ಗ್ರಾಮಾಂತರ ಕ್ಷೇತ್ರದ ಅಭಿವೃದ್ದಿಗೆ 2000 ಕೋಟಿ ಅನುದಾನ ಬಳಕೆ : ಶಾಸಕ ಬಿ.ಸುರೇಶ್‍ಗೌಡ
ತುಮಕೂರು,ಜು.16:ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಅಭಿವೃದ್ದಿ ಕಳೆದ 10 ವರ್ಷಗಳಲ್ಲಿ 2000 ಕೋಟಿಗೂ ಹೆಚ್ಚು ಅನುದಾನವನ್ನು ವಿವಿಧ ಯೋಜನೆಗಳ ಮೂಲಕ ತರಲಾಗಿದೆ ಎಂದು ಶಾಸಕ ಬಿ.ಸುರೇಶ್‍ಗೌಡ ತಿಳಿಸಿದ್ದಾರೆ.
ನಮ್ಮ ಗ್ರಾಮ, ನಮ್ಮ ರಸ್ತೆ ಯೋಜನೆಯಡಿಯಲ್ಲಿ 3.25 ಕೋಟಿ ವೆಚ್ವದಲ್ಲಿ ನಿರ್ಮಾಣ ಮಾಡಲು ಹೊರಟಿರುವ ಹೆಬ್ಬಾಕ-ನರಸಾಪುರ ರಸ್ತೆ ಅಭಿವೃದ್ದಿ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡುತಿದ್ದ ಅವರು,ಲೋಕೋಪಯೋಗಿ, ಗ್ರಾಮೀಣ ನಗರ ನೀರು ಸರಬರಾಜು ಮತ್ತು ನೈರ್ಮಲ್ಯ ಇಲಾಖೆ, ಆರಾಧನಾ ಇನ್ನಿತರ ಯೋಜನೆಗಳ ಮೂಲಕ ಕ್ಷೇತ್ರದ ಎಲ್ಲಾ ಹೋಬಳಿಗಳಲ್ಲಿಯೂ ಸಿ.ಸಿ.ರಸ್ತೆ, ಚರಂಡಿ, ಕುಡಿಯುವ ನೀರಿನ ವ್ಯವಸ್ಥೆ, ದೇವಾಲಯಗಳ ಅಭಿವೃದ್ದಿ ಸ್ಭೆರಿದಂತೆ ಹಲವಾರು ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ.ಇಡೀ ಜಿಲ್ಲೆಯಲ್ಲಿ ಸುಸಜ್ಜಿತ ರಸ್ತೆ ಇರುವುದು ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ ಮಾತ್ರ ಎಂಬುದನ್ನು ಅಧಿಕಾರಿಗಳೇ ಒಪ್ಪಿಕೊಳ್ಳುತ್ತಿದ್ದಾರೆ ಎಂದರು.
ಚುನಾವಣೆ ಸಂದರ್ಭದಲ್ಲಿ ಮತಕೋಸ್ಕರ ನಾನು ಜನರ ಮುಂದೆ ನಾಟಕವಾಡುತ್ತಿಲ್ಲ.ನಾನು ಮಾಡಿರುವ ಕೆಲಸಗಳನ್ನೇ ಮಾತನಾಡುತ್ತೇವೆ. ನಮ್ಮದು ಸಂಸ್ಕಾರ ವಂತ ಪಕ್ಷ. ವಾಜಪೇಯಿ, ಯಡಿಯೂರಪ್ಪ ಅವರಿಂದ ಪ್ರೇರೆಪಿನಾಗಿ ರಾಜಕಾರಣಕ್ಕೆ ಬಂದಿರುವ ನಾನು ಇನ್ನು ನೂರು ವರ್ಷ ಕಳೆದರೂ ಮತದಾರರ ಋಣ ತೀರಿಸಲು ಸಾಧ್ಯವಿಲ್ಲ. ಅಧಿಕಾರಕೋಸ್ಕರ ಮತದಾರರು ನೀಡಿದ ಶಾಸಕನ ಪಟ್ಟವನ್ನೇ ತಿರಸ್ಕರಿಸಿ ಬಂದವರಿಂದ ನಾನು ಪಾಠ ಕಲಿಯಬೇಕಾಗಿಲ್ಲ ಎಂದು ಟೀಕಿಸಿದರು.
