ಹಾಸನ: ನಗರಸಭೆಯಿಂದ ಅಕ್ರಮ ಕಟ್ಟಡ ತೆರವು

Update: 2017-07-17 12:49 GMT

ಹಾಸನ, ಜು. 17: ವಿಶ್ವನಾಥ ನಗರದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಶಾಲೆಗೆ ಸೇರಿದ ಜಾಗದಲ್ಲಿ ಅಕ್ರಮ ಕಟ್ಟಡ ಸೋಮವಾರ ಬೆಳಗ್ಗೆ ಜೆಸಿಬಿ ಮೂಲಕ ನಗರಸಭೆಯಿಂದ ತೆರವುಗೊಳಿಸಿದರು.

ಅಂಗನವಾಡಿ ಹೆಸರಿನಲ್ಲಿ ಅಕ್ರಮ ಕಟ್ಟಡ ಕಟ್ಟಲಾಗಿದ್ದು, ತೆರವುಗೊಳಿಸುವಂತೆ ಪ್ರತಿಭಟನೆ ನಡೆಸಲಾಗಿತ್ತು. ಇಲಾಖೆಯಿಂದ ಮಾಹಿತಿ ಪಡೆದು ನಗರಸಭೆ ಅಧಿಕಾರಿಗಳೊಂದಿಗೆ ಜೆಸಿಬಿ ಮೂಲಕ ತೆರವುಗೊಳಿಸಲಾಯಿತು. ಎರಡು ಮನೆಗಳು ಸಂಪೂರ್ಣ ನಿರ್ಮಾಣದ ಹಂತಕ್ಕೆ ತಲುಪಿದ್ದು, ಯಾರು ಕಟ್ಟಡ ನಿರ್ಮಿಸುತ್ತಿದ್ದಾರೆ ಎಂಬುದು ಇನ್ನು ತಿಳಿದು ಬಂದಿರುವುದಿಲ್ಲ. ಕುಮಾರ್ ಎನ್ನುವ ವ್ಯಕ್ತಿ ಕಟ್ಟಡ ನಿರ್ಮಾಣದ ಗುತ್ತಿಗೆದಾರ ಎಂಬುದು ಮಾತ್ರ ತಿಳಿದು ಬಂದಿದೆ.

ಇದೆ ವೇಳೆ ನಗರಸಭೆ ಅಧ್ಯಕ್ಷ ಹೆಚ್.ಎಸ್. ಅನೀಲ್ ಕುಮಾರ್ ಸುದ್ದಿಗಾರರೊಂದಿಗೆ ಮಾತನಾಡಿ, ವಿಶ್ವನಾಥ ನಗರದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಮೊದಲು ಅಂಗನವಾಡಿಗೆ ಕಟ್ಟಡ ನಿರ್ಮಿಸುತ್ತಿರುವುದಾಗಿ ಹೇಳಿ ಅಲ್ಲಿನ ಜನರಿಗೆ ಮಂಕು ಬೂದಿ ಎರಚಿ ಎರಡು ಮನೆಯನ್ನು ನಿರ್ಮಾಣ ಮಾಡುತ್ತಿರುವ ಬಗ್ಗೆ ನಿವಾಸಿಗಳಿಗೆ ತಿಳಿದು ಬಂದಿದೆ. ಕುಮಾರ್ ಎಂಬುವನು ಕಟ್ಟಡದ ಗುತ್ತಿಗೆ ಪಡೆದುಕೊಂಡು ನಿರ್ಮಿಸುತ್ತಿದ್ದರು. ಈ ಕಟ್ಟಡವನ್ನು ಯಾರು ನಿರ್ಮಿಸುತ್ತಿದ್ದಾರೆ ಎಂಬುದು ನಮಗೆ ಮಾಹಿತಿ ಇರುವುದಿಲ್ಲ. ನಮ್ಮ ಮೇಲೆ ಇಲ್ಲ ಸಲ್ಲದ ಆರೋಪ ಮಾಡಿದ್ದಾರೆ. ಆಧಾರ ಸಮೇತ ಜವಾಬ್ಧಾರಿಯುತವಾಗಿ ಹೇಳಿಕೆ ಕೊಡಬೇಕು, ನಗರಸಭೆ ಸದಸ್ಯೆ ಶುಭ ಮತ್ತು ವಕೀಲ ಕ್ರಾಂತಿ ಅವರಿಗೆ ನಾವು ಬೆಂಬಲ ಕೊಡುತ್ತಿದ್ದೇವೆ ಎಂಬುದು ಸತ್ಯಕ್ಕೆ ದೂರವಾದುದ್ದು ಎಂದರು. ವಕೀಲ ಕ್ರಾಂತಿ ಮಾತನಾಡಿ, ನನ್ನ ಮೇಲೆ ಕಾಂಗ್ರೆಸ್ ಮುಖಂಡರು ಆರೋಪ ಮಾಡಿದ್ದು, ಇದು ಸತ್ಯಕ್ಕೆ ದೂರವಾಗಿದೆ. ರಾಜಕೀಯ ವೈಶಮ್ಯದಿಂದ ಪಿತೂರಿ ನಡೆಸಿದ್ದಾರೆ. ಮುಂದಿನ ದಿನಗಳಲ್ಲಿ ಮತ್ತೆ ನನ್ನ ಹೆಸರು ಪ್ರಸ್ತಾಪವಾದರೇ ಅವರ ಮೇಲೆ ಮಾನನಷ್ಟ ಮೊಕದಮ್ಮೆ ಹಾಕಲಾಗುವುದು. ಈ ಕಟ್ಟಡ ನಿರ್ಮಾಣದಲ್ಲಿ ನಗರಸಭೆ ಸದಸ್ಯೆ ಶುಭ ಮತ್ತು ನನ್ನ ಹೆಸರನ್ನು ಪ್ರಸ್ತಾಪ ಮಾಡಿ ಆರೋಪಿಸಿದ್ದಾರೆ. ಇದಕ್ಕೂ ನಮಗೂ ಯಾವ ಸಂಬಂಧವಿರುವುದಿಲ್ಲ ಎಂದು ಸ್ಪಷ್ಟನೆ ಕೊಟ್ಟರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News