×
Ad

ರೂ.508 ಕೋಟಿ ವೆಚ್ಚದಲ್ಲಿ 540 ಎಕರೆಯಲ್ಲಿ ತುಮಕೂರು ಮೆಷಿನ್ ಟೂಲ್ ಪಾರ್ಕ್

Update: 2017-07-15 18:28 IST

ತುಮಕೂರು,ಜು.15: ತುಮಕೂರು ನಗರ ಸಮೀಪದ ವಸಂತ ನರಸಾಪುರ ಕೈಗಾರಿಕಾ ಪ್ರದೇಶದಲ್ಲಿ ರೂ. 508 ಕೋಟಿ ವೆಚ್ಚದಲ್ಲಿ 540 ಎಕರೆ ಪ್ರದೇಶದಲ್ಲಿ ಅತ್ಯಾಧುನಿಕ ವಿಶ್ವ ದರ್ಜೆಯ ತುಮಕೂರು ಮೆಷಿನ್ ಟೂಲ್ ಪಾರ್ಕ್ ನಿರ್ಮಾಣವಾಗಲಿದೆ ಎಂದು ತುಮಕೂರು ಲೋಕಸಭಾ ಕ್ಷೇತ್ರದ ಸಂಸದ ಎಸ್.ಪಿ. ಮುದ್ದಹನುಮೇಗೌಡರು ತಿಳಿಸಿದ್ದಾರೆ.

ಇಂದು ಬೆಳಗ್ಗೆ ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ನಡೆದ ಈ ಕುರಿತ ಪ್ರಗತಿ ಪರಿಶೀಲನಾ ಸಭೆಯಲ್ಲಿ ವಿಷಯ ತಿಳಿಸಿದ ಅವರು, ಭಾರತ ಸರಕಾರ ರೂ.125 ಕೋಟಿಗಳನ್ನು ಹಾಗೂ ರಾಜ್ಯ ಸರಕಾರ ಭೂಮಿಯ ಮೌಲ್ಯ ಸೇರಿದಂತೆ ರೂ.383 ಕೋಟಿಗಳ ಪಾಲು ನೀಡಲಿದ್ದು, ಈಗಾಗಲೇ ಕೇಂದ್ರ ಸರಕಾರ ರೂ. 25 ಕೋಟಿ ಹಾಗೂ ರಾಜ್ಯ ಸರಕಾರ ರೂ. 25 ಕೋಟಿಗಳನ್ನು ಬಿಡುಗಡೆ ಮಾಡಿದ್ದು, ತುಮಕೂರು ಮೆಷಿನ್ ಟೂಲ್ ಪಾರ್ಕ್‌ನ ಕಾರ್ಯ ಆರಂಭವಾಗಿದ್ದು, ಭೂಸ್ವಾಧೀನ ಕಾರ್ಯ ಶೇ. 75ರಷ್ಟ ಪೂರ್ಣವಾಗಿದ್ದು, ಸೆಪ್ಟೆಂಬರ್‌ನಲ್ಲಿ ಭೂಮಿಪೂಜೆ ನೆರವೇರಿಸಲಾಗುವುದೆಂದು ತುಮಕೂರು ಮೆಷಿನ್ ಟೂಲ್ಸ್ ಪಾರ್ಕ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅನಿರುದ್ಧ ಶ್ರವಣ್ ತಿಳಿಸಿದ್ದಾರೆ.

ಇದೊಂದು ವಿಶ್ವದರ್ಜೆಯ ಮೆಷಿನ್ ಟೂಲ್‌ಪಾರ್ಕ್ ಆಗಲಿರುವುದರಿಂದ ವಿದೇಶಗಳಿಂದಲೂ ಉದ್ಯಮಿಗಳು ಇಲ್ಲಿ ತಮ್ಮ ಕೈಗಾರಿಕೆಗಳನ್ನು ಸ್ಥಾಪಿಸಲು ಮುಂದೆ ಬರುತ್ತಿದ್ದಾರೆ ಎಂದು ತಿಳಿಸಿದ ಸಂಸದರು, ಇಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿ (ಆರ್ ಅಂಡ್ ಡಿ) ಘಟಕಕ್ಕೂ ಅವಕಾಶವಿರುವಂತೆ ಯೋಜಿಸಲು ಸೂಚಿಸಿದರಲ್ಲದೆ, ತುಮಕೂರು ಮೆಷಿನ್ ಟೂಲ್ ಪಾರ್ಕ್ ಎದುರಿನಲ್ಲಿ ಜಪಾನ್ ಇಂಟರ್ ನ್ಯಾಷನಲ್ ಟೆಕ್ನೋಪಾರ್ಕ್ ಸಹಿತ ಆರಂಭವಾಗಲಿದ್ದು, ಇದರಿಂದ ಕೈಗಾರಿಕೋದ್ಯಮಿಗಳಿಗೆ ಬೆಂಗಳೂರಿಗೆ ಪರ್ಯಾಯವಾಗಿ ತುಮಕೂರು ಪ್ರಶಸ್ತವಾದ ಜಾಗವಾಗಲಿದೆ ಎಂದ ಸಂಸದರು, ಇಲ್ಲಿಯೇ ಎಂ.ಎಸ್.ಎಂ.ಇ. (ಮಧ್ಯಮ, ಸಣ್ಣ ಹಾಗೂ ಅತಿ ಸಣ್ಣ) ಉದ್ಯಮಶೀಲತಾ ಘಟಕ ಸಹ ತಲೆ ಎತ್ತಲಿದೆ ಎಂದರು.

ಸಭೆಯಲ್ಲಿ ಜಿಲ್ಲಾಧಿಕಾರಿ ಕೆ.ಪಿ. ಮೋಹನ್‌ರಾಜ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಜಿ.ಶಾಚಿತಾರಾಮ್, ತುಮಕೂರು ಮೆಷಿನ್ ಟೂಲ್ ಪಾರ್ಕ್‌ನ ತಾಂತ್ರಿಕ ಸಹಾಯಕರಾದ ಹೆಚ್.ರಾಜಸಿಂಹ,ವಿರೂಪಾಕ್ಷ, ಮುಂತಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News