ಶೋಭಾ ಕರಂದ್ಲಾಜೆ, ನಳಿನ್‍ಕುಮಾರ್ ಬಂಧನಕ್ಕೆ ಆಗ್ರಹ
ಮಂಡ್ಯ, ಜು.15: ಕೋಮು ಪ್ರಚೋದನಾ ಹೇಳಿಕೆ ಮೂಲಕ ಕರಾವಳಿಯಲ್ಲಿ ಉರಿಯುತ್ತಿರುವ ಬೆಂಕಿಗೆ ತುಪ್ಪ ಸುರಿಯುತ್ತಿರುವ ಸಂಸದರಾದ ಶೋಭಾ ಕರಂದ್ಲಾಜೆ ಮತ್ತು ನಳಿನ್‍ಕುಮಾರ್ ಕಟೀಲ್ ಅವರನ್ನು ಬಂಧಿಸುವಂತೆ ಆಗ್ರಹಿಸಿ ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‍ಡಿಪಿಐ) ಕಾರ್ಯಕರ್ತರು ಶನಿವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.
ಬೆಂಗಳೂರು ಮೈಸೂರು ಹೆದ್ದಾರಿಯ ಕಾವೇರಿವನದ ಬಳಿ ಬಿಜೆಪಿ ಮತ್ತು ಸಂಘಪರಿವಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾಕಾರರು, ಕರಾವಳಿಯಲ್ಲಿ ಪ್ರಕ್ಷುಬ್ಧ ವಾತಾವರಣ ಸೃಷ್ಟಿಗೆ ಸಂಘಪರಿವಾರ, ಬಿಜೆಪಿ ಕಾರಣವೆಂದು ಆರೋಪಿಸಿದರು.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎರಡು ತಿಂಗಳಿಂದ ಪ್ರಕ್ಷುಬ್ಧ ವಾತಾವರಣವಿದ್ದು, ಇಬ್ಬರು ಯುವಕರ ಕೊಲೆಯಾಗಿದೆ, 12 ಮಂದಿಗೆ ಚೂರಿ ಇರಿತವಾಗಿದೆ. ಕಾನೂನು ಸುವ್ಯವಸ್ಥೆ ದೃಷ್ಟಿಯಿಂದ ನಿಷೇಧಾಜ್ಞೆ ಜಾರಿಯಲ್ಲಿದ್ದರೂ ಶರತ್ ಕೊಲೆಯನ್ನು ಖಂಡಿಸುವ ನೆಪದಲ್ಲಿ ಶೋಭಾ ಕರಂದ್ಲಾಜೆ ಮತ್ತು ನಳಿನ್‍ಕುಮಾರ್ ಕಟೀಲ್ ನೇತೃತ್ವದಲ್ಲಿ ಬಿ.ಸಿ.ರೋಡಿನಲ್ಲಿ ನೂರಾರು ಜನರನ್ನು ಸೇರಿಸಿ ಪ್ರಕ್ಷುಬ್ಧ ವಾತಾವರಣ ಸೃಷ್ಟಿಸಿ ಜನಜೀವನವನ್ನು ಅಸ್ತವ್ಯಸ್ತಗೊಳಿಸಲಾಗಿದೆ ಎಂದು ಅವರು ದೂರಿದರು.
ಸೂತಕದ ವಾತಾವರಣದ ನಡುವೆಯೂ ಕುಣಿದು ಕುಪ್ಪಳಿಸಿರುವಂತಹದ್ದು ಸತ್ತ ಶರತ್ ಅವರಿಗೆ ಅವಮಾನಮಾಡಿದಂತಾಗಿದೆ. ಈ ಸಂಬಂಧ ಈ ಇಬ್ಬರು ಸಂಸದರ ವಿರುದ್ಧ ಬಂಟ್ವಾಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಶರತ್ ಕೊಲೆ ಆರೋಪಿಗಳನ್ನು ಬಂಧಿಸಬೇಕಿರುವುದು ಪೊಲೀಸರ ಕರ್ತವ್ಯ. ಆದರೆ, ಪ್ರಕರಣ ತನಿಖೆ ಹಂತದಲ್ಲಿರುವಾಗಲೇ ಜವಾಬ್ಧಾರಿಯು ಸ್ಥಾನದಲ್ಲಿರುವ ಸಂಸದರು ಎಸ್‍ಡಿಪಿಐ, ಪಿಎಫ್‍ಐ ಸಂಘಟನೆ ಮೇಲೆ ಹೊರಸಿರುವುದು ಪೊಲೀಸರನ್ನು ದಿಕ್ಕು ತಪ್ಪಿಸುವ ಹುನ್ನಾರ, ಅಮಾಯಕರನ್ನು ಸಿಲುಕಿಸುವ ಯತ್ನವಾಗಿದೆ ಎಂದು ಅವರು ಹೇಳಿದರು.
