×
Ad

ನಗರದಲ್ಲಿ ನಿಯಂತ್ರಣಕ್ಕೆ ಬಾರದ ಡೆಂಗ್: ಪಾಲಿಕೆ ಸದಸ್ಯರ ಆಕ್ರೋಶ

Update: 2017-07-15 18:24 IST

ತುಮಕೂರು,ಜು.15: ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಡೆಂಗ್, ಚಿಕುನ್‌ಗುನ್ಯಾ ರೋಗ ನಿಯಂತ್ರಣಕ್ಕೆ ಬರುತ್ತಿಲ್ಲ. ದಿನೇ ದಿನೇ ಪ್ರಕರಣಗಳ ಸಂಖ್ಯೆ ಏರುತ್ತಲೇ ಇವೆ. ಆರೋಗ್ಯ ಇಲಾಖೆ ಅಧಿಕಾರಿ,ಸಿಬ್ಬಂದಿಗಳು ಕಣ್ಣು ಮುಚ್ಚಿ ಕುಳಿತಿದ್ದಾರೆ ಎಂದು ಪಾಲಿಕೆ ಸದಸ್ಯರೆಲ್ಲ ಒಕ್ಕೊರಲಿನಿಂದ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪಾಲಿಕೆ ಸಭಾಂಗಣದಲ್ಲಿಂದು ಡೆಂಗ್, ಚಿಕುನ್‌ಗುನ್ಯಾ ರೋಗದ ನಿಯಂತ್ರಣಕ್ಕೆ ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಪಾಲಿಕೆ ಸದಸ್ಯರು, ಆರೋಗ್ಯ ಇಲಾಖೆ ಅಧಿಕಾರಿ, ಸಿಬ್ಬಂದಿಗಳು, ಖಾಸಗಿ ಆಸ್ಪತ್ರೆಗಳ ಮುಖ್ಯಸ್ಥರೊಂದಿಗೆ ಚರ್ಚಿಸಲು ಕರೆದಿದ್ದ ಸಭೆಯಲ್ಲಿ ಸದಸ್ಯರೆಲ್ಲ ಆರೋಗ್ಯ ಇಲಾಖೆ ಕಾರ್ಯ ವೈಖರಿ ಬಗ್ಗೆ ಅಸಮಧಾನ ತೋರಿದರು. ನಗರ ಸೇರಿ ಇಡೀ ಜಿಲ್ಲೆ ಡೆಂಗ್ ಜ್ವರದಿಂದ ತತ್ತರಿಸಿದೆ. ಇಂತಹ ಗಂಭೀರ ಪರಿಸ್ಥಿತಿಯನ್ನೆದುರಿಸಲು ಪಾಲಿಕೆ ತಿಂಗಳ ಮುಂಚೆಯೇ ಸಭೆ ಕರೆದು ಕ್ರಮ ಕೈಗೊಳ್ಳಬೇಕಿತ್ತು ಎಂದು ದೂರಿದರು.

ಖಾಸಗಿ ಆಸ್ಪತ್ರೆಗಳಿಗೆ ಕಡಿವಾಣ: ಪಾಲಿಕೆ ಸದಸ್ಯರಾದ ಪ್ರೆಸ್ ರಾಜಣ್ಣ ಮಾತನಾಡಿ, ಮೊದಲು ಸಾರ್ವಜನಿಕ ಆಸ್ಪತ್ರೆಗಳಲ್ಲಿ ಸ್ವಚ್ಛತೆಯನ್ನು ಕಾಪಾಡಿದರೆ ಸಾರ್ವಜನಿಕರಿಗೆ ಅರಿವು ಮೂಡುತ್ತದೆ ಎಂದು ಸಲಹೆ ನೀಡಿದರು. ಮತ್ತೊಬ್ಬ ಸದಸ್ಯ ಲೋಕೇಶ್ ಮಾತನಾಡಿ, ನಗರದ ಎಲ್ಲಾ ವಾರ್ಡುಗಳಲ್ಲಿ ಡೆಂಗ್ ನಿಯಂತ್ರಣದ ಬಗ್ಗೆ ಆಟೋ ಪ್ರಚಾರ ಮಾಡುವ ಹಾಗೂ ಕರಪತ್ರಗಳನ್ನು ಹಂಚುವ ಮೂಲಕ ಜನಜಾಗೃತಿ ಮೂಡಿಸಬೇಕೆಂದು ಸಲಹೆ ನೀಡಿದರಲ್ಲದೆ, ಖಾಸಗಿ ಆಸ್ಪತ್ರೆಗಳು ಡೆಂಗ್ ಜ್ವರದ ಹೆಸರಿನಲ್ಲಿ ರೋಗಿಗಳನ್ನು ಹಗಲು ದರೋಡೆ ಮಾಡುತ್ತಿದ್ದು, ಇದಕ್ಕೆ ಕಡಿವಾಣ ಹಾಕಬೇಕೆಂದರು.

