ನಾಲೆಗಳಿಗೆ ನೀರುಹರಿಸಲು ಜಿ.ಮಾದೇಗೌಡ ಆಗ್ರಹ : ಕೆರೆಯಂಗಳದ ಧರಣಿ 11ನೆ ದಿನಕ್ಕೆ

Update: 2017-07-16 13:15 GMT

ಮದ್ದೂರು, ಜು.16: ಕೂಡಲೇ ಕೆಆರ್‍ಎಸ್ ಜಲಾಶಯದಿಂದ ನಾಲೆಗಳಿಗೆ ನೀರುಹಸಬೇಕು ಎಂದು ಮಾಜಿ ಸಂಸದ ಹಾಗೂ ಮಂಡ್ಯ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಅಧ್ಯಕ್ಷ ಜಿ.ಮಾದೇಗೌಡ ಒತ್ತಾಯಿಸಿದ್ದಾರೆ.
ಕಾವೇರಿ ಕೊಳ್ಳದ ಕೆರೆಕಟ್ಟೆಗಳಿಗೆ ನೀರು ತುಂಬಿಸಲು ಆಗ್ರಹಿಸಿ ಕಸ್ತೂರಿ ಕರ್ನಾಟಕ ಜನಪರ ವೇದಿಕೆ ನೇತೃತ್ವದಲ್ಲಿ ಕಳೆದ 10 ದಿನದಿಂದ ತಾಲೂಕಿನ ದೇಶಹಳ್ಳಿ ಕೆರೆಯಲ್ಲಿ ನಡೆಯುತ್ತಿರುವ ಧರಣಿಯಲ್ಲಿ ಪಾಲ್ಗೊಂಡು ಮಾತನಾಡಿದರು.

ರಾಜ್ಯದಲ್ಲಿ ತೀವ್ರ ಬರಗಾಲವಿದೆ. ಕೆರೆಕಟ್ಟೆಗಳು ಬತ್ತಿ ಹೋಗಿವೆ. ಪ್ರಾಣಿ, ಪಕ್ಷಿಗಳಿಗೂ ಕುಡಿಯಲು ನೀರಿಲ್ಲದಂತಹ ಪರಿಸ್ಥಿತಿ ಬಂದಿದೆ. ಅಹೋರಾತ್ರಿ ಧರಣಿ ನಡೆಸಿದರೂ ಸರಕಾರ ನಾಲೆಗಳಲ್ಲಿ ನೀರುಹರಿಸಲು ಮುಂದಾಗಿಲ್ಲ ಎಂದು ಅವರು ಕಿಡಿಕಾರಿದರು.
ರಾಜ್ಯ ಸರಕಾರ ಸುಪ್ರೀಂಕೋರ್ಟ್ ಆದೇಶವನ್ನು ನೆಪಮಾಡಿಕೊಂಡು ಇರುವ ಅಲ್ಪಸ್ವಲ್ಪ ನೀರನ್ನೂ ತಮಿಳುನಾಡಿಗೆ ಹರಿಸುವ ಮೂಲಕ, ನಾಡಿನ ರೈತರ ಹಿತ ಕಡೆಗಣಿಸುತ್ತಿರುವುದು ಸರಿಯಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಸುರೇಶ್ ಕಂಠಿ ಮಾತನಾಡಿ, ನಾಲೆಗಲ್ಲಿ ನೀರುಹರಿಸಲು ಜಿಲ್ಲೆಯ ಶಾಸಕರು, ಸಂಸದರು ಸರಕಾರ ಮತ್ತು ಜಿಲ್ಲಾಡಳಿತದ ಮೇಲೆ ಒತ್ತಡ ತರಬೇಕು ಎಂದು ಒತ್ತಾಯಿಸಿದರು.
ಕೆರೆಹೂಳು ತೆಗೆಯದಿರುವುದು ನೀರಿನ ಸಮಸ್ಯೆಗೆ ಪ್ರಮುಖ ಕಾರಣವಾಗಿದ್ದು, ಕೆರೆಗಳ ಹೂಳೆ ತೆಗೆಯಲು ಸರಕಾರ ಮತ್ತು ಜನಪ್ರತಿನಿಧಿಗಳು ಸಮಗ್ರ ಯೋಜನೆ ರೂಪಿಸಬೇಕು ಎಂದು ಅವರು ಆಗ್ರಹಿಸಿದರು.

ಚುಂಚನಗಿರಿಯ ರಾಮನಗರ ಶಾಖಾ ಮಠದ ಅನ್ನದಾತೇಶ್ವರ ಸ್ವಾಮಿಜಿ, ಜಿಪಂ ಸದಸ್ಯ ಮರಿ ಹೆಗ್ಗಡೆ, ಸೆನೆಟ್ ಮಾಜಿ ಸದಸ್ಯ ವಿ.ಕೆ.ಜಗದೀಶ್, ಯುವ ಜೆಡಿಎಸ್ ಜಿಲ್ಲಾಧ್ಯಕ್ಷ ಬೇಲೂರು ಶಶಿಧರ, ಶಿಂಷಾ ಸಹಕಾರ ಬ್ಯಾಂಕ್ ಅಧ್ಯಕ್ಷ ರವಿ ಚನ್ನಸಂದ್ರ, ಉಪಾಧ್ಯಕ್ಷ ಎಂ.ಡಿ.ಮಹಲಿಂಗಯ್ಯ, ದಸಂಸದ ವೆಂಕಟಗಿರಿಯ್ಯ, ಸೋಮನಹಳ್ಳಿ ಅಂದಾನಿ, ಜಯ ಕರ್ನಾಟಕ ಸಂಘಟನೆಯ ರಾಜ್ಯ ಕಾರ್ಯದರ್ಶಿ ಎಸ್.ನಾರಾಯಣ್, ಜಿಲ್ಲಾಧ್ಯಕ್ಷ ಯೋಗಣ್ಣ, ತಾಲೂಕು ಅಧ್ಯಕ್ಷ ರಾಜೇಶ್, ಚಾಮನಹಳ್ಳಿ ಗ್ರಾಮದ ಪರಿಸರ ಪ್ರೇಮಿ ರಾಮಯ್ಯ, ಕಸ್ತೂರಿ ಕರ್ನಾಟಕ ಜನಪರ ವೇದಿಕೆ ರಾಜ್ಯಾಧ್ಯಕ್ಷ ರಮೇಶ್‍ಗೌಡ, ಜಿಲ್ಲಾಧ್ಯಕ್ಷ ವಿ.ಸಿ.ಉಮಾಶಂಕರ್, ತಾಲೂಕು ಅಧ್ಯಕ್ಷ ತಿಪ್ಪೂರು ರಾಜೇಶ್, ಇತರರು ಧರಣಿಗೆ ಬೆಂಬಲ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News