ಈ ಹಿಂದೆ ಸಂಘಪರಿವಾರದ ಕಿಡಿಗೇಡಿಗಳಿಂದ ನಡೆದ ಕಾರ್ತಿಕ್‍ರಾಜ್ ಹತ್ಯೆ ಮತ್ತು ಶಿವಮೊಗ್ಗದ ಯುವಕನೊಬ್ಬನ ಹತ್ಯೆ ಸಂದರ್ಭದಲ್ಲೂ ಇದೇ ರೀತಿ ಆರೋಪ ಹೊರಿಸಿ ನಂತರ ಪೊಲೀಸ್ ತನಿಖೆಯಿಂದ ಈ ಕೊಲೆಗಳು ಕೌಟುಂಬಿಕ ಕಲಹದಿಮದ ನಡೆದಿರುವುದು ಸಾಬೀತಾಯಿತು. ಶರತ್ ಕೊಲೆಯೂ ಅದೇ ರೀತಿ ಆಗಿರಬಹುದು. ಈ ಸಂಬಂಧ ತನಿಖೆ ನಡೆಸಲು ಪೊಲೀಸರಿಗೆ ಸಮಯಾವಕಾಶ ಬೇಕಾಗುತ್ತದೆ ಎಂದು ಪ್ರತಿಭಟನಾಕಾರರು ಪ್ರತಿಪಾದಿಸಿದರು.
ಶೋಭಾ, ನಳಿನ್‍ಕುಮಾರ್ ಅವರು ಕೇಂದ್ರ ಗೃಹ ಸಚಿವರಿಗೆ ಬರೆದಿರುವ ಪತ್ರದಲ್ಲಿ ಸಂಫಪರಿವಾರದ ಕಾರ್ಯಕರ್ತರನ್ನು ಕೊಂದಿರುವುದಾಗಿ ಆರೋಪಿಸಿರುವ 23 ಪ್ರಕರಣಗಳನ್ನು ಎನ್‍ಐಎ ತನಿಖೆಗೆ ಆಗ್ರಹಿಸಿದ್ದಾರೆ. ಆದರೆ, ಈ ಪತ್ರದಲ್ಲಿ ಸಂಘಪರಿವಾರದಿಂದಲೇ ಕೊಲೆಯಾಗಿರುವ ಹರೀಶ್ ಪೂಜಾರಿ, ಪ್ರವೀಣ್ ಪೂಜಾರಿ, ಕೃಷ್ಣಯ್ಯ ಪಾತಾಳಿ, ವಿನಯ್‍ಕುಮಾರ್ ಬಾಳಿಗಾ, ಮುಸ್ತಫಾ ಕಾವೂರು, ಅಶ್ರಫ್ ಕಲಾಯಿ, ಜಲೀಲ್ ಕರೋಪಾಡಿ, ಸಫ್ವಾನ್ ಪಟ್ಲ, ನಾಸಿರ ಸಜಿಪ ಅಮಾಯಕರ ಕೊಲೆಯನ್ನು ಉಲ್ಲೇಖಿಸದೆ ಇರುವುದು ಸಂಸದರ ದ್ವಿಮುಖ ಧೋರಣೆ, ಪ್ರಜಾಸತ್ತಾತ್ಮಕ ವಿರೋಧಿತನವನ್ನು ತೋರಿಸುತ್ತದೆ ಎಂದು ಅವರು ಟೀಕಿಸಿದರು.
ಆತ್ಮಹತ್ಯೆಗಳು, ಸರಕಾರಿ ಉದ್ಯೋಗಿಗಳ ಸಾವುಗಳಿಗೆ ಕೋಮುಬಣ್ಣ, ರಾಜಕೀಯ ಬಣ್ಣಹಚ್ಚಿ ಆರ್‍ಎಸ್‍ಎಸ್ ಮತ್ತು ಬಿಜೆಪಿ ಪರಿವಾರ ಅರಾಜಕತೆ ಸೃಷ್ಟಿಸುತ್ತಿದೆ. ಈ ಹಿನ್ನೆಲೆಯಲ್ಲಿ ಶೋಭಾ ಮತ್ತು ನಳಿನ್‍ಕುಮಾರ್ ಅವರ ಲೋಕಸಭಾ ಸದಸ್ಯತ್ವವನ್ನು ರದ್ದುಗೊಳಿಸಬೇಕು ಎಂದು ಲೋಕಸಭೆ ಸ್ಪೀಕರ್, ಚುನಾವಣಾ ಆಯೋಗಕ್ಕೆ ಅವರು ತಾಕೀತು ಮಾಡಿದರು.
ಕೋಮು ಪ್ರಚೋದನೆ ಮತ್ತು ರಾಜ್ಯದಲ್ಲಿ ಅರಾಜಕತೆ ಸೃಷ್ಠಿಸುತ್ತಿರುವ ಬಿಜೆಪಿ ಸಂಸದರು, ಶಾಸಕರು ಮತ್ತು ಸಂಘಪರಿವಾರದ ನಾಯಕರಾದ ಡಾ.ಪ್ರಭಾಕರ್ ಭಟ್ ಕಲ್ಲಡ್ಕ, ಶರಣ್ ಪಂಪ್‍ವೆಲ್, ಜಗದೀಶ್ ಶೇಣವ, ಸತ್ಯಜಿತ್ ಸುರತ್ಕಲ್ ಮೊದಲಾದವರ ವಿರುದ್ಧ ಪ್ರಕರಣ ದಾಖಲಿಸಿ ಜೈಲಿಗಟ್ಟಬೇಕು ಎಂದೂ ಪ್ರತಿಭಟನಾಕಾರರು ಆಗ್ರಹಿಸಿದರು.
ಎಸ್‍ಡಿಪಿಐ ಜಿಲ್ಲಾಧ್ಯಕ್ಷ ಮುಹಮ್ಮದ್ ತಾಹೇರ್, ಅಸ್ಗರ್ ಅಹಮದ್, ಲಕ್ಷ್ಮಣ್ ಚೀರನಹಳ್ಳಿ, ಅಭಿಗೌಡ, ಮುಖ್ತಾರ್ ಅಫ್ಸಲ್ ಸೇರಿದಂತೆ ಹಲವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.