ಸೇನೆ, ಭದ್ರತಾ ಪಡೆಗಳಿಂದ ಕಾನೂನು ಬಾಹಿರ ಹತ್ಯೆ:ಸಿಬಿಐ ತನಿಖೆಗೆ ಸುಪ್ರೀಂ ಆದೇಶ

Update: 2017-07-14 14:48 GMT

ಹೊಸದಿಲ್ಲಿ, ಜು.14: ಮಣಿಪುರದಲ್ಲಿ ಸೇನೆ, ಅಸ್ಸಾಂ ರೈಫಲ್ಸ್ ಮತ್ತು ಮಣಿಪುರ ಪೊಲೀಸರು ನಡೆಸಿದ್ದಾರೆ ಎನ್ನಲಾದ ನ್ಯಾಯೇತರ ಹತ್ಯೆಗಳನ್ನು ಸಿಬಿಐಗೆ ಒಪ್ಪಿಸಲು ಸುಪ್ರೀಂಕೋರ್ಟ್ ಆದೇಶಿಸಿದೆ.

ಹತ್ಯೆ ಆರೋಪದ ಬಗ್ಗೆ ತನಿಖೆ ನಡೆಸುವ ನಿಟ್ಟಿನಲ್ಲಿ ಅಧಿಕಾರಿಗಳ ತಂಡವೊಂದನ್ನು ನೇಮಿಸುವಂತೆ ನ್ಯಾಯಮೂರ್ತಿಗಳಾದ ಎಂ.ಬಿ.ಲೋಕುರ್ ಹಾಗೂ ಯು.ಯು.ಲಲಿತ್ ಅವರಿದ್ದ ನ್ಯಾಯಪೀಠ ಸಿಬಿಐಗೆ ಸೂಚಿಸಿದೆ.

 ಮಣಿಪುರದಲ್ಲಿ 2000ದಿಂದ 2012ರವರೆಗಿನ ಅವಧಿಯಲ್ಲಿ ಭದ್ರತಾ ಪಡೆಗಳಿಂದ ಮತ್ತು ಪೊಲೀಸರಿಂದ 1,528 ನ್ಯಾಯೇತರ ಹತ್ಯೆಗಳು ನಡೆದಿದ್ದು ಈ ಬಗ್ಗೆ ತನಿಖೆ ನಡೆಸಬೇಕು ಮತ್ತು ಸಂತ್ರಸ್ತರಿಗೆ ಪರಿಹಾರ ನೀಡಬೇಕೆಂದು ಕೋರಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ನಡೆಸಿದ ನ್ಯಾಯಾಲಯ ಈ ಆದೇಶ ನೀಡಿದೆ.

 ಅಲ್ಲದೆ ನಕಲಿ ಎನ್‌ಕೌಂಟರ್ ಎನ್ನಲಾಗಿರುವ ಪ್ರಕರಣಗಳ ಕುರಿತು ಕ್ರಮ ಕೈಗೊಳ್ಳದ ಬಗ್ಗೆ ಮಣಿಪುರ ಸರಕಾರವನ್ನು ತರಾಟೆಗೆ ಎತ್ತಿಕೊಂಡಿರುವ ನ್ಯಾಯಪೀಠ, ಈ ವಿಷಯದಲ್ಲಿ ತಾನು ಏನನ್ನೂ ಮಾಡಬೇಕೆಂದಿಲ್ಲ ಎಂದು ಸರಕಾರ ಭಾವಿಸಿದೆಯೇ ಎಂದು ಪ್ರಶ್ನಿಸಿತು.

