ಕಾಂಗ್ರೆಸ್ ಸರಕಾರದಿಂದ ಕಾಲೇಜುಗಳಲ್ಲಿ ತುರ್ತು ಪರಿಸ್ಥಿತಿ ನಿರ್ಮಾಣ: ಕೋಟಾ ಶ್ರೀನಿವಾಸ್
ಮೂಡಿಗೆರೆ, ಜು.15: ವಿದ್ಯಾರ್ಥಿಗಳು ತಮ್ಮ ಮೂಲಭೂತ ಸೌಕರ್ಯಗಳಿಗಾಗಿ ಸಂಘಟನೆಗಳ ಮೂಲಕ ಕಾಲೇಜುಗಳಲ್ಲಿ ಹೋರಾಟ ನಡೆಸಿದರೆ, ಇದಕ್ಕೂ ಕೋಮು ಭಾವನೆಯನ್ನು ಬಿತ್ತಿ ವಿದ್ಯಾರ್ಥಿಗಳ ಹೋರಾಟವನ್ನು ಹತ್ತಿಕ್ಕುವ ಕೆಲಸವನ್ನು ರಾಜ್ಯ ಸರಕಾರ ತುರ್ತು ಪರಿಸ್ಥಿತಿಯನ್ನು ನೆನಪಿಸುವಂತೆ ಮಾಡಲು ಹೊರಟಿದೆ ಎಂದು ಮಾಜಿ ಸಚಿವ ಹಾಗೂ ಹಾಲಿ ಎಂಎಲ್‍ಸಿ ಕೋಟಾ ಶ್ರೀನಿವಾಸ್ ಪೂಜಾರಿ ಆರೋಪಿಸಿದರು.
ಅವರು ಶನಿವಾರ ಪಟ್ಟಣದಲ್ಲಿ ಸುದ್ಧಿಗೋಷ್ಠಿಯಲ್ಲಿ ಮಾತನಾಡಿ, ಶಿಕ್ಷಕರ ಕೊರತೆ, ಅರೆಕಾಲಿಕ ಶಿಕ್ಷಕರಲ್ಲಾಗುತ್ತಿರುವ ನೇಮಕ ವಿಳಂಬ, ಕೊಠಡಿ ಸಮಸ್ಯೆ, ಕುಡಿಯುವ ನೀರು, ಹಾಸ್ಟೆಲ್‍ಗಳಲ್ಲಿ ಮೂಲಭೂತ ಸಮಸ್ಯೆಗಳ ಕೊರತೆ, ಶಿಕ್ಷಣ ತಾರತಮ್ಮ ಇವುಗಳನ್ನು ವಿರೋಧಿಸಿ ವಿದ್ಯಾರ್ಥಿಗಳು ಮಾಡುತ್ತಿದ್ದ ಪ್ರತಿಭಟನೆಗಳನ್ನು ಹತ್ತಿಕ್ಕುವ ಕೆಲಸವನ್ನು ಮಾಡಿ ತುರ್ತು ಪರಿಸ್ಥಿತಿಯ ಕಾಲದಲ್ಲಿ ವಿದ್ಯಾರ್ಥಿಗಳನ್ನು ಅಂಧಕಾರದಲ್ಲಿಟ್ಟ ನೆನಪುಗಳನ್ನು ಮತ್ತೊಮ್ಮೆ ಕಾಲೇಜು ಕ್ಯಾಂಪಸ್‍ಗಳಲ್ಲಿ ತರಲು ಹೊರಟಿದೆ ಎಂದು ತಿಳಿಸಿದರು.
