700 ಕಿ.ಮೀ. ಪಾದಯತ್ರೆ ಕ್ರಮಿಸಿದ ಶಾಸಕ ವೈ.ಎಸ್.ವಿ. ದತ್ತ
ಕಡೂರು, ಜು.14: ಕಳೆದ 20 ದಿನಗಳಿಂದ ಪಾದಯಾತ್ರೆ ಕೈಗೊಂಡಿರುವ ಶಾಸಕ ವೈಎಸ್‌ವಿ ದತ್ತ, ಸುಮಾರು 700 ಕ್ಕೂ ಹೆಚ್ಚು ಕಿ.ಮೀ. ಪಾದಯಾತ್ರೆ ಕ್ರಮಿಸಿರುತ್ತಾರೆ. ಕ್ಷೇತ್ರದಾದ್ಯಂತ 1000 ಕಿ.ಮೀ. ಪಾದಯಾತ್ರೆ ಕೈಗೊಂಡಿರುತ್ತಾರೆ. ಇದೇ ತಿಂಗಳ 25ಕ್ಕೆ ಪಾದಯಾತ್ರೆ ಪೂರ್ಣಗೊಳ್ಳಲಿದೆ. ಇಡೀ ರಾಜ್ಯದಲ್ಲಿ ಈ ಪಾದಯಾತ್ರೆ ದಾಖಲೆಯಾಗಲಿದೆ.
ಪಾದಯಾತ್ರೆ ಸಂದರ್ಭದಲ್ಲಿ ಬೀರೂರು ಪಟ್ಟಣದಲ್ಲಿ ಪ್ರತಿ ವಾರ್ಡಿನಲ್ಲೂ ಪಾದಯಾತ್ರೆ ಕೈಗೊಂಡು ವಾರ್ಡುಗಳ ಸಮಸ್ಯೆಗಳನ್ನು ತಿಳಿದುಕೊಂಡು ನಂತರ ಪಟ್ಟಣದ ಉಪ್ಪಾರ ಕ್ಯಾಂಪಿನ ಬಾವಿಮನೆ ಮಧು ಮನೆಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.
ಕಳೆದ 20 ದಿನಗಳಲ್ಲಿ 275 ಗ್ರಾಮಗಳಿಗೆ ಭೇಟಿ ನೀಡಿರುತ್ತೇನೆ. ಶೇ.75ರಷ್ಟು ಗ್ರಾಪಂ ಗ್ರಾಮಗಳಿಗೆ ಭೇಟಿ ನೀಡಲಾಗಿದೆ. ಪ್ರತಿ ಗ್ರಾಮಗಳಲ್ಲೂ ಕುಡಿಯುವ ನೀರಿನದ್ದೇ ಸಮಸ್ಯೆಯಾಗಿದೆ. ಆದರೆ ಸ್ವರೂಪಗಳು ಬೇರೆ ಬೇರೆ ಇವೆ. ಕೆಲವು ಗ್ರಾಮಗಳಲ್ಲಿ ಬೋರ್‌ವೆಲ್‌ಗಳಲ್ಲಿ ನೀರಿದ್ದರೆ, ವಿದ್ಯುತ್ ಸಮಸ್ಯೆ. ಕೆಲವು ಕಡೆ ಬೋರ್‌ವೆಲ್ ಕೊರೆಸಿದರೂ ನೀರು ಸಿಗುತ್ತಿಲ್ಲ. ಇಂತಹ ಗ್ರಾಮಗಳಿಗೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ ಎಂದರು.
ಯಾವುದೇ ಗ್ರಾಮಗಳಲ್ಲಿ ಶಾಸಕರ ಬಗ್ಗೆ ಅಸಹಾಕಾರ ಭಾವನೆ ತೋರಿಸಿಲ್ಲ. 3-4 ಗ್ರಾಮಗಳಲ್ಲಿ ಆಕ್ರೋಶವನ್ನು ವ್ಯಕ್ತಪಡಿಸಿರುತ್ತಾರೆ. ಕುಡಿಯುವ ನೀರಿನ ತೊಂದರೆ ನಿವಾರಿಸಲು ಮುಖ್ಯಮಂತ್ರಿಗಳಿಂದ ಮೂರು ಕೋಟಿ ರೂ. ವಿಶೇಷ ಅನುದಾನ ತರಲಾಗಿದೆ. ಇನ್ನೂ ಹೆಚ್ಚಿನ ಆರು ಕೋಟಿ ರೂ.ಗಳ ಅನುದಾನ ಬೇಕಿದೆ. ಹೆಚ್ಚಿನ ಬೇಡಿಕೆ ಕಾಂಕ್ರೀಟ್ ರಸ್ತೆ ನಿರ್ಮಾಣವಾಗಬೇಕು ಎಂಬುದಾಗಿದೆ ಎಂದರು.
ಕಳೆದ ವಾರ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಕಾಂಕ್ರೀಟ್ ರಸ್ತೆ ನಿರ್ಮಾಣಕ್ಕೆ ವಿಶೇಷ 12 ಕೋಟಿ ರೂ.ಗಳ ಅನುದಾನ ತರಲಾಗಿದೆ. ಈ ಹಣದಲ್ಲಿ ಸಾಮಾನ್ಯ ವರ್ಗದ ಗ್ರಾಮಗಳಿಗೆ ಆದ್ಯತೆ ನೀಡಲಾಗುವುದು. ಜಾನುವಾರುಗಳಿಗೆ ಮೇವಿನ ತೊಂದರೆಯಿಂದ ಗೋಶಾಲೆ ದೊರೆಯಬೇಕು ಎಂಬ ಅಭಿಪ್ರಾಯವಿದ್ದು, ಬೀರೂರು ಭಾಗದಲ್ಲಿ ಮೇವಿನ ಬ್ಯಾಂಕ್ ತೆರೆಯಲಾಗುವುದು ಎಂದು ತಿಳಿಸಿದರು.