  ಜಮ್ಮು-ಕಾಶ್ಮೀರ, ಮಣಿಪುರ ಇತ್ಯಾದಿ ಗಲಭೆ ಪೀಡಿತ ಪ್ರದೇಶಗಳಲ್ಲಿ ನಡೆಸುವ ಭಯೋತ್ಪಾದಕ ನಿಗ್ರಹ ಕಾರ್ಯಾಚರಣೆಯನ್ನು ಎಫ್‌ಐಆರ್ ವ್ಯಾಪ್ತಿಗೆ ಒಳಪಡಿಸುವಂತಿಲ್ಲ . ಅಲ್ಲದೆ ಈ ಪ್ರದೇಶದಲ್ಲಿ ನಡೆಸಲಾದ ನ್ಯಾಯಾಂಗ ತನಿಖೆಯು ಪಕ್ಷಪಾತದಿಂದ ಕೂಡಿದ್ದು ತನ್ನ ಪ್ರತಿಷ್ಠೆಗೆ ಘಾಸಿ ಎಸಗಿದೆ . ಈ ತನಿಖೆ ನಡೆಸಿರುವ ಜಿಲ್ಲಾ ನ್ಯಾಯಾಧೀಶರು ಸ್ಥಳೀಯರಾಗಿದ್ದು , ಸ್ಥಳೀಯ ಅಂಶಗಳು ಇವರು ನಡೆಸಿದ ತನಿಖೆಯ ಮೇಲೆ ಪ್ರಭಾವ ಬೀರಿವೆ. ಆದ್ದರಿಂದ ತನಿಖಾ ವರದಿ ತಮ್ಮ ವಿರುದ್ಧ ಬಂದಿದೆ ಎಂದು ಸೇನೆ ಈ ಮುನ್ನ ಸುಪ್ರೀಂಕೋರ್ಟ್‌ನಲ್ಲಿ ಹೇಳಿಕೆ ನೀಡಿತ್ತು.

 ಪ್ರತಿಯೊಂದು ಸೈನಿಕ ಕಾರ್ಯಾಚರಣೆಯ ಸಂದರ್ಭವೂ ಸೇನೆಯ ಬಗ್ಗೆ ಅಪನಂಬಿಕೆಯ ಧೋರಣೆ ಸರಿಯಲ್ಲ. ಮಣಿಪುರದಲ್ಲಿ ಸೇನೆ ನಡೆಸಿದ ಕಾರ್ಯಾಚರಣೆಯನ್ನು ಕಗ್ಗೊಲೆ ಎನ್ನುವಂತಿಲ್ಲ, ಇದೊಂದು ಸೇನಾ ಕಾರ್ಯಾಚರಣೆ ಎಂದು ಕೇಂದ್ರ ಸರಕಾರ ನ್ಯಾಯಾಲಯಕ್ಕೆ ತಿಳಿಸಿತು.

 ಮಣಿಪುರದಲ್ಲಿ ಸಂಭವಿಸಿದ 265 ನ್ಯಾಯೇತರ ಹತ್ಯೆಗಳ ಪ್ರಕರಣಗಳನ್ನು ಪ್ರತ್ಯೇಕಿಸುವಂತೆ ಸುಪ್ರೀಂಕೋರ್ಟ್ ಸೂಚಿಸಿದ ಪ್ರಕಾರ 70 ಪ್ರಕರಣಗಳು ಸೇನೆ ಹಾಗೂ ಅಸ್ಸಾಂ ರೈಫಲ್ಸ್ ವಿಭಾಗಕ್ಕೆ ಸಂಬಂಧಿಸಿದ್ದು ಉಳಿದ ಪ್ರಕರಣಗಳು ರಾಜ್ಯ ಪೊಲೀಸರಿಗೆ ಸಂಬಂಧಿಸಿದ್ದು ಎಂದು ಸರಕಾರ ತಿಳಿಸಿತ್ತು.

    ವಿವಾದಿತ ‘ಶಸ್ತ್ರಾಸ್ತ್ರ ಪಡೆಗಳ ವಿಶೇಷ ಅಧಿಕಾರ ಕಾಯ್ದೆ’ಯಡಿ , ಮಣಿಪುರದ ಗಲಭೆಪೀಡಿತ ಪ್ರದೇಶಗಳಲ್ಲಿ ಸೇನೆ ಅಥವಾ ಪೊಲೀಸರು ಮಿತಿಮೀರಿದ ಅಥವಾ ಪ್ರತೀಕಾರದ ಕ್ರಮ ಕೈಗೊಳ್ಳುವಂತಿಲ್ಲ ಎಂದು ತಿಳಿಸಿದ್ದ ನ್ಯಾಯಾಲಯ, ನಕಲಿ ಎನ್‌ಕೌಂಟರ್ ಎಂದು ಆರೋಪಿಸಲಾಗಿರುವ ಪ್ರಕರಣಗಳ ಬಗ್ಗೆ ಕೂಲಂಕುಷ ತನಿಖೆ ನಡೆಸಬೇಕು ಎಂದು ಸೂಚಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News