×
Ad

ಅಶ್ಲೀಲ ಚಿತ್ರ ಪ್ರದರ್ಶನ ಆರೋಪ: ಸೈಬರ್ ಕ್ರೈಂವಿಭಾಗದಿಂದ ತನಿಖೆ

Update: 2017-07-14 17:54 IST

ಮಡಿಕೇರಿ ಜು.14: ಸರ್ಕಾರಿ ಯೋಜನೆಗಳ ಕುರಿತು ಮಾಹಿತಿ ನೀಡಲು ನಗರಸಭೆಯಲ್ಲಿ ಅಳವಡಿಸಿರುವ ಡಿಜಿಟಲ್ ಸ್ಕ್ರೀನ್‌ನಲ್ಲಿ ಅಶ್ಲೀಲ ಚಿತ್ರ ಪ್ರದರ್ಶನಗೊಂಡಿದೆ ಎನ್ನುವ ಆರೋಪದ  ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾ ಪೊಲೀಸ್ ಇಲಾಖೆಯ ಸೈಬರ್ ಕ್ರೈಂ ವಿಭಾಗಕ್ಕೆ ದೂರನ್ನು ಸಲ್ಲಿಸಲಾಗಿದ್ದು, ಪ್ರಕರಣದ ಸತ್ಯಾಸತ್ಯತೆಯ ಕುರಿತು ತನಿಖೆ ನಡೆಯಲಿದೆ ಎಂದು ನಗರಸಭಾ ಅಧ್ಯಕ್ಷರಾದ ಕಾವೇರಮ್ಮ ಸೋಮಣ್ಣ ತಿಳಿಸಿದ್ದಾರೆ.

ನಗರಸಭೆಯ ತಮ್ಮ ಕಛೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇದೇ ಜುಲೈ 5 ರಂದು ಅಶ್ಲೀಲ ಚಿತ್ರ ಪ್ರದರ್ಶನವಾದ ಬಗ್ಗೆ ತನಗೆ ಯಾವುದೇ ಮಾಹಿತಿಗಳಿಲ್ಲ. ಆದರೆ ವಿಷಯ ತಿಳಿದಿದೆ ಎಂದು ಹೇಳಿರುವ ಸ್ಥಾಯಿ ಸಮಿತಿ ಅಧ್ಯಕ್ಷರಾದ ಕೆ.ಎಸ್.ರಮೇಶ್ ಅವರು ಈ ಬಗ್ಗೆ ನನ್ನೊಂದಿಗೆ ಚರ್ಚಿಸಬಹುದಿತ್ತು. ಇದನ್ನು ಬಿಟ್ಟು ಮಾಧ್ಯಮಗಳಿಗೆ ತೆರಳಿ ತನ್ನ ವಿರುದ್ಧ ಇಲ್ಲಸಲ್ಲದ ಆರೋಪಗಳನ್ನು ಮಾಡಿರುವುದು ಅತ್ಯಂತ ನೋವಿನ ಬೆಳವಣಿಗೆ ಎಂದರು.

ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೆ ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರನ್ನು ಸಲ್ಲಿಸಲಾಗಿದ್ದು, ಸೈಬರ್ ಕ್ರೈಂ ಮೂಲಕ ತನಿಖೆ ಶೀಘ್ರ ನಡೆಯಲಿದೆ ಎಂದು ಅವರು ಹೇಳಿದರು.

ಸ್ಥಾಯಿ ಸಮಿತಿ ಅಧ್ಯಕ್ಷರಿಗೂ ಜವಬ್ದಾರಿ ಇದೆ

ನಗರಸಭೆಯ ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನ ಜವಾಬ್ದಾರಿಯುತವಾದದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ತನ್ನೊಂದಿಗೆ ಚರ್ಚಿಸುವುದಕ್ಕೆ ಬದಲಾಗಿ ತನ್ನ ವಿರುದ್ಧ ಆರೋಪಗಳನ್ನು ಮಾಡಿರುವ ಕೆ.ಎಸ್.ರಮೇಶ್ ಅವರೆ ಅಹಿತಕರ ಬೆಳವಣಿಗೆಗೆ ಕಾರಣರಾಗಿದ್ದಾರೆ ಎಂದು ಆರೋಪಿಸಿದರು.

