ಕಾಂಗ್ರೆಸ್‌ನಿಂದ ನಾವು ಯಾವ ಪಾಠವನ್ನೂ ಕಲಿಯಬೇಕಾಗಿಲ್ಲ: ಹೆಚ್.ಡಿ. ರೇವಣ್ಣ
ಹಾಸನ, ಜು.15: ಹಾಸನ ಮತ್ತು ಮೈಸೂರು ರೈಲ್ವೆ ಕಾಮಗಾರಿಗೆಯನ್ನು ಅಡ್ಡಿಪಡಿಸಿದ ಭಂಡ ಕಾಂಗ್ರೆಸ್‌ನಿಂದ ನಾವು ಯಾವ ಪಾಠ ಕಲಿಯಬೇಕಾಗಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎ. ಮಂಜು ಹೇಳಿಕೆಗೆ ಮಾಜಿ ಸಚಿವ ಹೆಚ್.ಡಿ. ರೇವಣ್ಣ ಆಕ್ರೋಶ ವ್ಯಕ್ತಪಡಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಹಾಸನ ಮತ್ತು ಮೈಸೂರು ಸಂಪರ್ಕ ರೈಲ್ವೆ ಕಾಮಗಾರಿ ಕೆಲಸ ಕೊನೆಗೆ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರಿಂದಲೇ ಆಗಬೇಕಾಯಿತು. ಈಗ ಇದೇ ಮಾರ್ಗದಲ್ಲಿ 18 ರೈಲುಗಳು ಸಂಚರಿಸುತ್ತದೆ. 10 ವರ್ಷಗಳ ಕಾಂಗ್ರೆಸ್ ಸರಕಾರದಲ್ಲಿ ರೈಲು ಸಂಚಾರ ಏತಕ್ಕಾಗಿ ಸಂಚರಿಸಲು ಅವಕಾಶ ಕೊಡಲಿಲ್ಲ ಎಂದು ಪ್ರಶ್ನೆ ಮಾಡಿದ ಅವರು, ಕೊನೆಗೂ ಹಾಸನ ಬೆಂಗಳೂರು ರೈಲು ಸಂಚಾರ ಪ್ರಾರಂಭವಾಗಿದ್ದು ದೇವೇಗೌಡರ ಶ್ರಮದಿಂದ ಎಂಬುದು ಮೊದಲು ತಿಳಿಯಲಿ. ನಗರದ ಸಮೀಪ ಇರುವ ಚನ್ನಪಟ್ಟಣ ಕೆರೆ ಒಡೆದು ನೂತನ ಬಸ್‌ನಿಲ್ದಾಣ ಮಾಡಿರುವುದರ ಬಗ್ಗೆ ವಿರೋಧ ವ್ಯಕ್ತಪಡಿಸುವ ನೈತಿಕತೆ ಸಚಿವರಿಗೆ ಇಲ್ಲ್ಲ. ಕೆರೆ ಪ್ರದೇಶವನ್ನು ರೈತರಿಂದ ಸ್ವಾಧೀನಕ್ಕೆ ಪಡೆದಿದ್ದು, ಕಾಂಗ್ರೆಸ್ ಸರ್ಕಾರವೇ ಹೊರತು ಜೆಡಿಎಸ್ ಪಕ್ಷವಲ್ಲ. ಯಾವ ವಿಷಯ ತಿಳಿಯದೆ ಇಲ್ಲ ಸಲ್ಲದ ಆರೋಪ ಮಾಡುವುದು ಸರಿಯಲ್ಲ ಎಂದು ಸಲಹೆ ಕೊಟ್ಟರು.
ಅವರಿಗೆ ನೈತಿಕತೆ ಇದ್ದರೆ, ಜನರ ಬಳಿ ಹೋಗಿ ’ಕಾಂಗ್ರೆಸ್‌ಗೆ ಮತ ಹಾಕಬೇಡಿ, ನಮ್ಮಿಂದ ಯಾವುದೇ ಅಭಿವೃದ್ಧಿ ಕೆಲಸಗಳಾಗುತ್ತಿಲ್ಲ ಎಂದು ಕ್ಷಮೆಯಾಚಿಸಲಿ’ ಎಂದು ಸವಾಲು ಹಾಕಿದರು. ಜಿಲ್ಲಾ ಮಂತ್ರಿ ಆದ ಮೇಲೆ ಯಾವ ಅಭಿವೃದ್ಧಿ ಕೆಲಸ ಮಾಡದೆ ಕೇವಲ ವಸೂಲಿ ಮಾಡುವುದರಲ್ಲೆ ಸಮಯ ಕಳೆದಿದ್ದಾರೆ ಎಂದು ಕಿಡಿಕಾರಿದರು.
