ಡಿಐಜಿ ರೂಪ ವಿರುದ್ಧ ತನಿಖೆಗೆ ಆಗ್ರಹ
ಬೆಂಗಳೂರು, ಜು. 17: ಅಧಿಕಾರ ದುರ್ಬಳಕೆ ಮಾಡಿ ಕಾರಾಗೃಹ ಇಲಾಖೆಯ ನಿಯಮಗಳನ್ನು ಉಲ್ಲಂಘಿಸಿರುವ ಡಿಐಜಿ ಡಿ.ರೂಪ ಅವರ ವಿರುದ್ಧ ಸೂಕ್ತ ತನಿಖೆ ನಡೆಸಬೇಕು ಎಂದು ಆಗ್ರಹಿಸಿ ಮಾನವ ಹಕ್ಕುಗಳ ಸಂಘಟನೆಗಳು, ರೈತ ಪರ ಸಂಘಟನೆಗಳು, ದಲಿತ ಪರ ಸಂಘಟನೆಗಳ ಕಾರ್ಯಕರ್ತರು ಇಂದು ನಗರದಲ್ಲಿ ಧರಣಿ ನಡೆಸಿದರು.
ಸೋಮವಾರ ನಗರದ ಮೌರ್ಯ ವೃತ್ತದಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ವಿವಿಧ ಸಂಘಟನೆಗಳ ನೂರಾರು ಕಾರ್ಯಕರ್ತರು ಪಾಲ್ಗೊಂಡು ಪರಪ್ಪನ ಅಗ್ರಹಾರದ ಕಾರಾಗೃಹದಲ್ಲಿನ ಎಲ್ಲ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿ ಡಿಐಜಿ ಡಿ.ರೂಪ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಎಂಡಿಎನ್ ಯುವ ಸೇನೆಯ ಅಧ್ಯಕ್ಷ ಚೇತನ್ ಕುಮಾರ್ ಲಿಂಗದಹಳ್ಳಿ ಮಾತನಾಡಿ, ಪ್ರಚಾರದ ಗೀಳಿಗೆ ಸಿಲುಕಿರುವ ಡಿಐಜಿ ಡಿ.ರೂಪ ಕಾರಾಗೃಹದ ಸೂಕ್ಷ್ಮ ಹಾಗೂ ಗೌಪ್ಯ ಮಾಹಿತಿಯನ್ನು ಬಹಿರಂಗಗೊಳಿಸಿದ್ದಾರೆ. ಕಾರಾಗೃಹದ ನಿಯಮಗಳನ್ನು ಉಲ್ಲಂಘಿಸಿರುವ ರೂಪ ಅವರನ್ನು ಕಡ್ಡಾಯ ರಜೆಯ ಮೇಲೆ ಮನೆಗೆ ಕಳುಹಿಸಬೇಕು ಎಂದು ಆಗ್ರಹಿಸಿದರು.
ತಮಿಳುನಾಡಿನ ಶಶಿಕಲಾ ಅವರಿಗೆ ಜೈಲಿನಲ್ಲಿ ಐಷಾರಾಮಿ ಜೀವನ ನಡೆಸಲು ಸಹಕರಿಸಲು ಜೈಲು ಸಿಬ್ಬಂದಿ ಎರಡು ಕೋಟಿ ಲಂಚ ಪಡೆದಿದ್ದಾರೆ ಎಂದು ಅವರು ಮಾಧ್ಯಮಗಳಿಗೆ ನೀಡಿರುವ ಹೇಳಿಕೆ ಆಧಾರ ರಹಿತವಾದದ್ದು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅಧಿಕಾರ ದುರ್ಬಳಕೆ ಮಾಡಿಕೊಂಡು ಕಾರಾಗೃಹದಲ್ಲಿ ಕೈದಿಗಳನ್ನು ಅಧಿಕಾರಿಗಳ ವಿರುದ್ಧ ಎತ್ತಿಕಟ್ಟಿ ಹಲ್ಲೆ ಮಾಡಿಸಲು ರೂಪ ಅವರೇ ಪ್ರಚೋದನೆ ನೀಡಿದ್ದಾರೆ ಎಂದು ಗಂಭೀರವಾಗಿ ಆರೋಪಿಸಿದರು.
ಮುತ್ತಿಗೆ ಯತ್ನ: ಪ್ರತಿಭಟನೆಯ ನಂತರ ಡಿಐಜಿ ಡಿ.ರೂಪ ಅವರ ಅಧಿಕಾರ ದುರ್ಬಳಕೆ ಖಂಡಿಸಿ ಕಾರಾಗೃಹ ಕಚೇರಿ ಮುತ್ತಿಗೆ ಹಾಕಲು ಯತ್ನಿಸಿದ ಪ್ರತಿಭಟನಾಕಾರರನ್ನು ಹೈಗ್ರೌಂಡ್ಸ್ ಠಾಣೆಯ ಪೊಲೀಸರು ವಶಪಡಿಸಿಕೊಂಡರು.
ಪ್ರತಿಭಟನೆಯಲ್ಲಿ ರೈತ ಸೇನೆಯ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್, ದಲಿತ ಸಂಘಟನೆಗಳ ಮುಖಂಡರಾದ ಅನಂತ ಅಂಜಪ್ಪ, ಚೇತನ್ ಲಿಂಗದಹಳ್ಳಿ, ಮುನಿವೆಂಕಟಪ್ಪ ಸೇರಿದಂತೆ ಇತರರು ಇದ್ದರು.