ನಗರಸಭೆೆಯ ಡಿಜಿಟಲ್ ಸ್ಕ್ರೀನ್‌ನ ನಿರ್ವಹಣೆಯನ್ನು ಸಂಧ್ಯಾ ಎಂಬುವವರು ನಿರ್ವಹಿಸುತ್ತಿದ್ದಾರೆ. ಜು.5 ರಂದು ಮಧ್ಯಾಹ್ನ ನಗರಸಭೆಯ ಆರೋಗ್ಯ ನಿರೀಕ್ಷಕ ರಮೇಶ್ ಅವರು ಸ್ಕ್ರೀನ್‌ನಲ್ಲಿ ಸರಕಾರದ ಯೋಜನೆಗಳ ಮಾಹಿತಿಯನ್ನು ಹೊರತು ಪಡಿಸಿ ಬೇರೇನೋ ಬರುತ್ತಿರುವುದನ್ನು ಗಮನಿಸಿ ತಕ್ಷಣ ಅದನ್ನು ಸಂಧ್ಯಾ ಅವರಿಗೆ ತಿಳಿಸುವ ಮೂಲಕ ನಿಲ್ಲಿಸಿದ್ದಾರೆ. ಈ ಘಟನೆಯ ಬಳಿಕ ಜು.11 ರಂದು ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಎಸ್.ರಮೇಶ್ ಅವರು ಮಾಧ್ಯಮಗಳಿಗೆ ಹೇಳಿಕೆ ನೀಡಿ ಅಶ್ಲೀಲ ಚಿತ್ರ ಪ್ರದರ್ಶನವಾಗಿದೆ ಎಂದು ಆರೋಪಿಸಿದ್ದಾರೆ. ಅಧ್ಯಕ್ಷರಿಗೆ ಆಡಳಿತ ನಡೆಸಲು ಬರುವುದಿಲ್ಲ, ಅಧಿಕಾರಿಗಳ ಮೇಲೆ ಹಿಡಿತವಿಲ್ಲ. ರಾಜೀನಾಮೆ ನೀಡಬೇಕು ಮೊದಲಾಗಿ ಟೀಕಿಸಿದ್ದಾರೆ. ಈ ಬಗ್ಗೆ ಕನಿಷ್ಠ ತನ್ನೊಂದಿಗೆ ಮಾತುಕತೆ ನಡೆಸದೆ ಕೆ.ಎಸ್. ರಮೇಶ್ ಅವರು ಅಧ್ಯಕ್ಷಳಾದ ತನ್ನನ್ನು ಹೊಣೆ ಮಾಡಿದ್ದು ಯಾಕೆ ಎಂದು ಕಾವೇರಮ್ಮ ಸೋಮಣ್ಣ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಅಸಭ್ಯ ದೃಶ್ಯ ಇರಲಿಲ್ಲ: ಈ ಹಂತದಲ್ಲಿ ಗೋಷ್ಠಿಗೆ ಕರೆಸಲ್ಪಟ್ಟ ಆರೋಗ್ಯ ನಿರೀಕ್ಷಕ ರಮೇಶ್, ಜು.5 ರಂದು ಸ್ಕ್ರೀನ್‌ನಲ್ಲಿ ಸರಕಾರದ ಯೋಜನೆ ಮಾಹಿತಿ ಬಿಟ್ಟು ಇತರೆ ಮಾಹಿತಿ ಬರುತ್ತಿತ್ತು. ಅದನ್ನು ನಿಲ್ಲಿಸಿದ್ದೇನೆಯೇ ಹೊರತು ಅದರಲ್ಲಿ ಅಸಭ್ಯವಾದದ್ದು ಇರಲಿಲ್ಲವೆಂದು ಸ್ಪಷ್ಟಪಡಿಸಿದರು.

ದೂರು ಸಲಿಸುತ್ತೇವೆ

ನಗರಸಭೆಯ ಕಾಂಗ್ರೆಸ್ ಸದಸ್ಯ ಹೆಚ್.ಎಂ.ನಂದಕುಮಾರ್ ಮಾತನಾಡಿ, ಸರಕಾರದ ಮಾಹಿತಿಯನ್ನು ಸ್ಕ್ರೀನ್‌ನಲ್ಲಿ ಪ್ರಸಾರ ಮಾಡುವ ಕಾರ್ಯದ ಜವಾಬ್ದಾರಿ ಸಂಧ್ಯಾ ಎಂಬವರದ್ದಾಗಿದ್ದು, ಇವರನ್ನು ಆ ಹುದ್ದೆಯಿಂದ ಓಡಿಸಬೇಕೆನ್ನುವ ಪ್ರಯತ್ನ ಸಾಕಷ್ಟು ಸಮಯದಿಂದ ನಡೆಯುತ್ತಿದೆ. ಇದೀಗ ಇದರ ಭಾಗವಾಗಿ ಅಶ್ಲೀಲ ಚಿತ್ರ ಪ್ರಸಾರದ ಅಪಪ್ರಚಾರ ಮಾಡಲಾಗುತ್ತಿದೆ ಎಂದು ಆರೋಪಿಸಿದರು. ಒಟ್ಟು ಪ್ರಕರಣಕ್ಕೆ ಸಂಬಂಧಿಸಿದಂತೆ ಅಪಪ್ರಚಾರ ಮಾಡಿರುವ ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಎಸ್. ರಮೇಶ್, ಟಿ.ಎಸ್. ಪ್ರಕಾಶ್ ವಿರುದ್ಧ ದೂರು ಸಲ್ಲಿಸಲಾಗುವುದು ಎಂದು ಸ್ಪಷ್ಟಪಡಿಸಿದರು.

ನಗರಸಭೆಯ ಕೆಲವು ಕಟ್ಟಡ ಕಾಮಗಾರಿಗಳಿಗೆ ಸಂಬಂಧಿಸಿದಂತೆ ನಾವು ಹೇಳಿದಂತೆ ಕೇಳುತ್ತಿಲ್ಲ ಎನ್ನುವ ಕಾರಣದಿಂದ ಕೆಲವು ಸದಸ್ಯರು ಕುತಂತ್ರ ನಡೆಸಿದ್ದಾರೆ ಎಂದು ನಂದಕುಮಾರ್ ಆರೋಪಿಸಿದರು.

ಅಧ್ಯಕ್ಷರಿಗೆ ಆಡಳಿತದ ಮೇಲೆ ಹಿಡಿತ ಇಲ್ಲ ಎನ್ನುವ ಆರೋಪಗಳಲ್ಲಿ ಹುರುಳಿಲ್ಲವೆಂದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News