ಕೇಂದ್ರ ಮತ್ತು ರಾಜ್ಯ ಸರಕಾರ ವಿರುದ್ಧ ಪುಟ್ಟಣ್ಣಯ್ಯ ಆಕ್ರೋಶ
ಮಂಡ್ಯ, ಜು.14: ಹೇಮಾವತಿ ಜಲಾಶಯದ ಮೂಲಕ ತಾಲೂಕಿನ ಹಳೆಯ ನಾಲೆ ಹಾಗೂ ಕೆರೆ-ಕಟ್ಟೆಗಳಿಗೆ ನೀರು ಹರಿಸಲು ಒತ್ತಾಯಿಸಿ ಗುರುವಾರ ಕೃಷ್ಣರಾಜಪೇಟೆಯಲ್ಲಿ ರೈತಸಂಘದ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಯಿತು.ರೈತಸಂಘ, ಕರವೇ ಸೇರಿದಂತೆ ಇತರೆ ಪ್ರಗತಿಪರ ಸಂಘಟನೆಗಳ ನೂರಾರು ಕಾರ್ಯಕರ್ತರು ಎತ್ತಿನಗಾಡಿ ಮೆರವಣಿಗೆ ನಡೆಸಿ, ಮೈಸೂರು-ಚನ್ನರಾಯಪಟ್ಟಣ ರಸ್ತೆತಡೆ ಮಾಡುವ ಮೂಲಕ ನೀರು ಬಿಡುಗಡೆಗೆ ಆಗ್ರಹಿಸಿದರು.
ಮನವಿ ಸ್ವೀಕರಿಸಿದ ಹೇಮಾವತಿ ಜಲಾಶಯ ಯೋಜನೆಯ ಮುಖ್ಯ ಇಂಜಿನಿಯರ್ ಪ್ರಸನ್ನ ತಕ್ಷಣವೇ ಕಾವೇರಿ ಸಲಹಾ ಸಮಿತಿಯ ಸಭೆ ಕರೆದು ಜಲಾಶಯದಿಂದ ನೀರುಹರಿಸುವಂತೆ ಮುಖ್ಯಮಂತ್ರಿ ಮತ್ತು ನೀರಾವರಿ ಸಚಿವರಲ್ಲಿ ಮನವಿ ಮಾಡಲಾಗುವುದು ಎಂದು ಭರವಸೆ ನೀಡಿದರು.
ಈ ಸಂಬಂಧ ತಾಲೂಕು ಕಚೇರಿ ಆವರಣದಲ್ಲಿ ಏರ್ಪಡಿಸಿದ್ದ ಬೃಹತ್ ಪ್ರತಿಭಟನಾ ಸಭೆಯನ್ನುದ್ದೇಶಿಸಿ ಮಾತನಾಡಿದ ಶಾಸಕ ಕೆ.ಎಸ್.ಪುಟ್ಟಣ್ಣಯ್ಯ, ರಾಜ್ಯ ಸರಕಾರವು ನ್ಯಾಯಾಲಯದ ಆದೇಶಕ್ಕೆ ಹೆದರಿ ನಾಲೆಗಳಲ್ಲಿ ನೀರುಹರಿಸದೆ ರೈತರಿಗೆ ಅನ್ಯಾಯ ಮಾಡುತ್ತಿದೆ ಎಂದು ಕಿಡಿಕಾರಿದರು.
ಕಾವೇರಿ ಜಲವಿವಾದ ಆರಂಭಕ್ಕೆ ಮುನ್ನವೇ ರಾಜ ಮಹಾರಾಜರ ಕಾಲದಲ್ಲಿ ಮಂದಗರೆ, ಹೇಮಗಿರಿ ಮತ್ತು ಅಕಿ್ಕಹೆಬ್ಬಾಳು ನದಿ ಅಣೆಕಟ್ಟೆ ನಾಲೆಗಳನ್ನು ನಿರ್ಮಿಸಲಾಗಿತ್ತು. ಆದ್ದರಿಂದ ಈ ನಾಲೆಗಳ ನೀರು ಬಳಕೆದಾರರು ಹೇಮಾವತಿ ನದಿ ನೀರಿನ ಮೂಲ ಹಕ್ಕುದಾರರು ಎಂದು ಅವರು ಪ್ರತಿಪಾದಿಸಿದರು.
