ಕೈಗಾರಿಕೆ ಸ್ಥಾಪನೆಗೆ ಕ್ರಮ: ರಿಝ್ವಾನ್ ಹರ್ಷದ್ ಭರವಸೆ
ಮಂಡ್ಯ, ಜು.16: ಜಿಲ್ಲೆಯ ಸಮಗ್ರ ಅಭಿವೃದ್ಧಿ ದೃಷ್ಠಿಯಿಂದ ಕೈಗಾರಿಕೆಗಳ ಸ್ಥಾಪನೆ ಅತ್ಯಗತ್ಯವಾಗಿದ್ದು, ಈ ನಿಟ್ಟಿನಲ್ಲಿ ರಾಜ್ಯ ಸರಕಾರ ಗಂಭೀರ ಚಿಂತನೆ ನಡೆಸಿದೆ ಎಂದು ವಿಧಾನಪರಿಷತ್ ಸದಸ್ಯ ರಿಜ್ವಾನ್ ಹರ್ಷದ್ ತಿಳಿಸಿದ್ದಾರೆ.
ನಗರದ ಬೀಡಿ ಕಾರ್ಮಿಕರ ಕಾಲನಿಯಲ್ಲಿ ತಮ್ಮ ಅನುದಾನದ 4 ಲಕ್ಷ ರೂ. ವೆಚ್ಚದ ಹೈಮಾಸ್ ವಿದ್ಯುತ್ ದೀಪ ಉದ್ಘಾಟಿಸಿ ಮಾತನಾಡಿದ ಅವರು, ನಗರ ಮತ್ತು ಜಿಲ್ಲೆಯ ಅಭಿವೃದ್ಧಿ, ಉದ್ಯೋಗ ಸೃಷ್ಠಿಗೆ ಕೈಗಾರಿಕೆಗಳ ಸ್ಥಾಪನೆ ಅಗತ್ಯವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಶಾಸಕ ಅಂಬರೀಶ್ ಅವರ ಮಾರ್ಗದರ್ಶನದಲ್ಲಿ ಅಗತ್ಯ ಕ್ರಮವಹಿಸಲಾಗುವುದು ಎಂದರು.
ರಾಜಕಾರಣದಲ್ಲಿ ಮಂಡ್ಯ ಜಿಲ್ಲೆ ವಿಶೇಷ ಸ್ಥಾನಮಾನವನ್ನು ಹೊಂದಿದೆ. ಹೋರಾಟದ ಹಿನ್ನೆಲೆಯಲ್ಲಿ ನಡೆದುಬಂದಿರುವ ಈ ಜಿಲ್ಲೆಯ ರೈತರ ಬದುಕು ಹಸಿರಾಗಬೇಕು. ಅದಕ್ಕಾಗಿ ರಾಜ್ಯ ಸರಕಾರ ಹಲವು ಜನಪರ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಿದೆ ಎಂದು ಅವರು ಹೇಳಿದರು. ನಗರಸಭಾಧ್ಯಕ್ಷ ಹೊಸಹಳ್ಳಿ ಬೋರೇಗೌಡ, ಸದಸ್ಯ ಮಧು, ಮಾಜಿ ಸದಸ್ಯ ರಫೀವುಲ್ಲಾ, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಲೋಕೇಶ್, ಮಾಜಿ ಅಧ್ಯಕ್ಷ ಎಂ.ಎಸ್.ಚಿದಂಬರ್, ಸುಮನ್, ಜಾಕೀರ್, ಜಬೀವುಲ್ಲಾ, ಇತರರು ಹಾಜರಿದ್ದರು.