ಡೆಂಗ್ ಅರಿವು ಮೂಡಿಸಲು ಮುಂದಾಗಿ: ಸಚಿವ ಟಿ.ಬಿ.ಜಯಚಂದ್ರ
ತುಮಕೂರು, ಜು.14: ತುಮಕೂರು ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಡೆಂಗ್ ಹಾಗೂ ಚಿಕುನ್‌ಗುನ್ಯಾ ರೋಗಗಳ ನಿಯಂತ್ರಣದ ಬಗ್ಗೆ ಜನರಲ್ಲಿ ಅರಿವು ಮೂಡಿಸಬೇಕು. ಹಾಗೂ ಸ್ಥಳೀಯ ಸಂಸ್ಥೆಗಳು ಮತ್ತು ಇಲಾಖೆಗಳು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳು ಮತ್ತು ಸಣ್ಣ ನೀರಾವರಿ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಟಿ.ಬಿ.ಜಯಚಂದ್ರ ಸೂಚಿಸಿದ್ದಾರೆ.
ಜಿಲ್ಲಾಧಿಕಾರಿಗಳ ಕಛೇರಿಯಲ್ಲಿಂದು ನಡೆದ ಚಿಕುನ್‌ಗುನ್ಯಾ ಹಾಗೂ ಡೆಂಗ್ ಕುರಿತಂತೆ ಆರೋಗ್ಯ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳ ಸಭೆಯಲ್ಲಿ ಪರಿಶೀಲನೆ ನಡೆಸಿ ಮಾತನಾಡಿದ ಅವರು, ಡೆಂಗ್ ಮತ್ತು ಚಿಕುನ್‌ಗುನ್ಯಾಗಳ ಮಾರಕ ರೋಗಗಳಲ್ಲ. ಜನರು ಆತಂಕಪಡುವ ಅಗತ್ಯವಿಲ್ಲ.ಶುದ್ಧ ನೀರಿನಲ್ಲಿ ಬೆಳೆಯುವ ಈಡಿಸ್ ಈಜಿಪ್ಟೈ ಸೊಳ್ಳೆಯಿಂದ ಈ ರೋಗಗಳು ಬರುತ್ತಿದ್ದು, ಈ ಸೊಳ್ಳೆಗಳ ನಿಯಂತ್ರಣಕ್ಕಾಗಿ ಜನರ ಸಹಕಾರವು ಮುಖ್ಯ ಎಂದರು.
ಜಿಲ್ಲೆಯಲ್ಲಿ 213 ಮಂದಿ ಡೆಂಗ್ ಪ್ರಕರಣಗಳು ಕಂಡು ಬಂದಿದ್ದು, ತುಮಕೂರು ಜಿಲ್ಲೆಯ ಸರಕಾರಿ ಆಸ್ಪತ್ರೆಯಲ್ಲಿ ಸೂಕ್ತ ಚಿಕಿತ್ಸೆ ದೊರೆಯಲಿದೆ. ಹಾಗೂ ಜಿಲ್ಲೆಯಲ್ಲಿ ಪ್ಲೇಟ್‌ಲೆಟ್ಸ್ ಕೀಟ್‌ಗಳು ಲಭ್ಯವಿದ್ದು, ಬೆಂಗಳೂರು ನಗರಕ್ಕೆ ರೋಗಿಗಳು ತೆರಳದೆ ಇಲ್ಲಿಯೇ ಚಿಕಿತ್ಸೆ ಪಡೆಯುವಂತೆ ಸಚಿವರು ಮನವಿ ಮಾಡಿದರು.