ಸಾಮೂಹಿಕ ಸಹಕಾರ ಅಗತ್ಯ: ಸದಸ್ಯರ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಜಿಲ್ಲಾ ಸರ್ವೆಲೆನ್ಸ್ ಅಧಿಕಾರಿಡಾ:ಪುರುಷೋತ್ತಮ್, ಡೆಂಗ್, ಚಿಕುನ್‌ಗುನ್ಯಾ ರೋಗವನ್ನು ನಿಯಂತ್ರಣಕ್ಕೆ ತರಲು ಆರೋಗ್ಯ ಇಲಾಖೆಯೊಂದಿಗೆ ಸಾರ್ವಜನಿಕರು, ವಿವಿಧ ಇಲಾಖೆ ಅಧಿಕಾರಿಗಳ ಸಾಮೂಹಿಕ ಸಹಕಾರ ಅಗತ್ಯ. ಆರೋಗ್ಯ ಇಲಾಖೆಯು ಸಕ್ರಿಯವಾಗಿ ತನ್ನ ಪಾತ್ರವನ್ನು ನಿರ್ವಹಿಸು ತ್ತಿದೆ. ಯಾರೂ ಆತಂಕ ಪಡುವ ಅಗತ್ಯವಿಲ್ಲ. ಪ್ರತೀ ವರ್ಷ ಮಳೆಗಾಲ ಶುರುವಾದ ಮೇಲೆ ಮೇ, ಜೂನ್, ಜುಲೈ ತಿಂಗಳಲ್ಲಿ ಈ ರೋಗದ ಹಾವಳಿ ಹೆಚ್ಚಾಗುತ್ತದೆ. ಈಡಿಸ್ ಇಜಿಪ್ಟೈ ಸೊಳ್ಳೆಯು ಕಚ್ಚುವುದರಿಂದ ಬರುವ ಈ ರೋಗವು ಶೇ. 98ರಷ್ಟು ತನ್ನಿಂತಾನೇ ಗುಣಮುಖವಾಗುತ್ತದೆ ಎಂಬ ಅರಿವು ಜನರಿಗಾಗಬೇಕುಎಂದರು.

ಸಮರ್ಪಕ ತ್ಯಾಜ್ಯ ವಿಲೇ ಮಾಡದ ಆಸ್ಪತ್ರೆಗಳಿಗೆ ಬೀಗ: ಪಾಲಿಕೆ ಆಯುಕ್ತ ಆಶಾದ್ ಆರ್. ಷರೀಫ್ ಮಾತನಾಡಿ, ನಗರದಲ್ಲಿ ಸುಮಾರು 45ಸಾವಿರ ಖಾಲಿ ನಿವೇಶನಗಳಿದ್ದು, ತ್ಯಾಜ್ಯ ವಸ್ತುಗಳ ತಾಣಗಳಾಗಿ ಮಾರ್ಪಾಡಾಗುತ್ತಿವೆ. ಈ ನಿವೇಶನಗಳ ಮಾಲೀಕರು ತಮ್ಮ ನಿವೇಶನಗಳನ್ನು ಸ್ವಚ್ಚವಾಗಿಟ್ಟುಕೊಳ್ಳಬೇಕು. ತಪ್ಪಿದಲ್ಲಿ ದಂಡ ವಿಧಿಸಲಾಗುವುದು. ಖಾಸಗಿ ಆಸ್ಪತ್ರೆ, ಕ್ಲಿನಿಕ್‌ಗಳು ತ್ಯಾಜ್ಯಗಳನ್ನು ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡಬೇಕು. ಇಲ್ಲದಿದ್ದಲ್ಲಿ ಆಸ್ಪತ್ರೆಗೆ ಬೀಗ ಜಡಿಯಲಾಗುವುದು ಎಂದು ಎಚ್ಚರಿಕೆ ನೀಡಿದರು.

ನಗರದ ವಿವಿದ ವಾರ್ಡುಗಳಲ್ಲಿ ಸಾಂಕ್ರಾಮಿಕ ರೋಗ ಹರಡದಂತೆ ಸ್ವಚ್ಚವಾಗಿಡಲು ಕಳೆದೆರಡು ತಿಂಗಳಿಂದ 6500 ಕೆ.ಜಿ ಬ್ಲೀಚಿಂಗ್ ಪೌಡರ್, 2445 ಲೀ. ಫೆನಾಯಿಲ್, 2050 ಲೀ. ಮೆಲಾಥಿನ್, 1400 ಲೀ.(ಫಾಗಿಂಗ್‌ಗಾಗಿ) ಪೈರೋತ್ರೋಮ್, 80 ಕೆ.ಜಿ. ಬಿಟಿಐ, 20 ಲೀ. ಅಬೇಟ್, 20 ಲೀ. ಎಕೋಲೆಕ್ಸ್ ಅನ್ನು ಬಳಸಲಾಗಿದೆ ಎಂದು ತಿಳಿಸಿದರು.

ಸಭೆಯಲ್ಲಿ ಉಪಮೇಯರ್ ಫರ್ಜಾನಾ ಖಾನಂ, ವಿವಿಧ ವಾರ್ಡುಗಳ ಪಾಲಿಕೆ ಸದಸ್ಯರು, ನಾಮನಿರ್ದೇಶಿತ ಸದಸ್ಯರು, ಪರಿಸರ ಇಂಜಿನಿಯರುಗಳು, ಆರೋಗ್ಯ ಇಲಾಖೆ ಅಧಿಕಾರಿಗಳು, ಖಾಸಗಿ ನರ್ಸಿಂಗ್ ಹೋಂ ಮುಖ್ಯಸ್ಥರು, ಮತ್ತಿತರರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News