ಇಂದು ಶಂಕುಸ್ಥಾಪನೆಗೊಳ್ಳುತ್ತಿರುವ ಹೆಬ್ಬಾಕ ನರಸಾಪುರ ರಸ್ತೆ ಅಭಿವೃದ್ದಿ ಕಾಮಗಾರಿ ಮುಂದಿನ ಐದು ತಿಂಗಳಲ್ಲಿ ಪೂರ್ಣಗೊಳ್ಳಲಿದೆ. ಡಿಸೆಂಬರ್ 25 ರಂದು ಮಾಜಿ ಪ್ರಧಾನಿ ವಾಜಪೇಯಿ ಅವರ ಹುಟ್ಟು ಹಬ್ಬ ಅಂದು ಈ ರಸ್ತೆಯನ್ನು ಉದ್ಘಾಟಿಸಲಿದ್ದೇನೆ,ಇದು ಶತ ಸಿದ್ದ.ಕಳೆದ 10ವರ್ಷಗಳಿಂದ ನುಡಿದಂತೆ ನಡೆದಿದ್ದೇನೆ.ಮುಂದೆಯೂ ಹಾಗೆಯೇ ನಡೆದುಕೊಳ್ಳುತ್ತೇನೆ. ಮತದಾರರಿಗೆ ದ್ರೋಹ ಬಗೆಯುವುದಿಲ್ಲ ಎಂದು ಶಾಸಕ ಬಿ.ಸುರೇಶ್‍ಗೌಡ ನುಡಿದರು.
ಕಳೆದ 10 ವರ್ಷಗಳಲ್ಲಿ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ದಿ ನಿಧಿಯ ಅನುದಾನದ ಶೇ 90ರಷ್ಟು ಸರಕಾರಿ ಶಾಲೆಗಳ ಅಭಿವೃದ್ದಿಗೆ ಖರ್ಚು ಮಾಡಿದ್ದೆನೆ.
ಗ್ರಾಮೀಣ ಭಾಗದ ಮಕ್ಕಳಿಗೂ ಗುಣಮಟ್ಟದ ಶಿಕ್ಷಣ ದೊರೆಯಬೇಕೆಂಬ ಮಹತ್ವಾಕಾಂಕ್ಷೆ ಯಿಂದ ಹೊನಸಿಗೆರೆ, ನಾಗವಲ್ಲಿ,ಬುಗುಡನಹಳ್ಳಿ ಸ್ಭೆರಿದಂತೆ ಹಲವು ಶಾಲೆಗಳಿಗೆ ಮೂಲಭೂತ ಸೌಕರ್ಯ ಕಲ್ಪಿಸಲಾಗಿದೆ. ಪವರ್ ಗ್ರಿಡ್‍ನವರ ಮೂಲಕ ಸೀತಕಲ್ಲು ಮತ್ತು ಊರುಕೆರೆ ಶಾಲೆಗಳ ಅಭಿವೃದ್ದಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ನಾನು ಇದುವರೆಗೂ ಕೈಗೊಂಡಿರುವ ಅಭಿವೃದ್ದಿ ಕಾಮಗಾರಿಗಳಲ್ಲಿ ಕಳಪೆ ಎಂಬುದನ್ನು ತೋರಿಸಿದರೆ ಯಾವುದೇ ಶಿಕ್ಷೆಗೂ ಸಿದ್ದ ಎಂದರು.
ಸಮಾರಂಭರದಲ್ಲಿ ತಾಲೂಕು ಪಂಚಾಯಿತಿ ಅಧ್ಯಕ್ಷ ಗಂಗಾಂಜನೇಯ್ಯ,ಉಪಾಧ್ಯಕ್ಷ ಶಾಂತಕುಮಾರ್,ಜಿ.ಪಂ.ಸದಸ್ಯರಾದ ಶಿವಮ್ಮ ನಾಗರಾಜು, ಜಿ.ಆರ್.ಶಿವಕುಮಾರ್,ತಾ.ಪಂ.ಸದಸ್ಯರಾದ ವಿಜಯಕುಮಾರ್, ಷಣ್ಮುಖಪ್ಪ,ಜಿ.ಪಂ.ಮಾಜಿ ಸದಸ್ಯ ರವಿಹೆಬ್ಬಾಕ, ಅಣ್ಣೇನಹಳ್ಳಿ ಶಿವಕುಮಾರ್, ಹೆಚ್.ಎನ್.ಮಲ್ಲೇಶ್,ಸಿದ್ದೇಗೌಡ, ಗ್ರಾ.ಪಂ.ಸದಸ್ಯರಾದ ಮಹಾಲಿಂಗಪ್ಪ, ಜಗದೀಶ್, ಶ್ರೀಮತಿ ಸುಶೀಲಮ್ಮ, ಲೋಕೇಶ್ವರಿ,ಲಲಿತಮ್ಮ, ತೋಪೇಗೌಡ, ಶಿವಕುಮಾರ್, ಉಮಾಮಹೇಶ್ವರಿ, ರಂಜಿತ, ಮಂಜುಮ್ಮ ಮತ್ತಿತರರು ವೇದಿಕೆಯಲ್ಲಿದ್ದರು.