ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನ ಮುಸ್ಲಿಮರಿಗೆ ನೀಡಲು ಆಗ್ರಹ
ಹಾಸನ, ಜು.15 : ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನ ಮುಸ್ಲಿಮರಿಗೆ ನೀಡಬೇಕು ಎಂದು ಹಾಸನ ಜಿಲ್ಲಾ ಕಾಂಗ್ರೆಸ್ ಮುಸ್ಲಿಂ ಮುಖಂಡರು ಆಗ್ರಹಿಸಿದ್ದಾರೆ. ಜಿಲ್ಲೆಯ ಕಾಂಗ್ರೆಸ್ ಕಛೇರಿಯಲ್ಲಿ ಸಭೆ ನಡೆಸಿದ ಕಾಂಗ್ರೆಸ್ ಪಕ್ಷದ ಮುಸ್ಲಿಂ ಮುಖಂಡರು ಬಿ.ಶಿವರಾಂ ರಾಜ್ಯ ಕಾಂಗ್ರೆಸ್ ಉಪಾಧ್ಯಕ್ಷರಾಗಿ ನೇಮಕಗೊಂಡಿದ್ದು, ಈ ಹಿನ್ನಲೆಯಲ್ಲಿ ತೆರವಾಗಿರುವ ಜಿಲ್ಲಾಧ್ಯಕ್ಷ ಸ್ಥಾನವನ್ನು ಮುಸ್ಲಿಮರಿಗೆ ನೀಡಿ ಪಕ್ಷ ಕಟ್ಟಲು ಅವಕಾಶ ನೀಡಬೇಕು ಎಂದು ಸಭೆಯಲ್ಲಿ ಒಕ್ಕರಳಿನಿಂದ ಆಗ್ರಹಿಸಿದರು.
ಕಾಂಗ್ರೆಸ್ ಇತಿಹಾಸದಲ್ಲೇ ಜಿಲ್ಲಾಧ್ಯಕ್ಷ ಸ್ಥಾನವನ್ನು ಮುಸ್ಲಿಮರಿಗೆ ನೀಡಿಲ್ಲ ಹಾಗೂ ಯಾವುದೇ ಉನ್ನತ ಹುದ್ದೆಯು ದೊರೆತಿಲ್ಲ. ಎಂ.ಎಲ್.ಎ., ಎಂ.ಎಲ್.ಸಿ ನಿಗಮ ಮಂಡಳಿ ಅಧ್ಯಕ್ಷರಾಗಲು ಸಾಧ್ಯವಾಗಿಲ್ಲ. ಇದಕ್ಕೆ ಪಕ್ಷದಲ್ಲಿನ ಉನ್ನತ ಹುದ್ದೆಯನ್ನು ಅಲಂಕರಿಸದಿರುವುದು ಕಾರಣವಾಗಿದೆ. ಪ್ರಮುಖ ಸ್ಥಾನದಲ್ಲಿ ಕುಳಿತು ಕಾರ್ಯನಿರ್ವಹಿಸಿ ಉನ್ನತ ಹುದ್ದೆಯನ್ನು ಪಡೆಯಲು ಮುಂದಾಗಬೇಕು. ಈ ನಿಟ್ಟಿನಲ್ಲಿ ಜಿಲ್ಲಾಧ್ಯಕ್ಷ ಸ್ಥಾನ ಪಡೆಯುವುದು ಅಗತ್ಯ ಎಂದು ಸಭೆಯಲ್ಲಿ ಅನೇಕ ಗಣ್ಯರು ಅಭಿಪ್ರಾಯ ಪ್ರಕಟಿಸಿದರು.
ಕಾಂಗ್ರೆಸ್ ಪಕ್ಷ ಮುಸ್ಲಿಮರಿಗೆ ಅನೇಕ ಸೌಲಭ್ಯಗಳನ್ನು ವಿವಿಧ ಯೋಜನೆಗಳನ್ನು ನೀಡಿದೆ. ಸಿದ್ದರಾಮಯ್ಯರ ಸರ್ಕಾರ ನೀಡಿದಷ್ಟು ಸೌಲಭ್ಯ ಯಾರು ನೀಡಿಲ್ಲ. ಪಕ್ಷದ ಬಗ್ಗೆ ಯಾವುದೇ ತಕರಾರು ಇಲ್ಲ. ಪಕ್ಷಕ್ಕೆ ನಿಷ್ಠೆಯಾಗಿ ಮುಂದಿನ ಚುನಾವಣೆಯಲ್ಲಿ ಕೆಲಸ ಮಾಡಿ ಅಧಿಕಾರಕ್ಕೆ ತರುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಈ ಕೆಲಸವನ್ನು ಹಿಂದಿನಿಂದಲೂ ನಾವುಗಳು ನಿಷ್ಠೆಯಿಂದ ಮಾಡುತ್ತಾ ಬಂದಿದ್ದೇವೆ. ಮುಂದೆಯೂ ಮಾಡುತ್ತೇವೆ. ಪ್ರಮುಖ ಜವಾಬ್ದಾರಿಗಳನ್ನು ನೀಡಿದರು. ನಿಷ್ಟೆಯಿಂದ ಮಾಡುತ್ತೇವೆ ಎಂಬುದನ್ನು ಪಕ್ಷದ ವರಿಷ್ಠರಿಗೆ ಮನವರಿಕೆ ಮಾಡಿಕೊಡಲು 22ರಂದು ಸೋಮವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಪಕ್ಷದ ರಾಜ್ಯಾಧ್ಯಕ್ಷ ಪರಮೇಶ್ವರ್, ಜಿಲ್ಲಾಮಂತ್ರಿ ಎ.ಮಂಜು, ರಾಜ್ಯ ಉಪಾಧ್ಯಕ್ಷ ಬಿ.ಶಿವರಾಂ ಹಾಗೂ ಇತರರನ್ನು ಭೇಟಿ ಮಾಡಲು ಸಭೆಯಲ್ಲಿ ನಿರ್ಧರಿಸಲಾಯಿತು.
ಈ ಸಭೆಯಲ್ಲಿ ಜಿಲ್ಲಾ ಪಂಚಾಯತ್ ಸದಸ್ಯ ತೌಫಿಕ್ ಅಹಮ್ಮದ್, ಜಿಲ್ಲಾ ಕಾಂಗ್ರೆಸ್ ಅಲ್ಪ ಸಂಖ್ಯಾತರ ಘಟಕದ ಅಧ್ಯಕ್ಷ ಅಬ್ದುಲ್ ಹಾದಿ, ಪ್ರಧಾನ ಕಾರ್ಯದರ್ಶಿ, ಮೆಹಬೂಬ್ ಪಾಷ, ಪುರಸಭೆ ಮಾಜಿ ಅಧ್ಯಕ್ಷ ಸಯ್ಯದ್ ಮುಫೀಝ್, ಸಮತ್ ಕೊಲ್ಲಹಳ್ಳಿ ಸಲೀಂ, ರಫೀಕ್ ದರ್ಬಾರ್, ಆರೀಫ್ , ಗೌಸ್, ಡಿ.ಎಂ.ಆರ್.ಮುದಾಸಿರ್ ಮುಂತಾದವರು ಇದ್ದರು.