×
Ad

ಹಲ್ಲೆ ಖಂಡಿಸಿ ದಲಿತ ಹಕ್ಕುಗಳ ಸಮಿತಿಯಿಂದ ಪ್ರತಿಭಟನೆ

Update: 2017-07-16 16:19 IST

ಹಾಸನ, ಜು.16: ದೇವರ ದರ್ಶನ ಪಡೆಯುವ ವೇಳೆ ಹಲ್ಲೆ ಮಾಡಲಾಗಿದೆ ಎಂದು ಖಂಡಿಸಿ ದಲಿತ ಕಾಲೋನಿಯಲ್ಲಿ ದಲಿತ ಹಕ್ಕುಗಳ ಸಮಿತಿಯಿಂದ ಅಲ್ಲಿನ ನಿವಾಸಿಗಳು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಳೆದ ಶುಕ್ರವಾರ ತಾಲೂಕಿನ ತಟ್ಟೆಕೆರೆ ಗ್ರಾಮದಲ್ಲಿ ತಾಯಿ ಮಾರಮ್ಮ ದೇವಿ ಬಂಡಿ ಹಬ್ಬದ ಜಾತ್ರೆ ಕಾರ್ಯಕ್ರಮವನ್ನು ಮುಗಿಸಿ, ನಂತರ ದೇವರನ್ನು ತಟ್ಟೆಕೆರೆ ಗ್ರಾಮದ ದೇವಸ್ಥಾನದ ಮುಂಭಾಗ ಒಂದು ಶೆಡ್‌ನಲ್ಲಿ ಇಡಲಾಗಿತ್ತು. ಈ ವೇಳೆ ದೇವರ ದರ್ಶನ ದಲಿತರಿಗೂ ಕೊಡಬೇಕು ಎಂದು ಮನವಿ ಮಾಡಿದಾಗ ಅಡ್ಡಿಪಡಿಸಲಾಯಿತು. ದೇವರ ಮುಟ್ಟಲು ಅವಕಾಶ ಕೊಡುವುದಿಲ್ಲ ಎಂದು ಗ್ರಾಮದ ಪಾಪಣ್ಣ, ಧರ್ಮ, ಹಾಗೂ ಮಂಜು ಎಂಬವರು ದಬ್ಬಾಳಿಕೆಯಲ್ಲಿ ನಮ್ಮ ಮೇಲೆ ಏಕಾಏಕಿ ದೌರ್ಜನ್ಯ ಎಸಗಿದ್ದಾರೆ. ಎಂ.ಇ. ಮಂಜುನಾಥ್ ಹಾಗೂ ಆತನ ಪತ್ನಿ ದಿವ್ಯ, ಮತ್ತು ಪಾಂಡು, ಪ್ರಸನ್ನ ಎಂಬವರ ಮೇಲೆ ಹಲ್ಲೆ ಮಾಡಲಾಗಿದೆ ಎಂದು ದೂರಿದರು.

ಬಾಯಿಗೆ ಬಂದಂತೆ ಜಾತಿ ನಿಂದನೆ ಮಾಡಿ ಇಬ್ಬರ ಅಂಗಿಯನ್ನು ಕೂಡ ಹರಿದು ಹಾಕಲಾಗಿದೆ. ಇದರಿಂದ ನಮಗೆ ಮಾನಸಿಕವಾಗಿ ಹಿಂಸೆ ನೀಡಿರುತ್ತಾರೆ ಎಂದು ಹೇಳಿದರು. ಕೂಡಲೇ ಹಲ್ಲೆ ಮಾಡಿದವರನ್ನು ಬಂಧಿಸಿ ಅವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಿ ನಮಗೆ ರಕ್ಷಣೆ ನೀಡಬೇಕೆಂದು ಆಗ್ರಹಿಸಿದರು.

 ದಲಿತ ಹಕ್ಕುಗಳ ಸಮಿತಿ ಅಧ್ಯಕ್ಷ ಎಂ.ಜಿ. ಪೃಥ್ವಿ ಮಾತನಾಡಿ, ದಲಿತರ ಮೇಲೆ ಹಲ್ಲೆ ನಿರಂತರವಾಗಿ ನಡೆಯುತ್ತಲೆ ಇದೆ. ತಟ್ಟೆಕೆರೆ ಗ್ರಾಮದಲ್ಲಿ ಮಾರಮ್ಮ ದೇವಿ ಜಾತ್ರೆಯ ಉತ್ಸವದ ವೇಳೆ ದಲಿತರ ಮೇಲೆ ಕೆಲ ಸವರ್ಣಿಯರು ಹಲ್ಲೆ ಮಾಡಿದ್ದು, ಜಾತಿ ಹೆಸರಿನಲ್ಲಿ ದಲಿತರನ್ನು ನಿಂದಿಸಿರುವುದನ್ನು ಖಂಡಿಸುವುದಾಗಿ ಹೇಳಿದರು. ಇಲ್ಲಿನ ದೇವಾಲಯಕ್ಕೆ ದಲಿತರಿಗೆ ಮುಕ್ತ ಅವಕಾಶ ಕೊಡಬೇಕು. ಕೂಡಲೇ ಜಿಲ್ಲಾಡಳಿತ ಎಚ್ಚೆತ್ತುಕೊಂಡು ಅವರ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ ಉಗ್ರ ಹೋರಾಟ ಮಾಡುವುದಾಗಿ ಹೇಳಿದರು.