ಕಳೆದ ಒಂದು ದಿನಗಳ ಹಿಂದೆ ಗೊರೂರಿನಲ್ಲಿ ಯಾವ ಸಭೆ ಮಾಡಿದರು ಎಂಬುದು ಎಲ್ಲಾ ನನಗೆ ತಿಳಿದಿದೆ. ಮಹಾಮಸ್ತಕಾಭಿಷೇಕ ಅಭಿವೃದ್ಧಿ ಕಾಮಗಾರಿಯನ್ನು ಲೋಕೋಪಯೋಗಿ ಇಲಾಖೆಗೆ ವಹಿಸಲು ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದ್ದರೂ, ಅದೇ ಕಾಮಗಾರಿಯನ್ನು ರಸ್ತೆ ಅಭಿವೃದ್ಧಿ ನಿಗಮಕ್ಕೆ ವಹಿಸಿರುವುದು ಯಾವ ಉದ್ದೇಶಕ್ಕೆ ಎಂದು ಪ್ರಶ್ನಿಸಿದ ರೇವಣ್ಣ ಅವರು ಲೋಕೋಪಯೋಗಿ ಇಲಾಖೆಯಿಂದಲೇ ಈ ಕಾಮಗಾರಿ ನಡೆಸಬಹುದಿತ್ತಲ್ಲ ಎಂದರು.
ಹೆಚ್.ಡಿ. ದೇವೇಗೌಡರು ಅಂದು ಪ್ರಧಾನಿಯಾಗಿದ್ದಾಗ ಅರಕಲಗೂಡು ಪಟ್ಟಣಕ್ಕೆ ಕುಡಿಯುವ ನೀರು ಯೋಜನೆಗಾಗಿ 15 ಕೋಟಿ ರೂ. ಅನುದಾನ ನೀಡಿದರು. ಆರೋಪ ಮಾಡುವುದೇ ಜಿಲ್ಲಾ ಸಚಿವರ ಉದ್ದೇಶವಾಗಿದ್ದರೆ ಪೂರ್ಣ ವಿಷಯ ಪಡೆದುಕೊಂಡು ಮಾತನಾಡಬೇಕು. ಹಿಂದಿನ ಎಲ್ಲಾ ದಾಖಲೆಗಳನ್ನು ಪರಿಶೀಲಿಸಿ ನೋಡಿ, ಯಾವ ಕೆಲಸಗಳು ಯಾವ ಸರ್ಕಾರದಿಂದ ಆಗಿದೆ ಎಂಬುದು ನಿಮಗೆ ತಿಳಿಯುತ್ತದೆ ಎಂದು ದೂರಿಗೆ ಉತ್ತರ ನೀಡಿದರು.
ಕಳೆದ ನಾಲ್ಕು ತಿಂಗಳ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಶ್ರವಣಬೆಳಗೊಳಕ್ಕೆ ಕರೆಯಿಸಿ ಭೂಮಿ ಪೂಜೆ ನೆರವೇರಿಸಿದ ಸಚಿವ ಎ. ಮಂಜು, ಸಿಎಂ ಪೂಜೆ ಮಾಡಿದ ಕಾಮಗಾರಿಯನ್ನು ಇನ್ನು ಕೈಗೆತ್ತಿಕೊಂಡಿಲ್ಲ. ಹೆಚ್ಚುವರಿ ಕೊಠಡಿ ನಿರ್ಮಾಣ, ಪ್ರಾಕೃತ ವಿಶ್ವವಿದ್ಯಾಲಯ ಹಾಗೂ ಯಾತ್ರಿಗಳ ನಿವಾಸ ಕಟ್ಟಡವನ್ನು ಕ್ರಿಯಾ ಯೋಜನೆಯಿಂದ ಕೈಬಿಟ್ಟಿದ್ದಾರೆ ಎಂದು ಗುಡುಗಿದರು.