ಕೊಡಗು ಜಿಲ್ಲೆಗೆ ಪ್ರತ್ಯೇಕ ವಿಶ್ವವಿದ್ಯಾನಿಲಯ: ಪ್ರೊ. ಕೆ.ಬೈರಪ್ಪ

Update: 2017-07-16 11:04 GMT

ಮಡಿಕೇರಿ ಜು.16 : ಮುಂದಿನ ವರ್ಷಗಳಲ್ಲಿ ಕೊಡಗು ಜಿಲ್ಲೆಯಲ್ಲಿ ಪ್ರತ್ಯೇಕ ವಿಶ್ವವಿದ್ಯಾನಿಲಯ ಸ್ಥಾಪನೆಯಾಗಬೇಕಿದ್ದು, ಈ ನಿಟ್ಟಿನಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕೆಂದು ಮಂಗಳೂರು ವಿಶ್ವವಿದ್ಯಾನಿಲಯದ ಉಪಕುಲಪತಿಗಳಾದ ಪ್ರೊ. ಕೆ.ಬೈರಪ್ಪ ಸಲಹೆ ನೀಡಿದ್ದಾರೆ.

ಕೂರ್ಗ್ ಎಜುಕೇಷನ್ ಟ್ರಸ್ಟ್‌ನ ವತಿಯಿಂದ ನಗರದದಲ್ಲಿ ಆರಂಭಿಸಿರುವ ಕೂರ್ಗ್ ಇನ್ಸ್‌ಟಿಟ್ಯೂಟ್ ಆಫ್ ಹಾಸ್ಟಿಟಾಲಿಟಿ ಸೈನ್ಸ್ ಕೋರ್ಸ್‌ಗೆ ಚಾಲನೆ ನೀಡಿ ಅವರು ಮಾತನಾಡಿದರು.

ಕೊಡಗು ಜಿಲ್ಲೆಯ ವಿದ್ಯಾರ್ಥಿಗಳು ಉನ್ನತ ಶಿಕ್ಷಣಕ್ಕಾಗಿ ಬೆಂಗಳೂರು, ಮೈಸೂರು, ಮಂಗಳೂರನ್ನು ಅವಲಂಭಿಸಬೇಕಾಗಿದ್ದ ಸನ್ನಿವೇಶದ ನಡುವೆ ಕೊಡಗು ಜಿಲ್ಲೆಯ ಚಿಕ್ಕಳುವಾರದಲ್ಲಿ ಸ್ನಾತಕೋತ್ತರ ಕೇಂದ್ರವನ್ನು ಪ್ರಾರಂಭಿಸಲಾಗಿದೆ. ಕಳೆದ ಮೂರು ವರ್ಷಗಳ ಹಿಂದೆ ಕಾರ್ಯಾರಂಭಗೊಂಡಿರುವ ಈ ಕೇಂದ್ರ ಅಗತ್ಯ ಮೂಲಭೂತ ಸೌಲಭ್ಯಗಳೊಂದಿಗೆ ಉತ್ತಮ ಕೇಂದ್ರವಾಗಿ ರೂಪುಗೊಳ್ಳುತ್ತಿದೆ. ಇದರೊಂದಿಗೆ ಜಿಲ್ಲೆಯ ವಿವಿಧ ಭಾಗಗಳಲ್ಲಿ ಇನ್ನಷ್ಟು ಕಾಲೇಜುಗಳು ಪ್ರಾರಂಭವಾಗಬೇಕು ಎಂದರು.

ಶೈಕ್ಷಣಿಕವಾಗಿ ಜಿಲ್ಲೆ ಮುಂದಿನ ದಿನಗಳಲ್ಲಿ ಇನ್ನಷ್ಟು ಬೆಳೆದರೆ ಕೊಡಗಿಗೆ ಪ್ರತ್ಯೇಕ ವಿಶ್ವವಿದ್ಯಾಲಯ ಹೊಂದಿಕೊಳ್ಳಲು ಅವಕಾಶ ಇದೆ. ಈ ನಿಟ್ಟಿನಲ್ಲಿ ಇನ್ನಷ್ಟು ಹೊಸ ಕಾಲೇಜುಗಳು ಬರಬೇಕಿದೆ. ಜಿಲ್ಲೆ ಇತ್ತೀಚಿನ ವರ್ಷಗಳಲ್ಲಿ ಉತ್ತಮ ಶಿಕ್ಷಣ ಕೇಂದ್ರವಾಗಿ ಪ್ರಗತಿ ಕಾಣುತ್ತಿದೆ. ಹಾಸ್ಟಿಟಾಲಿಟಿ ಸೈನ್ಸ್ ಮೂಲಕ ಉದ್ಯಮಶೀಲತಾ ತರಬೇತಿಯ ಪ್ರಯತ್ನ ಸ್ವಾಗತಾರ್ಹ ಎಂದು ಅವರು ಅಭಿಪ್ರಾಯಪಟ್ಟರು.