ಕೆಲ ದಿನಗಳ ಹಿಂದೆ ಬಿಜೆಪಿ ಪಕ್ಷದ ರಾಜ್ಯಾಧ್ಯಕ್ಷ ಹಾಗೂ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರು ತಟ್ಟೆಕೆರೆ ದಲಿತ ಕಾಲೋನಿಗೆ ಬಂದು ತಿಂಡಿ ಸೇವನೆ ಮಾಡಿದ್ದರು. ಇವೆಲ್ಲಾ ಚುನಾವಣೆಯಲ್ಲಿ ಮತ ಪಡೆಯುವ ಉದ್ದೇಶವಾಗಿದೆ. ದೊಡ್ಡ ದೊಡ್ಡ ರಾಜಕಾರಣಿಗಳು ದಲಿತರ ಮನೆಗೆ ಹೋಗುವುದು ನೆಪ ಮಾತ್ರಕ್ಕೆ ಎಂದು ಕಿಡಿಕಾರಿದರು. ಈಗಾಗಲೇ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ನೀಡಿರುವುದಾಗಿ ಹೇಳಿದರು.

 ತಟ್ಟೆಕೆರೆ ಗ್ರಾಮದ ಮುಖಂಡರು ಮಾತನಾಡಿ, ಮೂರು ವರ್ಷಕ್ಕೊಮ್ಮೆ ನಡೆಯುವ ಬಂಡಿ ಹಬ್ಬವನ್ನು ಪ್ರತಿ ವರ್ಷದಂತೆ ಈ ವರ್ಷವೂ ಆಚರಿಸಲಾಯಿತು. ಹಬ್ಬ ಮುಗಿದ ಮರುದಿನ  ದೇವರ ಉತ್ಸವವನ್ನು ಊರಿನ ಒಳಗೆ ತಂದು ಶೆಡ್‌ನಲ್ಲಿ ಇಡಲಾಯಿತು. ದೇವರ ಅಡ್ಡೆಯನ್ನು ನಾವು ಹೊತ್ತು ಪೂಜೆ ಮಾಡುವುದಾಗಿ ಮದ್ಯ ಸೇವನೆ ಮಾಡಿದ ಕೆಲ ದಲಿತರು ಪೂಜೆ ಮಾಡಲು ಮುಂದಾದರು. ಈ ವೇಳೆ ಊರಿನ ಸವರ್ಣಿಯ ಕೆಲವೇ ಕೆಲವರು ಮಾತ್ರ ಕುಡಿದ ಅಮಲಿನಲ್ಲಿ ಇದಕ್ಕೆ ವಿರೋಧ ಮಾಡಿದರು. ಈ ಸಂದರ್ಭದಲ್ಲಿ ಇವರ ನಡುವೇ ಘರ್ಷಣೆ ನಡೆದು, ಎರಡೂ ಕಡೆಯವರ ನಡುವೆ ಹೊಡೆದಾಟ ನಡೆದಿದೆ ಎಂದರು. ಮಂಜು ಎಂಬವರ ಮೇಲೂ ಪೆಟ್ಟು ಬಿದ್ದಿದೆ ಎಂದು ಘಟನೆ ವಿವರಿಸಿದರು. ಈ ಬಗ್ಗೆ ಚರ್ಚೆ ಮಾಡಿ ಸಮಸ್ಯೆಯನ್ನು ಬಗೆಹರಿಸಿಕೊಳ್ಳುವುದಾಗಿ ಇದೆ ಸಂದರ್ಭದಲ್ಲಿ ಪತ್ರಕರ್ತರಿಗೆ ತಿಳಿಸಿದರು.
ಮುನ್ನೆಚ್ಚರಿಕ ಕ್ರಮವಾಗಿ ತಟ್ಟೆಕೆರೆಯಲ್ಲಿ ಹೆಚ್ಚಿನ ಪೊಲೀಸ್ ಬಿಗಿ ಬಂದು ಬಸ್ತು ಮಾಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News