ಪ್ರಾಮಾಣಿಕ ಅಧಿಕಾರಿಗಳ ನೈತಿಕ ಸ್ಥೈರ್ಯ ಕುಸಿತ: ಯಡಿಯೂರಪ್ಪ

Update: 2017-07-17 13:36 GMT

ಹೊಸದಿಲ್ಲಿ, ಜು.17: ರಾಜ್ಯ ಸರಕಾರವು ಕಾರಾಗೃಹ ಡಿಐಜಿ ಡಿ.ರೂಪಾ ಅವರನ್ನು ಸಂಚಾರ ಮತ್ತು ರಸ್ತೆ ಸುರಕ್ಷತೆ ವಿಭಾಗದ ಡಿಐಜಿ ಹಾಗೂ ಆಯುಕ್ತರನ್ನಾಗಿ ವರ್ಗಾವಣೆ ಮಾಡುವ ಮೂಲಕ ಪ್ರಾಮಾಣಿಕ ಅಧಿಕಾರಿಗಳ ನೈತಿಕ ಸ್ಥೈರ್ಯ ಕುಸಿಯುವಂತೆ ಮಾಡಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಕಿಡಿಗಾರಿದ್ದಾರೆ.

ಸೋಮವಾರ ಹೊಸದಿಲ್ಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರು ಪರಪ್ಪನ ಅಗ್ರಹಾರ ಜೈಲಿನಲ್ಲಿ ನಡೆಯುತ್ತಿರುವ ಕಾನೂನು ಬಾಹಿರ ಚಟುವಟಿಕೆಗಳನ್ನು ರೂಪಾ ಪತ್ರದ ಮೂಲಕ ಸರಕಾರಕ್ಕೆ ತಿಳಿಸುವ ಪ್ರಯತ್ನ ಮಾಡಿದ್ದಾರೆ. ಆ ಪತ್ರವನ್ನು ಆಧರಿಸಿ ತನಿಖೆ ನಡೆಸಿ ಜೈಲಿನ ಪರಿಸ್ಥಿತಿ ಸುಧಾರಿಸುವ ಬದಲು, ಅವರನ್ನು ಸಂಚಾರ ವಿಭಾಗಕ್ಕೆ ವರ್ಗಾವಣೆ ಮಾಡಿರುವುದು ಶೋಭೆ ತರುವುದಿಲ್ಲ ಎಂದರು.

ಡಿಐಜಿ ರೂಪಾ ಅನೇಕ ಸಂಗತಿಗಳನ್ನು ಬಯಲಿಗೆಳೆದಿದ್ದಾರೆ. ಜೈಲಿನಲ್ಲಿ ಇಷ್ಟು ಅನೈತಿಕ ಚಟುವಟಿಕೆಗಳು ನಡೆಯಲು ಸಾಧ್ಯವೆ ಎಂದು ಯಾರೂ ಕಲ್ಪನೆ ಮಾಡಲು ಸಾಧ್ಯವಿಲ್ಲ. ಇನ್ನುಮುಂದೆ ಯಾವುದೇ ಇಲಾಖೆಯಲ್ಲಿನ ಪ್ರಾಮಾಣಿಕ ಅಧಿಕಾರಿಗಳು ಸತ್ಯ ಹೇಳದಂತೆ ಸರಕಾರ ಕ್ರಮ ಕೈಗೊಂಡಿದೆ. ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಿದ್ದಕ್ಕಾಗಿ ಅವರನ್ನು ಸಂಚಾರ ವಿಭಾಗಕ್ಕೆ ಕಳುಹಿಸಲಾಗಿದೆ ಎಂದು ಯಡಿಯೂರಪ್ಪ ಕಿಡಿಗಾರಿದರು.

 ರೂಪಾ ಅಷ್ಟೇ ಅಲ್ಲ, ಈ ಸರಕಾರದ ಆಡಳಿತದ ಕಾರ್ಯವೈಖರಿಯಿಂದ ಬೇಸತ್ತು ಅನೇಕ ಪ್ರಾಮಾಣಿಕ ಅಧಿಕಾರಿಗಳು ಸಮಸ್ಯೆಗಳಿಗೆ ಸಿಲುಕಿಕೊಂಡಿದ್ದಾರೆ. ಕೆಲವರು ಈ ವ್ಯವಸ್ಥೆಯ ಸಹವಾಸವೇ ಬೇಡ ಎಂದು ಹೊರ ಹೋಗಿದ್ದಾರೆ. ಕೆಲವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇನ್ನು ಮುಂದೆ ಯಾರೂ ಕೂಡ ಸತ್ಯದ ಪರವಾಗಿ ನಿಲ್ಲಬಾರದು ಎಂಬ ಸಂದೇಶವನ್ನು ಈ ವರ್ಗಾವಣೆಯ ಮೂಲಕ ಸರಕಾರ ಎಲ್ಲರಿಗೂ ನೀಡಿದೆ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News