ಅತಿಥಿ ಸತ್ಕಾರಕ್ಕೆ ಜಿಲ್ಲೆ ಹೆಸರಾಗಿದೆ. ಇಲ್ಲಿನ ಜನತೆಯ ಈ ಮನೋಭಾವನೆಯಿಂದಲೇ ಕೊಡಗಿನಲ್ಲಿ ಪ್ರವಾಸೋದ್ಯಮ ಕ್ಷಿಪ್ರಗತಿಯಲ್ಲಿ ಬೆಳೆದಿದೆ. ಪ್ರವಾಸೋದ್ಯಮದ ಬೆಳವಣಿಗೆಯ ನಡುವೆ ಕೊಡಗಿನ ನೈಜ್ಯತೆ, ಪರಿಸರವೂ ಸಂರಕ್ಷಣೆಯಾಗಬೇಕು. ಇದಕ್ಕೆ ಯಾವುದೇ ಧಕ್ಕೆಯಾಗದಂತಹ ಮಾರ್ಗದರ್ಶನವನ್ನೂ ಈ ಮೂಲಕ ನೀಡಬೇಕು ಎಂದು ಪ್ರೊ. ಕೆ. ಬೈರಪ್ಪ ಸಲಹೆ ನೀಡಿದರು. ನೂತನ ಶಿಕ್ಷಣ ಸಂಸ್ಥೆ ಪ್ರವಾಸಿ ಕೇಂದ್ರ ಮಡಿಕೇರಿಗೆ ಹೊಸತೊಂದು ಗರಿ ಎಂದ ಅವರು, ಸಂಸ್ಥೆಯಲ್ಲಿನ ವ್ಯವಸ್ಥೆಯ ಬಗ್ಗೆಯೂ ಮೆಚ್ಚುಗೆ ವ್ಯಕ್ತಪಡಿಸಿದರು.

ಜಿಲ್ಲಾಧಿಕಾರಿ ಡಾ. ರಿಚರ್ಡ್ ವಿನ್ಸೆಂಟ್ ಡಿಸೋಜ ಅವರು ಮಾತನಾಡಿ, ಯಾವುದೇ ಉದ್ಯಮಕ್ಕೆ ಕೌಶಲ್ಯ ಅಭಿವೃದ್ಧಿ ಅತ್ಯಗತ್ಯ. ಕೊಡಗು ಅತಿಥಿ ಸತ್ಕಾರಕ್ಕೆ ಹೆಸರಾಗಿದೆ. ಉತ್ತಮ ತರಬೇತಿಯೊಂದಿಗೆ ಉದ್ಯೋಗದಲ್ಲಿ ತೊಡಗಿದರೆ ಇನ್ನಷ್ಟು ಪ್ರಗತಿ ಸಾಧ್ಯ ಎಂದರು.

ಕೂರ್ಗ್ ಎಜುಕೇಷನ್ ಟ್ರಸ್ಟ್‌ನ ಅಧ್ಯಕ್ಷರಾದ ಡಾ.ಕನ್ನಂಡ ನಿರ್ಮಲಾ ಸೋಮಣ್ಣ ಅಧ್ಯಕ್ಷತೆ ವಹಿಸಿದ್ದರು. ಟ್ರಸ್ಟಿಗಳಾದ ಮಂಡೇಪಂಡ ರತನ್ ಕುಟ್ಟಯ್ಯ, ಅಪ್ಪಾರಂಡ ವೇಣು, ಕುಂಡ್ಯೋಳಂಡ ದಿನೇಶ್ ಕಾರ್ಯಪ್ಪ ಹಾಜರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News