ಅಕ್ರಮ ಕಲ್ಲುಗಣಿಗಾರಿಕೆ:ಸೂಕ್ತ ರಕ್ಷಣೆ ಕೋರಿ ಡಿಎಫ್‍ಓ ದೂರು
ಮಂಡ್ಯ, ಜು.15: ಪಾಂಡವಪುರ ತಾಲೂಕು ವಲಯದ ನಡೆಯುತ್ತಿರುವ ಅಕ್ರಮ ಕಲ್ಲುಗಣಿಗಾರಿಕೆ ವಿರುದ್ಧ ಕ್ರಮ ಜರುಗಿಸುವುದಕ್ಕೆ ತಮ್ಮ ಅಧಿಕಾರಿ ಸಿಬ್ಬಂದಿಗೆ ಪ್ರಾಣ ಬೆದರಿಕೆ ಇರುವುದರಿಂದ ಸೂಕ್ತ ರಕ್ಷಣೆ ನೀಡುವಂತೆ ಉಪ ಅರಣ್ಯ ಸಂಸರಕ್ಷಣಾಧಿಕಾರಿ ಎಸ್.ಧನಂಜಯ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅವರನ್ನು ಕೋರಿದ್ದಾರೆ.
ಈ ಸಂಬಂಧ ಜುಲೈ 7 ರಂದು ದೂರು ನೀಡಿರುವ ಅವರು, ಅರಣ್ಯಪ್ರದೇಶದಲ್ಲಿ ಅಕ್ರಮ ಗಣಿಗಾರಿಕೆ ತಡೆಗಟ್ಟಲು ಅಧಿಕಾರಿ ಸಿಬ್ಬಂದಿಗಳ ಆದ್ಯ ಕರ್ತವ್ಯವಾಗಿದೆ. ಆದರೆ, ಕರ್ತವ್ಯಕ್ಕೆ ಅಡಚಣೆಯಾಗಿ ಪ್ರಾಣ ಭೀತಿ ಇರುವುದರಿಂದ ನಾಗಮಂಗಲ ಉಪವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ, ಪಾಂಡವಪುರ ವಲಯ ಅರಣ್ಯ ಸಂರಕ್ಷಣಾಧಿಕಾರಿ, ಸಿಬ್ಬಂದಿಗೆ ಸೂಕ್ತ ರಕ್ಷಣೆ ಬೇಕಾಗಿದೆ ಎಂದಿದ್ದಾರೆ.
ಪಾಂಡವಪುರ ತಾಲೂಕು ಚಿನಕುರಳಿಯ ಸರ್ವೆ ನಂ.80, ಹೊನಗಾನಹಳ್ಳಿ ಸರ್ವೆ ನಂ.127 ಮತ್ತು ಬೇಬಿಬೆಟ್ಟದ ಕಾವಲು ಸರ್ವೆ ನಂ.1ರಲ್ಲಿ ಅಕ್ರಮ ಗಣಿಗಾರಿಕೆ ನಡೆಯುತ್ತಿರುವ ಸಂಬಂಧ ನಮ್ಮ ಅಧಿಕಾರಿ, ಸಿಬ್ಬಂದಿ ಜು.1 ರಂದು ದಾಳಿ ಮಾಡಿದಾಗ ಉದ್ರಿಕ್ತ ಗುಂಪು ಕರ್ತವ್ಯಕ್ಕೆ ಅಡ್ಡಿಪಡಿಸಿದರು ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.
ದಾಳಿ ವೇಳೆ ಕಲ್ಲು ಸಾಗಿಸುತ್ತಿದ್ದ ಒಂದು ಲಾರಿಯನ್ನು ವಶಪಡಿಸಿಕೊಂಡಾಗ ಸುಮಾರು 350 ರಿಂದ 400 ಮಂದಿ ಸುತ್ತುವರಿದು ಅಡ್ಡಿಪಡಿಸಿದರು. ಅಲ್ಲಿಗೆ ಆಗಮಿಸಿದ ಸಂಸದ ಸಿ.ಎಸ್.ಪುಟ್ಟರಾಜು ಅವರು, ಇದು ಅರಣ್ಯ ಪ್ರದೇಶವಲ್ಲ, ಗ್ರಾಪಂ ವ್ಯಾಪ್ತಿಗೆ ಬರುತ್ತದೆ. ಕಲ್ಲುಗಣಿಗಾರಿಕೆ ನಿಲ್ಲಿಸಿದರೆ ಸಾವಿರಾರು ಜನರ ಬದುಕಿನ ಮೇಲೆ ತೀವ್ರ ಪರಿಣಾಮ ಬೀರುತ್ತದೆ ಎಂದರು ಎಂದು ದೂರಿನಲ್ಲಿ ಪ್ರಸ್ತಾಪಿಸಲಾಗಿದೆ.
ಆದರೆ, ಚಿನಕುರಳಿಯ ಸರ್ವೆ ನಂ.80 ಹಾಗೂ ಹೊನಗಾನಹಳ್ಳಿ ಸರ್ವೆ ನಂ.127 ಪ್ರದೇಶವು ಅರಣ್ಯ ಪ್ರದೇಶ ವ್ಯಾಪ್ತಿಯಲ್ಲಿದೆ ಎಂಬುದು ಪರಿಶೀಲನೆಯಿಂದ ತಿಳಿದುಬಂದಿದೆ. ಆದ್ದರಿಂದ ಈ ಪ್ರದೇಶದಲ್ಲಿನ ಅಕ್ರಮ ಕಲ್ಲುಗಣಿಗಾರಿಕೆ ತಡೆಗಟ್ಟಲು ತಮ್ಮ ಅಧಿಕಾರಿ, ಸಿಬ್ಬಂದಿಗೆ ಸೂಕ್ತ ರಕ್ಷನೆ ಅಗತ್ಯವಿದೆ ಎಂದು ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ದೂರಿನಲ್ಲಿ ಮನವಿ ಮಾಡಿದ್ದಾರೆ.
ಬಂಧನಕ್ಕೆ ಒತ್ತಾಯ: ಅರಣ್ಯಾಧಿಕಾರಿಗಳ ಕರ್ತವ್ಯ ಅಡ್ಡಿಪಡಿಸಿದ ಸಂಸದ ಸಿ.ಎಸ್.ಪುಟ್ಟರಾಜು ಮತ್ತು ಇತರರ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹಿಸಿರುವ ಆರ್‍ಟಿಐ ಕಾರ್ಯಕರ್ತ ಕೆ.ಆರ್.ರವೀಂದ್ರ, ಅರಣ್ಯಾಧಿಕಾರಿಗಳು ಜು.7 ರಂದು ದೂರು ಸಲ್ಲಿಸಿದ್ದರೂ ಇದುವರೆಗೂ ಕ್ರಮಕೈಗೊಂಡಿಲ್ಲದಿರುವುದನ್ನು ಖಂಡಿಸಿದ್ದಾರೆ.