ಯುಪಿಎ ಉಗ್ರರ ಪಟ್ಟಿಯಲ್ಲಿ ಮೋಹನ್ ಭಾಗ್ವತ್!

Update: 2017-07-15 04:06 GMT

ಹೊಸದಿಲ್ಲಿ, ಜು.15: ಕೇಂದ್ರದಲ್ಲಿ ಹಿಂದೆ ಅಧಿಕಾರದಲ್ಲಿದ್ದ ಯುಪಿಎ ಸರ್ಕಾರ ತನ್ನ ಅಧಿಕಾರಾವಧಿಯ ಕೊನೆಯ ದಿನಗಳಲ್ಲಿ, ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖ್ಯಸ್ಥ ಮೋಹನ್ ಭಾಗ್ವತ್ ಅವರನ್ನು ಹಿಂದೂ ಉಗ್ರರ ಜಾಲಕ್ಕೆ ಸಂಬಂಧಿಸಿದಂತೆ ಭಯೋತ್ಪಾದಕರ ಕಪ್ಪುಪಟ್ಟಿಯಲ್ಲಿ ಸೇರಿಸುವಂತೆ ಉನ್ನತ ಅಧಿಕಾರಿಗಳಿಗೆ ಸೂಚನೆ ನೀಡಿರುವುದನ್ನು ಪತ್ತೆ ಹಚ್ಚಲಾಗಿದೆ ಎಂದು ಟೈಮ್ಸ್‌ನೌ ಪ್ರಕಟಿಸಿದೆ. ಸಂಸತ್ತಿನ ಮುಂಗಾರು ಅಧಿವೇಶನಕ್ಕೆ ಎರಡು ದಿನಗಳ ಮುನ್ನ ಈ ಸಂಬಂಧದ ಕಡತ ಬಹಿರಂಗವಾಗಿದೆ.

ಅಜ್ಮೀರ್ ಮತ್ತು ಮಲೇಗಾಂವ್ ಸ್ಫೋಟ ಪ್ರಕರಣಗಳ ಬಳಿಕ ಯುಪಿಎ ಸರ್ಕಾರ ಹಿಂದೂ ಉಗ್ರಗಾಮಿ ಎಂಬ ಸಿದ್ಧಾಂತವನ್ನು ಮುಂದಿಟ್ಟು, ಭಾಗ್ವತ್ ಅವರನ್ನು ಸಿಲುಕಿಸುವಂತೆ ರಾಷ್ಟ್ರೀಯ ತನಿಖಾ ಸಂಸ್ಥೆಯ ಮುಖ್ಯಸ್ಥರಿಗೆ ಸೂಚನೆ ನೀಡಿರುವುದಾಗಿ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಹಿಂದೂ ಉಗ್ರಗಾಮಿ ಸಂಘಟನೆ ಅಭಿನವ ಭಾರತ ನಡೆಸಿದ ಅಜ್ಮೀರ್ ಮತ್ತು ಇತರ ಸ್ಫೋಟ ಘಟನೆಗಳಲ್ಲಿ ಭಾಗ್ವತ್ ಅವರು ವಹಿಸಿದ್ದ ಪಾತ್ರದ ಬಗ್ಗೆ ಅವರನ್ನು ಪ್ರಶ್ನಿಸಲು ಎನ್‌ಐಎ ಅಧಿಕಾರಿಗಳು ಮುಂದಾಗಿದ್ದರು ಎನ್ನುವುದು ಎನ್‌ಐಎ ದಾಖಲೆಗಳಿಂದ ಗೊತ್ತಾಗಿದೆ. ಅಂದಿನ ಗೃಹಸಚಿವ ಸುಶೀಲ್‌ಕುಮಾರ್ ಶಿಂಧೆ ನೇರವಾಗಿ ಅಧಿಕಾರಿಗಳಿಗೆ ಸೂಚನೆ ನೀಡಿ, ವಿಚಾರಣೆಗಾಗಿ ಭಾಗ್ವತ್ ಅವರನ್ನು ಕಸ್ಟಡಿಗೆ ಪಡೆಯುವಂತೆ ಆದೇಶಿಸಿದ್ದರು ಎಂದು ಹೇಳಲಾಗಿದೆ.

2014ರಲ್ಲಿ 'ಕಾರವಾನ್' ನಿಯತಕಾಲಿಕ ಪಂಚಕುಲ ಜೈಲಿನಲ್ಲಿ ನಡೆಸಿದ ಸಂದರ್ಶನ ವೇಳೆ ಮುಖ್ಯ ಆರೋಪಿ ಸ್ವಾಮಿ ಅಸೀಮಾನಂದ, ಭಾಗ್ವತ್ ಅವರೇ ಈ ಎಲ್ಲ ಕೃತ್ಯಗಳಿಗೆ ಪ್ರೇರಣೆ ಎಂಬ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಯುಪಿಎ ಸರ್ಕಾರ ಎನ್‌ಐಎ ಮೇಲೆ ಒತ್ತಡ ಹಾಕಿತ್ತು. ಆದರೆ ಎನ್‌ಐಎ ಮುಖ್ಯಸ್ಥರಾಗಿದ್ದ ಶರದ್ ಕುಮಾರ್, ಭಾಗ್ವತ್ ವಿಚಾರಣೆ ವಾದವನ್ನು ತಳ್ಳಿಹಾಕಿ, ಈ ಸಂದರ್ಶನದ ಟೇಪ್‌ನ ವಿಧಿವಿಜ್ಞಾನ ಪರೀಕ್ಷೆಗೆ ಸೂಚಿಸಿದ್ದರು ಎಂದು ಟೈಮ್ಸ್‌ನೌ ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News