ಏಕಾಏಕಿ ಕೈದಿಗಳ ಸ್ಥಳಾಂತರ: ಕುಟುಂಬಸ್ಥರ ಪರದಾಟ
ಬೆಂಗಳೂರು, ಜು.17: ಕೇಂದ್ರ ಕಾರಾಗೃಹ ಪರಪ್ಪನ ಅಗ್ರಹಾರದಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳ ಬಗ್ಗೆ ಡಿಐಜಿ ಡಿ.ರೂಪಾ, ಡಿಜಿಪಿ ಸತ್ಯನಾರಾಯಣರಾವ್ ಅವರ ನಡುವಿನ ಗುದ್ದಾಟ ಕೈದಿಗಳ ಮೇಲೆ ಪರಿಣಾಮ ಬೀರಿದ್ದು, 32ಕ್ಕೂ ಹೆಚ್ಚು ಕೈದಿಗಳನ್ನು ಇತರೆ ಜೈಲುಗಳಿಗೆ ಸ್ಥಳಾಂತರ ಮಾಡಲಾಗಿದೆ. ಆದರೆ, ಕೈದಿಗಳ ಮಾಹಿತಿ ಲಭ್ಯವಾಗದೆ ಕುಟುಂಬಸ್ಥರು ಪರದಾಡುತ್ತಿದ್ದಾರೆ.
ಎರಡು ದಿನಗಳಿಂದ ರಾತ್ರಿಯ ವೇಳೆ ಕೈದಿಗಳನ್ನು ಮೈಸೂರು, ಬೆಳಗಾವಿ, ಬಳ್ಳಾರಿ ಸೇರಿದಂತೆ ಇತರೆ ಕಡೆ ಸ್ಥಳಾಂತರ ಮಾಡಲಾಗಿದ್ದು, ಕೈದಿಗಳ ಕುಟುಂಬದವರು ಆತಂಕಕ್ಕೀಡಾಗಿದ್ದಾರೆ. ನಮ್ಮ ಮನೆಯವರು ಎಲ್ಲಿದ್ದಾರೆ ಎಂಬುದೇ ಗೊತ್ತಾಗುತ್ತಿಲ್ಲ. ಟಿವಿಗಳಲ್ಲಿ ಅವರನ್ನು ಎಲ್ಲೋ ಕರೆದುಕೊಂಡು ಹೋಗುತ್ತಿದ್ದಾರೆ ಎಂದು ನೋಡಿದೆವು. ಎಲ್ಲಿ ಇಟ್ಟಿದ್ದಾರೆ, ಯಾವ ಜಿಲ್ಲೆಗೆ ಕರೆದುಕೊಂಡು ಹೋಗಿದ್ದಾರೆ ಎಂಬುದು ಗೊತ್ತಾಗಿಲ್ಲ ಎಂದು ಪರಪ್ಪನ ಅಗ್ರಹಾರದ ಮುಂದೆಯೇ ಕಣ್ಣೀರು ಹಾಕುವ ದೃಶ್ಯಗಳು ಕಂಡು ಬಂದಿತು.
ಒಳಗಿದ್ದ ನಮ್ಮವರಿಗೆ ಏನಾಗಿದೆಯೋ, ಎಲ್ಲಿಗೆ ಕಳುಹಿಸಿದ್ದಾರೋ, ಯಾವ ರೀತಿ ಥಳಿಸಿದ್ದಾರೋ ಎಂದು ಗೊತ್ತಾಗುತ್ತಿಲ್ಲ ಎಂದು ಕೇಂದ್ರ ಕಾರಾಗೃಹದ ಬಳಿ ಹಲವರು ತಮ್ಮ ಅಳಲು ತೋಡಿಕೊಂಡು ಆತಂಕ ವ್ಯಕ್ತಪಡಿಸಿದ್ದಾರೆ. ಮತ್ತೆ ಕೆಲವರು ದೂರವಾಣಿ ಮೂಲಕ ಬಳ್ಳಾರಿ, ಬಿಜಾಪುರ, ಮೈಸೂರು, ಧಾರವಾಡ, ಬೆಳಗಾವಿಯಲ್ಲಿ ವಿಚಾರಿಸತೊಡಗಿರುವುದು ತಿಳಿದಿದೆ.
ಕಾರಾಗೃಹದ ಅಕ್ರಮಗಳ ಸಾಕ್ಷ ನಾಶಕ್ಕಾಗಿ ಕೈದಿಗಳನ್ನು ಸ್ಥಳಾಂತರ ಮಾಡಲಾಗಿದೆ ಎನ್ನುವ ಆರೋಪ ಕೇಳಿಬರುತ್ತಿದ್ದು, ಜೈಲಿನಲ್ಲಿ ದಾಂಧಲೆ ನಡೆಸಿದವರನ್ನು ನಿಯಮಾವಳಿ ಪ್ರಕಾರ ಸ್ಥಳಾಂತರ ಮಾಡಲಾಗಿದೆ ಎಂಬುದು ಅಧಿಕಾರಿಗಳ ಮಾತು.
ಸೋಮವಾರ ತನಿಖಾ ಸಮಿತಿ ಕೇಂದ್ರ ಕಾರಾಗೃಹಕ್ಕೆ ಪ್ರಕರಣ ಸಂಬಂಧ ವಿಚಾರಣೆ ನಡೆಸಲು ಆಗಮಿಸಲಿದ್ದು, ತಂಡ ಪರಿಶೀಲನೆ ನಡೆಸುವ ಮುನ್ನವೇ ಪರಿಸ್ಥಿತಿಯನ್ನು ಸುಧಾರಿಸುವ ಪ್ರಯತ್ನವನ್ನು ಅಲ್ಲಿನ ಅಧಿಕಾರಿಗಳು ಮಾಡಿದ್ದಾರೆ. ಅಕ್ರಮಗಳ ಬಗ್ಗೆ ಕೈದಿಗಳು ಬಾಯ್ಬಿಡದಂತೆ ಬಂದ್ ಮಾಡಿದ್ದಾರೆ. ವಿರೋಧಿಸುವವರನ್ನು ಬೇರೆಡೆ ಸ್ಥಳಾಂತರಿಸಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ.