ದಲಿತ ವ್ಯಕ್ತಿಯ ಮೇಲೆ ಮಾರಣಾಂತಿಕ ಹಲ್ಲೆ
ಕಡೂರು, ಜು 15: ತಾಲೂಕಿನ ಎಸ್. ಮಾದಾಪುರ ಗ್ರಾಮದಲ್ಲಿ ದಲಿತ ವ್ಯಕ್ತಿಯೋರ್ವರ ಮೇಲೆ ಮಾರಣಾಂತಿಕ ಹಲ್ಲೆ ಮಾಡಿರುವ ಘಟನೆ ನಡೆದಿದೆ.
ದಲಿತರಾದ ತಿರುಮಲಪ್ಪ (55)ಮಾರಣಾಂತಿಕ ಹಲ್ಲೆಗೊಳಗಾಗಿದ್ದು, ಕಡೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಘಟನೆ ವಿವರ: ಶುಕ್ರವಾರ ರಾತ್ರಿ ತಿರುಮಲಪ್ಪನ ಪತ್ನಿ ರೇಣುಕಮ್ಮನಿಗೆ ಆರೋಗ್ಯದಲ್ಲಿ ಏರು ಪೇರು ಆದ ಕಾರಣ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಹೋಗುತ್ತಿರುವ ಸಂದರ್ಭ ಅದೇ ಗ್ರಾಮದ ವಾಸಿ ಬಸವರಾಜ ಎಂಬುವವರು ಇವರ ಮೇಲೆ ಏಕಾಏಕಿ ಹಲ್ಲೆ ನಡೆಸಿ, ಜನಾಂಗಿಯ ನಿಂದನೆ ಮಾಡಿದ್ದಾರೆ ಎನ್ನಲಾಗಿದೆ.
ತಲೆಗೆ ಬಲವಾದ ಪೆಟ್ಟು ಬಿದ್ದ ತಿರುಮಲಪ್ಪನನ್ನು ರಕ್ಷಿಸಲು ಹೋದ ಪತ್ನಿ ರೇಣುಕಮ್ಮನಿಗೂ ಹಲ್ಲೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ನಂತರ ತಿರುಮಲಪ್ಪನನ್ನು ಆ್ಯಂಬುಲೆನ್ಸ್ ನಲ್ಲಿ ಕರೆತಂದು ಕಡೂರು ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದ್ದಾರೆ. ಪ್ರಥಮ ಚಿಕಿತ್ಸೆ ನೀಡಿದರೂ ತಿರುಮಲಪ್ಪನಿಗೆ ಪ್ರಜ್ಞಾ ಹೀನ ಸ್ಥಿತಿಯಲ್ಲೇ ಇದ್ದಾರೆ.
ತಿರುಮಲಪ್ಪನ ತಲೆಗೆ ಬಲವಾಗಿ ಏಟುಬಿದ್ದಿದೆ. ಇನ್ನೂ ಪ್ರಜ್ಞೆ ಬಾರದ ಕಾರಣದಿಂದ ಹೆಚ್ಚಿನ ಚಿಕಿತ್ಸೆಯ ಸಿಟಿಸ್ಕ್ಯಾನ್ ಮಾಡಿಸಿದ ನಂತರವೇ ಅವರ ಆರೋಗ್ಯದ ಬಗ್ಗೆ ಮಾಹಿತಿ ನೀಡಲು ಸಾಧ್ಯ ಎಂದು ಸಾರ್ವಜನಿಕ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಉಮೇಶ್ ತಿಳಿಸಿದರು.
ಹಲ್ಲೆಗೆ ಜನಾಂಗಿಯ ದ್ವೇಷವೇ ಕಾರಣವಾಗಿದ್ದು, ರೇಣುಕಮ್ಮ ಕಡೂರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಹೆಚ್ಚಿನ ಚಿಕಿತ್ಸೆಗಾಗಿ ತಿರುಮಲಪ್ಪನನ್ನು ಶಿವಮೊಗ್ಗ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.
ದಲಿತ ಮುಖಂಡರಾದ ರಾಮಸ್ವಾಮಿ, ಗಣೇಶ್, ಸಗನಪ್ಪ, ಶ್ರೀನಿವಾಸ್, ಪ್ರಶಾಂತ್, ತಿಮ್ಮಯ್ಯ, ಚೌಡಪ್ಪ ಆಸ್ಪತ್ರೆಗೆ ಭೇಟಿ ನೀಡಿದರು.
‘ದಲಿತರ ಮೇಲಿನ ದೌರ್ಜನ್ಯವನ್ನು ತಡೆಗಟ್ಟಲು ಪೊಲೀಸ್ ಇಲಾಖೆ ಮುಂದಾಗಬೇಕು ಎಂದು ಜಿಲ್ಲಾ ದೌರ್ಜನ್ಯ ಸಮಿತಿ ಸದಸ್ಯ ಶೂದ್ರ ಶ್ರೀನಿವಾಸ್ ಆಗ್ರಹಿಸಿದರು.
ಶುಕ್ರವಾರ ಹಲ್ಲೆಗೊಳಗಾದ ಕಡೂರು ಸಾರ್ವಜನಿಕ ಆಸ್ಪತ್ರೆಗೆ ದಾಖಲಾಗಿರುವ ಎಸ್.ಮಾದಾಪುರ ಗ್ರಾಮದ ಹರಿಜನ ಕಾಲೋನಿಯ ತಿರುಮಲಪ್ಪ ಅವರನ್ನು ಭೇಟಿಯಾಗಿ ಮಾಧ್ಯಮಗಳೊಂದಿಗೆ ಮಾತನಾಡಿ ಎಸ್. ಮಾದಾಪುರ ಗ್ರಾಮದಲ್ಲಿ ಈ ಹಿಂದೆಯೂ ಹಲವು ಬಾರಿ ನಿರಂತರವಾಗಿ ದಲಿತರ ಮೇಲೆ ಹಲ್ಲೆ ನಡೆದಿದ್ದು, ಶುಕ್ರವಾರ ಮತ್ತೆ ಈ ಘಟನೆ ಮರುಕಳಿಸಲು ಪೊಲೀಸ್ ಇಲಾಖೆ ನಿರ್ಲಕ್ಷ್ಯತನ ಕಾರಣವಾಗಿದೆ ಎಂದು ಆಪಾದಿಸಿದರು.
ದಲಿತರ ಮೇಲಿನ ಹಲ್ಲೆ ಪ್ರಕರಣಗಳು ಮರುಕಳಿಸದಂತೆ ಇಲಾಖೆ ಮುನ್ನೆಚ್ಚರಿಕೆ ವಹಿಸಿ ದಲಿತರನ್ನು ರಕ್ಷಿಸಬೇಕು, ಈ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಗಮನಹರಿಸಬೇಕು ಎಂದು ಒತ್ತಾಯಿಸಿದರು.