ನಾಲೆಗೆ ನೀರುಹರಿಸಲು ಆಗ್ರಹಿಸಿ ರೈತರ ಪ್ರತಿಭಟನೆ
ಮಂಡ್ಯ, ಜು.15: ಕೆಆರ್‍ಎಸ್ ಜಲಾಶಯದಿಮದ ನಾಲೆಗೆ ನೀರುಹರಿಸಲು ಒತ್ತಾಯಿಸಿ ರೈತಸಂಘದ ಕಾರ್ಯಕರ್ತರು ನಗರದ ಕಾವೇರಿ ನೀರಾವರಿ ನಿಗಮದ ಕಚೇರಿ ಎದುರು ಶನಿವಾರ ಪ್ರತಿಭಟನೆ ನಡೆಸಿದರು.
ಸಂಘದ ರಾಜ್ಯ ಮುಖಂಡ ಕೆ.ಎಸ್.ನಂಜುಂಡೇಗೌಡರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ ಕಾರ್ಯಕರ್ತರು, ಕೂಡಲೇ ಜಲಾಶಯದಿಂದ ನೀರುಹರಿಸಿ ಕೆರೆಕಟ್ಟೆಗಳನ್ನು ತುಂಬಿಸಬೇಕು ಎಂದು ಆಗ್ರಹಿಸಿದರು.
ಕಾವೇರಿ ಅಚ್ಚುಕಟ್ಟು ಪ್ರದೇಶದ ಜಲಾಶಯಗಳ ನೀರಿನ ಒಳಹರಿವು ಹೆಚ್ಚಾಗುತ್ತಿದ್ದಂತೆ ತಮಿಳುನಾಡಿಗೆ ನೀರು ಹರಿಯಬಿಡಲಾಗುತ್ತಿದೆ. ಮತ್ತೊಂದೆಡೆ ಜಲಾಶಯದ ನಾಲೆಗಳಿಗೆ ನೀರುಹರಿಸುತ್ತಿಲ್ಲ. ಇದು ತಾರತಮ್ಯ ನೀತಿಯಾಗಿದೆ ಎಂದು ಅವರು ಕಿಡಿಕಾರಿದರು.
ಸತತ ಬರಗಾಲಿಂದ ರಾಜ್ಯದ ರೈತರು ತತ್ತರಿಸಿದ್ದಾರೆ. ಕೆರೆಕಟ್ಟೆಗಳು ಬರಿದಾಗಿ ಜನಜಾನುವಾರುಗಳ ಕುಡಿಯುವ ನೀರಿಗೆ ತೊಂದರೆಯಾಗಿದೆ. ಪರಿಸ್ಥಿತಿ ಬಿಗಡಾಯಿಸುತ್ತಿದ್ದರೂ ನಾಲೆಗಳಿಗೆ ನೀರುಹರಿಸಲು ಮೀನಾಮೇಷ ಎಣಿಸಲಾಗುತ್ತಿದೆ ಎಂದು ಪ್ರತಿಭಟನಾಕಾರರು ತರಾಟೆಗೆ ತೆಗೆದುಕೊಂಡರು.
ನಾಲೆಯಲ್ಲಿ ನೀರುಹರಿಸಿದ್ದರೆ ಕುಡಿಯುವ ನೀರಿನ ಜತೆಗೆ, ಕೃಷಿ ಚಟುವಟಿಕೆಗೂ ಚಾಲನೆ ಸಿಗುತ್ತಿತ್ತು ಎಂದ ಅವರು, ಕೂಡಲೇ ತಮಿಳುನಾಡಿಗೆ ನೀರು ಸ್ಥಗಿತಗೊಳಿಸಿ ನಾಲೆಗಳಿಗೆ ನೀರುಹರಿಸಬೇಕು. ಇಲ್ಲದಿದ್ದರೆ ಉಗ್ರ ಪ್ರತಿಭಟನೆ ಅನಿವಾರ್ಯವಾಗುತ್ತದೆ ಎಂದು ಅವರು ಎಚ್ಚರಿಸಿದರು.
ಇಂಡುವಾಳು ಸಿದ್ದೇಗೌಡ, ಹನಿಯಂಬಾಡಿ ನಾಗರಾಜು, ಬಿ.ಬೊಮ್ಮೇಗೌಡ, ಶ್ರೀನಿವಾಸ್, ಮಾಧು, ಕøಷ್ಣೇಗೌಡ, ಪಾಂಡು, ಇತರ ಮುಖಂಡರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.