ಜಿಲ್ಲಾಧಿಕಾರಿ ಕೆ.ಪಿ.ಮೋಹನ್‌ರಾಜ್ ಮಾತನಾಡಿ, ಜಿಲ್ಲೆಯ ನಗರ ಪ್ರದೇಶ ಹಾಗೂ ಪಟ್ಟಣ ಪ್ರದೇಶಗಳಲ್ಲಿರುವ ಖಾಲಿ ನಿವೇಶನಗಳಲ್ಲಿ ಬೆಳೆದಿರುವ ಪಾರ್ಥೇನಿಯಂ ಮತ್ತು ಜಾಲಿಯನ್ನು ತೆರವುಗೊಳಿಸಬೇಕು. ಅಗತ್ಯವಿರುವ ಕಡೆ ಪಾಗಿಂಗ್ ಮಾಡುವಂತೆ ಸೂಚಿಸಿದ ಸಚಿವರು, ರೋಗಗಳ ನಿಯಂತ್ರಣಕ್ಕಾಗಿ ಕ್ರಿಯಾ ಯೋಜನೆ ರೂಪಿಸಿ ಜಿಲ್ಲಾಧಿಕಾರಿಗಳಿಗೆ ಸಲ್ಲಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದ ಸಚಿವರು, ಸ್ಥಳೀಯ ಸಂಸ್ಥೆಗಳು, ರೋಟರಿ ಸಂಸ್ಥೆಗಳು, ಸಂಘ ಸಂಸ್ಥೆಗಳ ಸಹಕಾರದೊಂದಿಗೆ ರೋಗ ನಿಯಂತ್ರಣದ ಬಗ್ಗೆ ಜನರಿಗೆ ಅರಿವು ಮೂಡಿಸಬೇಕು ಎಂದರು.
ಜುಲೈ 29ಕ್ಕೆ ಸಿ.ಎಂ
ವಿವಿಧ ಇಲಾಖೆಗಳ ಕಾಮಗಾರಿಗಳ ಶಂಕು ಸ್ಥಾಪನೆ ಹಾಗೂ ಉದ್ಘಾಟನೆಯನ್ನು ನೆರವೇರಿಸಲು ಜುಲೈ 29ರಂದು ಮಾನ್ಯ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ತುಮಕೂರು ನಗರಕ್ಕೆ ಆಗಮಿಸಲಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವರು ತಿಳಿಸಿದರು. ಅಂದು ತುಮಕೂರು ನಗರದ ಗ್ಲಾಸ್ ಹೌಸ್ ಮನೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ರೂ.432 ಕೋಟಿ ರೂ.ಗೂ ಹೆಚ್ಚು ಕಾಮಗಾರಿಗಳ ಲೋಕಾರ್ಪಣೆ ಹಾಗೂ ರೂ.328 ಕೋಟಿ ರೂ.ಗೂ ಹೆಚ್ಚು ಮೊತ್ತದ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸುವರು ಎಂದು ಅವರು ತಿಳಿಸಿದರು.
ಸಭೆಯಲ್ಲಿ ಶಾಸಕರಾದ ಡಾ: ರಫೀಕ್ ಅಹಮ್ಮದ್, ಪೊಲೀಸ್ ವರಿಷ್ಟಾಧಿಕಾರಿ ದಿವ್ಯಾ ವಿ.ಗೋಪಿನಾಥ್, ಸ್ಮಾರ್ಟ್ ಸಿಟಿ ಸಿ.ಇ.ಓ. ಅನಿರುದ್ಧ ಶ್ರವಣ್,ಅಪರ ಜಿಲ್ಲಾಧಿಕಾರಿ ಸಿ. ಅನಿತಾ, ಪ್ರೊಬೇಷನರಿ ಐಎಎಸ್ ಅಧಿಕಾರಿ ಪ್ರೀತಿಗೆಹಲೋಟ್, ಜಿಲ್ಲಾ ಆರೋಗ್ಯ ಕಲ್ಯಾಣಾಧಿಕಾರಿ ಡಾ: ರಂಗಸ್ವಾಮಿ, ಜಿಲ್ಲಾ ಸರ್ವೆಲೆನ್ಸ್ ಅಧಿಕಾರಿ ಡಾ: ಪುರುಷೋತ್ತಮ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು.