ಮಗನ 'ಹೇರ್‍ಸ್ಟೈಲ್' ವಿಚಾರ: ಆತ್ಮಹತ್ಯೆಗೆ ಶರಣಾದ ತಾಯಿ!
ಶಿವಮೊಗ್ಗ, ಜು. 17: 'ಹೇರ್‍ಸ್ಟೈಲ್'ಗೆ ಸಂಬಂಧಿಸಿದಂತೆ ಅಮ್ಮ - ಮಲಮಗನ ನಡುವೆ ಏರ್ಪಟ್ಟ ವಿವಾದ ಆತ್ಮಹತ್ಯೆಯೊಂದಿಗೆ ಅಂತ್ಯ ಕಂಡಿರುವ ಘಟನೆ ಶಿವಮೊಗ್ಗ ನಗರದ ವಿನೋಬನಗರ ಬಡಾವಣೆಯ 60 ಅಡಿ ರಸ್ತೆಯಲ್ಲಿ ವರದಿಯಾಗಿದೆ.
ವಿ. ಪ್ರತಿಭಾ (47) ಆತ್ಮಹತ್ಯೆಗೆ ಶರಣಾದ ತಾಯಿ ಎಂದು ಗುರುತಿಸಲಾಗಿದೆ. ಇವರು ಗಾಡಿಕೊಪ್ಪದ ಸ್ಯಾನ್‍ಜೋಸ್ ಶಾಲೆಯಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದರು.
ಪ್ರತಿಭಾರವರ ಪತಿ ಡಾ. ಚಂದ್ರಶೇಖರ್‍ರವರು ವೈದ್ಯರಾಗಿ ಕಾರ್ಯನಿರ್ವಹಣೆ ಮಾಡುತ್ತಿದ್ದಾರೆ. ಆಯನೂರಿನಲ್ಲಿ ಕ್ಲಿನಿಕ್‍ವೊಂದನ್ನು ತೆರೆದಿದ್ದಾರೆ. ಇವರ ಮೊದಲ ಪತ್ನಿ ಮೃತಪಟ್ಟಿದ್ದರು. ಪ್ರತಿಭಾರವರಿಗೆ ಮಕ್ಕಳಿರಲಿಲ್ಲ. ಶುಕ್ರವಾರ ಸಂಜೆ ಪ್ರತಿಭಾ ಶಾಲೆಯಿಂದ ಮನೆಗೆ ಆಗಮಿಸಿದ್ದಾರೆ. ಮಲಮಗ ಹೇರ್‍ಕಟ್ಟಿಂಗ್ ಮಾಡಿಸಿಕೊಂಡು ಬಂದಿದ್ದನ್ನು ಗಮನಿಸಿ, ಮುಂಬದಿ ಉದ್ದನೆಯ ಕೂದಲು ಬಿಟ್ಟುಕೊಂಡಿದ್ದೇಕೆ ಎಂದು ಪ್ರಶ್ನಿಸಿದ್ದಾರೆ.
ಮುಂಬದಿಯ ಉದ್ದನೆಯ ಕೂದಲು ಕಟ್ ಮಾಡಿಸಿಕೊಂಡು ಬರುವಂತೆ ಸೂಚಿಸಿದ್ದು, ಆದರೆ ಇದಕ್ಕೆ ಮಲಮಗ ಒಪ್ಪಿರಲಿಲ್ಲ. ಇದು ಫ್ಯಾಷನ್ ಎಂದು ಹೇಳಿದ್ದ. ಇದರಿಂದ ಆಕ್ರೋಶಗೊಂಡ ಪ್ರತಿಭಾ ತಾವೇ ಕತ್ತರಿ ತೆಗೆದುಕೊಂಡು ಆತನ ತಲೆಯ ಕೂದಲು ಕತ್ತರಿಸಿದ್ದರು. ಇದಕ್ಕೆ ಮಲಮಗ ಆಕ್ಷೇಪ ವ್ಯಕ್ತಪಡಿಸಿದ್ದ.
ಇದರಿಂದ ಬೇಸರಗೊಂಡ ಪ್ರತಿಭಾ ಮಲಗುವ ಕೋಣೆಯಲ್ಲಿ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾರೆ. ತಾಯಿ ಕೊಠಡಿಯ ಬಾಗಿಲು ತೆರೆಯದಿದ್ದರಿಂದ ಆತಂಕಗೊಂಡ ಮಲಮಗ ಅಪ್ಪ ಹಾಗೂ ಅಜ್ಜನಿಗೆ ಪೋನ್ ಮೂಲಕ ಮಾಹಿತಿ ರವಾನಿಸಿದ್ದಾನೆ. ಇವರು ಆಗಮಿಸಿ ಪರಿಶೀಲಿಸಿದಾಗ ಪ್ರತಿಭಾ ಆತ್ಮಹತ್ಯೆಗೆ ಶರಣಾಗಿದ್ದು ಕಂಡುಬಂದಿದೆ. ಈ ಸಂಬಂಧ ವಿನೋಬನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.