ಹೆಚ್ಚಿನ ಮರಗಳಿದ್ದರೇ ಕಾಲಕಾಲಕ್ಕೆ ಮಳೆ: ಜಿಲ್ಲಾಧಿಕಾರಿ ರೋಹಿಣಿ ಸಿಂದೂರಿ
ಹಾಸನ, ಜು.14: ಭೂಮಿ ಮೇಲೆ ಹೆಚ್ಚಿನ ಮರಗಳಿದ್ದರೇ ಮಾತ್ರ ಕಾಲಕಾಲಕ್ಕೆ ಹೆಚ್ಚಿನ ಮಳೆ ಬರಲು ಸಾಧ್ಯ ಎಂದು ನೀರಿಗಾಗಿ ಅರಣ್ಯ ಅಭಿಯಾನ ವನ ಮಹೋತ್ಸವದಲ್ಲಿ ನೂತನ ಜಿಲ್ಲಾಧಿಕಾರಿ ರೋಹಿಣಿ ಸಿಂದೂರಿ ಅಭಿಪ್ರಾಯಪಟ್ಟರು.
ನಗರದ ಕೆಎಸ್‌ಆರ್‌ಟಿಸಿ ವಿಭಾಗೀಯ ಕಾರ್ಯಗಾರ, ಹಾಸನ ಅರಣ್ಯ ಇಲಾಖೆ, ಪ್ರಾಧೇಶಿಕ ಅರಣ್ಯ ವಿಭಾಗ ಮತ್ತು ಸಾಮಾಜಿಕ ಅರಣ್ಯ ವಿಭಾಗ, ಹಾಸನ ಹಾಗೂ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ, ಹಾಸನ ಇವರ ಸಂಯಕ್ತಾಶ್ರಯದಲ್ಲಿ ಶುಕ್ರವಾರ ಬೆಳಿಗ್ಗೆ ಹಮ್ಮಿಕೊಳಲಾಗಿದ್ದ ನೀರಿಗಾಗಿ ಅರಣ್ಯ ಅಭಿಯಾನ ವನ ಮಹೋತ್ಸವ ಕಾರ್ಯಕ್ರಮವನ್ನು ಜ್ಯೋತಿ ಬೆಳಗುವುದರ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಡಿಸಿ ಆಗಿ ಇಲ್ಲಿಗೆ ಬಂದಾಗ ಮೊದಲು ಸಮಸ್ಯೆ ಆಗಿ ಕೇಳಿ ಬಂದಿದ್ದು ಕುಡಿಯುವ ನೀರು. ಮೊದಲ ಕಾರ್ಯಕ್ರಮವಾಗಿ ವನಮಹೋತ್ಸವದಲ್ಲಿ ಭಾಗವಹಿಸಿರುವುದು ನನಗೆ ಸಂತೋಷ ತಂದಿದೆ. ಮರಗಳಿದ್ದರೇ ಮಳೆ ಬರಲು ಸಾಧ್ಯ, ಆದರೇ ಅದನ್ನೆ ನಾಶಪಡಿಸಿದರೇ ನೀರಿಲ್ಲದೆ ಪರದಾಡುವ ಪರಿಸ್ಥಿತಿ ನಿರ್ಮಾಣವಾಗುತ್ತದೆ ಎಂದರು.
ಜಿಲ್ಲೆಯಲ್ಲಿ 15 ಲಕ್ಷದ 25 ಸಾವಿರ ಸಸಿಯನ್ನು ಅರಣ್ಯ ಪ್ರದೇಶದಲ್ಲಿ ನೆಡಲಾಗಿದೆ. 36 ಲಕ್ಷ ಗಿಡವನ್ನು ನಾಟಿ ಮಾಡಲಾಗಿದೆ. ನೀಲಗಿರಿ ಇದ್ದ ಕಡೆ ಜಲದ ನೀರು ಬರುವುದು ಕಷ್ಟ. ನೀಲಗಿರಿಯನ್ನು ಬೆಳೆಯದೆ ಮನುಷ್ಯನಿಗೆ ಹಾಗೂ ಪಕ್ಷಿಗಳಿಗೆ ಅವಶ್ಯಕವಾದ ಗಿಡವನ್ನು ಹೆಚ್ಚು ಬೆಳೆಸುವಂತೆ ಕರೆ ನೀಡಿದರು.
ಕ್ಷೇತ್ರದ ಶಾಸಕ ಹೆಚ್.ಎಸ್. ಪ್ರಕಾಶ್ ಮಾತನಾಡಿ, ಯಾವ ಪ್ರದೇಶದಲ್ಲಿ ಮಳೆ ಹೆಚ್ಚು ಆಗುತಿತ್ತು ಅಲ್ಲಿ ಈಗ ಕಡಿಮೆ ಆಗಿದೆ. ಅಧಿಕಾರಿಗಳು ಸರಿಯಾಗಿ ಕರ್ತವ್ಯ ನಿರ್ವಹಿಸದಿದ್ದರೇ ಮೇಲಾಧಿಕಾರಿಗಳು ಅವರನ್ನು ನೀರಿಲ್ಲದ ಜಾಗ ಬೀದರ್ ಮತ್ತು ಗುಲ್ಬರ್ಗಕ್ಕೆ ವರ್ಗಾವಣೆ ಮಾಡುವುದಾಗಿ ಎಚ್ಚರಿಸುತ್ತಿದ್ದರು. ಈಗ ಅದೆ ಭಾಗದಲ್ಲಿ ಹೆಚ್ಚಿನ ಮಳೆ ಆಗುತ್ತಿದೆ ಎಂದರು. ಕಳೆದ ಮೂರು ವರ್ಷಗಳಿಂದ ಜಿಲ್ಲೆಯಲ್ಲಿ ಮಳೆ ಬಂದಿರುವುದಿಲ್ಲ. ಅಂದಿನಿಂದ ಹುಟ್ಟಿದ ಮಕ್ಕಳು ಇನ್ನು ಕೂಡ ಮಳೆ ಹೇಗೆ ಇರುತ್ತದೆ ಎಂಬುದನ್ನು ನೋಡಿಯೇ ಇಲ್ಲ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಕೆಎಸ್‌ಆರ್‌ಟಿಸಿ ಡಿಪೋ ಆವರಣದ ಸುತ್ತ ಗಿಡವನ್ನು ನೆಡಲಾಯಿತು.
ಇದೆ ವೇಳೆ ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿಯ ಅಧ್ಯಕ್ಷರಾದ ಹೆಚ್.ಪಿ. ಮೋಹನ್, ತಾಲ್ಲೂಕು ಪಂಚಾಯಿತಿ ಅಧ್ಯಕ್ಷರಾದ ಬಿ.ಟಿ. ಸತೀಶ್, ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳಾದ ಎ.ಕೆ.ಸಿಂಹ, ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಪರಮೇಶ್ವರ್, ಕೆಎಸ್‌ಆರ್‌ಟಿಸಿ ಡಿಸಿ ಯಶವಂತ್ ಕುಮಾರ್, ಜಿಪಂ ಶಿವಣ್ಣ, ಯೂರೋ ಶಾಲೆ ಪ್ರಾಂಶುಪಾಲ ಸುರೇಶ್ ಕುಮಾರ್ ಇತರರು ಇದ್ದರು. ಅರಣ್ಯ ಉಪ-ಸಂರಕ್ಷಣಾಧಿಕಾರಿ ಕ್ರಾಂತಿ ಸ್ವಾಗತಿಸಿದರು.