ಇದು ವಿದ್ಯಾರ್ಥಿಗಳ ಮೇಲೆ ಮಾಡುವ ಗದ ಪ್ರಹಾರವಾಗಿದೆ. ಕಳೆದ ಒಂದು ತಿಂಗಳ ಹಿಂದೆ ಕೇರಳದ ವೇಣುಗೋಪಾಲ್ ಅವರು, ರಾಷ್ಟ್ರೀಯತೆ ಬೋಧಿಸುತ್ತಿರುವ ಶಿಕ್ಷಕರು, ಹಾಗೂ ಹಿಂದುತ್ವ ನೀತಿಯನ್ನು ಅನುಸರಿಸುತ್ತಿರುವ ವಿದ್ಯಾರ್ಥಿಗಳಿರುವ ಕಾಲೇಜುಗಳ ಪಟ್ಟಿ ತಯಾರಿಸಿ ಎಂಬ ಸೂಚನೆ ಮೇರೆಗೆ ರಾಜ್ಯದಲ್ಲೂ ಎಬಿವಿಪಿ, ಸಂಘಪರಿವಾರ ಮತ್ತು ಹಿಂದುತ್ವವನ್ನು ತುಳಿಯುವ ದೃಷ್ಠಿಯಿಂದ ವಿದ್ಯಾರ್ಥಿಗಳಲ್ಲಿ ಹೋರಾಟ ಮನೋಭಾವನೆಯನ್ನೇ ಹತ್ತಿಕ್ಕಿ ದಾಸ್ಯಕ್ಕೆ ತಳ್ಳುವ ಯೋಜನೆಯನ್ನು ರೂಪಿಸಲಾಗಿದೆ.
ಕೇರಳದಲ್ಲಿ ಈಗಾಗಲೇ ಹಿಂದೂ ಸಂಘಟನೆಯ ಮುಖಂಡರುಗಳನ್ನು ಸತತವಾಗಿ ಕೊಲೆ ಮಾಡುತ್ತಿದ್ದು, ಇದರ ನೀತಿಯ ಮುಂದುವರೆದ ಭಾಗವಾಗಿ ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ರಾಜ್ಯ ಉಸ್ತುವಾರಿ ವಹಿಸಿರುವ ಕೇರಳದ ವೇಣುಗೋಪಾಲ್ ಸರಕಾರದ ಮೂಲಕ ಪ್ರಾಯೋಗಿಕವಾಗಿ ಹೊರಟಿದ್ದಾರೆ.
ಕಳೆದ 4 ವರ್ಷಗಳಿಂದ ಅಭಿವೃದ್ಧಿಯಲ್ಲಿ ಸಂಪೂರ್ಣ ವಿಫಲವಾಗಿದ್ದು, ಕಾರಾಗೃಹದಲ್ಲಿರುವ ಖೋಟಾನೋಟು ಮುದ್ರಿಸಿದ್ದ ತೆಲಗಿಗೂ ಸಹ ಗಣ್ಯರ ಸೌಲಭ್ಯ ಒದಗಿಸಿದ್ದು, ಶ್ರೀಮಂತ ಕೈದಿಗಳಿಗೆ ಐಶರಾಮಿ ಸವಲತ್ತುಗಳನ್ನು ನೀಡಿದ್ದು, ಇದನ್ನು ಬೆಳಕಿಗೆ ತಂದ ಮಹಿಳಾ ಅಧಿಕಾರಿ ಡಿ.ರೂಪಾ ಅರವಿಂದ್ ಅವರಿಗೆ ನೋಟೀಸು ನೀಡಲು ಹೊರಟಿರುವುದು ಇನ್ನೊಬ್ಬ ಅನುಪಮ ಶಣೈ ಕೇಸನ್ನು ರಾಜ್ಯ ನೆನಪಿಸಿಕೊಳ್ಳುವಂತೆ ಮಾಡುತ್ತಿದ್ದು, ಇಲ್ಲಿ ಭ್ರಷ್ಟಾಚಾರಕ್ಕೆ ಮಾತ್ರ ಅವಕಾಶ ಎಂದು ತೋರಿಸಿಕೊಡಲಾಗುತ್ತಿದೆ ಎಂದರು.
ಗೋಷ್ಠಿಯಲ್ಲಿ ಮಾಜಿ ಶಾಸಕ ಎಂ.ಪಿ.ಕುಮಾರಸ್ವಾಮಿ, ಬಿಜೆಪಿ ತಾಲೂಕು ಅಧ್ಯಕ್ಷ ದುಂಡುಗ ಪ್ರಮೋದ್, ಮುಖಂಡರಾದ ದೀಪಕ್ ದೊಡ್ಡಯ್ಯ, ಅರೆಕುಡಿಗೆ ಶಿವಣ್ಣ, ಆಶಾಮೋಹನ್, ಸರೋಜಾ ಸುರೇಂದ್ರ, ಪರೀಕ್ಷಿತ್ ಉಪಸ್ಥಿತರಿದ್ದರು.