಾಯ್ಕ, ಕಟ್ಟೇವೀರ ಯುವ ಶಕ್ತಿ ಸಂಘದ ಅಧ್ಯಕ್ಷ ಹನುಮಂತ ನಾಯ್ಕ, ಕೇಂದ್ರ ಸಂಪನ್ಮೂಲ ವ್ಯಕ್ತಿ ರಾಘವೇಂದ್ರ ಅಡಿಗ, ಮುಠ್ಠಳ್ಳಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯಾಧ್ಯಾಪಕ ಗಜಾನನ ನಾಯ್ಕ, ಶಾಲಾ ಶಿಕ್ಷಕರು, ಶಾಲಾಭಿವೃದ್ಧಿ ಸಮಿತಿ ಮಾಜಿ ಅಧ್ಯಕ್ಷ ಕೃಷ್ಣ ನಾಯ್ಕ ಸೇರಿದಂತೆ ಸಾರ್ವಜನಿಕರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News