×
Ad

ಕೇಂದ್ರಾಡಳಿತ ಪ್ರದೇಶದ ಸ್ಥಾನಮಾನಕ್ಕಾಗಿ ಒತ್ತಾಯ: ಸಿಎನ್‌ಸಿ ಪ್ರತಿಭಟನೆ

Update: 2017-07-14 20:40 IST

ಮಡಿಕೇರಿ ಜು.14 : ಪ್ರತ್ಯೇಕ ಗೂರ್ಖಾ ಲ್ಯಾಂಡ್ ರಾಜ್ಯ ಸ್ಥಾಪನೆಗೆ ಸಂವಿಧಾನ ತಿದ್ದುಪಡಿಯ ಪ್ರಯತ್ನಗಳು ನಡೆಯುತ್ತಿದ್ದು, ಕೊಡಗಿಗೂ ಕೇಂದ್ರಾಡಳಿತ ಪ್ರದೇಶದ ಸ್ಥಾನಮಾನ ಹಾಗೂ ಸ್ವಾಯತ್ತ ಕೊಡವ ಲ್ಯಾಂಡ್ ರಚನೆಗೆ ಅವಕಾಶ ನೀಡಬೇಕೆಂದು ಒತ್ತಾಯಿಸಿ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿತು.  

ಭಾರತದ ಫೆಡರಲ್ ವ್ಯವಸ್ಥೆಯನ್ನು ಮತ್ತಷ್ಟು ಬಲಿಷ್ಟಗೊಳಿಸಬೇಕು ಮತ್ತು ಆಂತರಿಕ ಸ್ವಯಂ ನಿರ್ಣಯ ಹಕ್ಕುಗಳ್ನು ಗೌರವಿಸಬೇಕೆಂಬ ನೈಜ ಕಾಳಜಿ ಇದ್ದಲ್ಲಿ ಗೂರ್ಖಾಗಳ ರಾಜ್ಯ ರಚನೆಯ ಸಂದರ್ಭದಲ್ಲಾದರು ನ್ಯಾಯ ದೊರಕಿಸಿ ಕೊಡಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದರು.  ಗೂರ್ಖಾಗಳಿಗೂ ಕೊಡವರಿಗೂ ಸಾಮ್ಯತೆ ಇರುವುದರಿಂದ ಕೊಡವರ ಹಕ್ಕೊತ್ತಾಯಗಳಿಗೂ ಇದೇ ಸಂದರ್ಭ ಮಾನ್ಯತೆ ನೀಡಬೇಕು. ಕೊಡವರು ಕೂಡಾ ಎರಡನೇ ಮಹಾಯುದ್ಧದಲ್ಲಿ ಭಾಗವಹಿಸಿದ್ದು, ನಾವು ಕೂಡಾ ಗುಡ್ಡಗಾಡು ಪ್ರದೇಶದಲ್ಲಿರುವ ಸೂಕ್ಷ್ಮಾತಿಸೂಕ್ಷ್ಮ ಜನಾಂಗದವರಾಗಿದ್ದೇವೆ. ಗೂರ್ಖಾಗಳಿಗೆ ಕುಕ್ರಿ ಹಿಡಿಯಲು ಅವಕಾಶ ನೀಡಿರುವಂತೆ ಕೊಡವರಿಗೆ ಕೋವಿ ಹಿಡಿಯುವುದಕ್ಕೆ ಕಾನೂನಿನಲ್ಲಿ ವಿನಾಯಿತಿ ನೀಡಲಾಗಿದೆ ಎಂದು ಸಿಎನ್‌ಸಿ ಅಧ್ಯಕ್ಷ ಎನ್.ಯು.ನಾಚಪ್ಪ ಅಭಿಪ್ರಾಯಪಟ್ಟರು.

ಕೊಡವರಿಗೆ ರಾಜಕೀಯ ಬೆಂಬಲವಿಲ್ಲದ ಹಿನ್ನೆಲೆಯಲ್ಲಿ ಕಾನೂನಿನ ಅಡಿಯಲ್ಲಿ ಶಾಂತಿಯುತ ಹೋರಾಟವನ್ನು ನಡೆಸಿಕೊಂಡು ಬರಲಾಗುತ್ತಿದೆ. ಆದರೆ ಸರಕಾರ ಇದನ್ನು ಕೊಡವರ ದೌರ್ಬಲ್ಯ ಎಂದು ಭಾವಿಸದೆ ಹಕ್ಕುಗಳನ್ನು ಮಾನ್ಯ ಮಾಡಬೇಕು ಎಂದು ಒತ್ತಾಯಿಸಿದರು.
ಕೊಡವ ಲ್ಯಾಂಡ್ ಬೇಡಿಕೆ ಕುರಿತು ಜಿಲ್ಲೆಯಾದ್ಯಂತ ಜನಜಾಗೃತಿ ಮೂಡಿಸಲಾಗುವುದೆಂದು ತಿಳಿಸಿದ ಅವರು ಕೊಡವರನ್ನು ಬುಡಕಟ್ಟು ಜನಾಂಗವೆಂದು ಘೋಷಿಸಬೇಕು, ಕೊಡವ ಭಾಷೆಯನ್ನು 8 ನೇ ಪರಿಚ್ಛೇದಕ್ಕೆ ಸೇರಿಸಬೇಕು ಸೇರಿದಂತೆ ವಿವಿಧ ಬೇಡಿಕೆಗಳ ಮನವಿ ಪತ್ರವನ್ನು ಪ್ರತಿಭಟನಾಕಾರರು ಅಪರ ಜಿಲ್ಲಾಧಿಕಾರಿ ಸತೀಶ್ ಕುಮಾರ್ ಅವರಿಗೆ ನೀಡಿದರು. ಸಿಎನ್‌ಸಿ ಪ್ರಮುಖರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News