ರಾಜ್ಯ ಸರಕಾರ ನದಿಯ ನೀರನ್ನು ಕಾಲುವೆಗಳಲ್ಲಿ ಹರಿಸದೆ ಹೇಮಾವತಿ ಜಲಾಶಯದಲ್ಲಿ ಸಂಗ್ರಹಿಸಿಡುವ ಮೂಲಕ ರೈತರ ನೀರಿನ ಹಕ್ಕನ್ನು ಕಿತ್ತು ತಮಿಳುನಾಡಿಗೆ ಕೊಡುಗೆಯಾಗಿ ನೀಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು, ಕೂಡಲೇ ಹೇಮಾವತಿ ನೀರಿನಿಂದ ತಾಲೂಕಿನ ಕೆರೆ-ಕಟ್ಟೆಗಳನ್ನು ತುಂಬಿಸಿ ಜನ-ಜಾನುವಾರುಗಳಿಗೆ ಕುಡಿಯುವ ನೀರು ಒದಗಿಸಬೇಕೆಂದು ಆಗ್ರಹಿಸಿದರು.
ಸ್ವಾತಂತ್ರ್ಯ ಪೂರ್ವದಲ್ಲಿ ಮಾಡಿಕೊಂಡ ತಮಿಳುನಾಡು ಮತ್ತು ಕರ್ನಾಟಕ ನಡುವಿನ ಕಾವೇರಿ ನದಿ ನೀರು ಹಂಚಿಕೆ ಒಪ್ಪಂದವು ಮುಗಿದು 40 ವರ್ಷಗಳಾಗಿದ್ದು, ಹಳೆಯ ಒಪ್ಪಂದವನ್ನು ರದ್ದು ಪಡಿಸಬೇಕು. ಮಳೆಯನ್ನು ಆಧರಿಸಿ ನೀರು ಹಂಚಿಕೆ ಮಾಡುವಂತಹ ವೈಜ್ಞಾನಿಕವಾದ ಹೊಸ ಒಪ್ಪಂದವನ್ನು ಮಾಡಬೇಕು ಎಂದು ಪುಟ್ಟಣ್ಣಯ್ಯ ಒತ್ತಾಯಿಸಿದರು.
ಬರದಿಂದಾಗಿ ಸುಮಾರು 4 ಕೋಟಿ ತೆಂಗಿನ ಮರ ನಾಶವಾಗಿವೆ. ಹಾಗೆಯೇ ಅಡಿಕೆ, ಮಾವು, ಬಾಳೆ ಇತರ ಬೆಳೆಗಳು ನಾಶವಾಗಿದ್ದು, ಕೂಡಲೇ ನಷ್ಟಪರಿಹಾರ ನೀಡಬೇಕು. ಉಪಉತ್ಪನ್ನ ಆಧರಿಸಿ ಟನ್ ಕಬ್ಬಿಗೆ ಕನಿಷ್ಠ 3,500 ರೂ.ನಿಗದಿಪಡಿಸಬೇಕು ಎಂದೂ ಅವರು ತಾಕೀತು ಮಾಡಿದರು.
ರೈತ ಸಂಘದ ರಾಜ್ಯಾಧ್ಯಕ್ಷ ಕೆ.ಟಿ.ಗಂಗಾಧರ್, ಉಪಾಧ್ಯಕ್ಷ ನರಸರಾಜು, ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ನಂದಿನಿ ಜಯರಾಂ, ತಾಲೂಕು ಅಧ್ಯಕ್ಷ ಮರುವನಹಳ್ಳಿ ಶಂಕರ್, ಕರವೇ ಅಧ್ಯಕ್ಷ ಹೊನ್ನೇನಹಳ್ಳಿ ವೇಣು, ಮುದುಗೆರೆ ರಾಜೇಗೌಡ, ಕೆ.ಆರ್.ಜಯರಾಂ, ನಾರಾಯಣಸ್ವಾಮಿ, ಜಯಲಕ್ಷ್ಮಮ್ಮ, ವಸಂತಮ್ಮ, ಶಶಿಕಲಾ, ಬೂಕನಕೆರೆ ನಾಗರಾಜು, ಇತರ ಮುಖಂಡರು ಉಪಸ್ಥಿತರಿದ್ದರು.