×
Ad

ಅಧಿಕೃತವಾಗಿ ಕಾಂಗ್ರೆಸ್ ಸೇರ್ಪಡೆಯಾದ ಹುಲ್ತಿಕೊಪ್ಪ ಶ್ರೀಧರ್, ಬಾಸೂರು ಚಂದ್ರೇಗೌಡ

Update: 2017-07-17 19:07 IST

ಶಿವಮೊಗ್ಗ, ಜು. 17: ಇಲ್ಲಿನ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸೋಮವಾರ ನಡೆದ ಸಮಾರಂಭದಲ್ಲಿ ಸೊರಬದ ಬಿಜೆಪಿ ಮುಖಂಡ ಹುಲ್ತಿಕೊಪ್ಪ ಶ್ರೀಧರ್ ಮತ್ತು ಹೋರಾಟಗಾರ ಬಾಸೂರು ಚಂದ್ರೇಗೌಡರವರು ಕಾಂಗ್ರೆಸ್ ಸೇರ್ಪಡೆಯಾದರು. ಪಕ್ಷದ ಜಿಲ್ಲಾಧ್ಯಕ್ಷ ತೀ.ನಾ.ಶ್ರೀನಿವಾಸ್‍ರವರು ಇಬ್ಬರು ಮುಖಂಡರಿಗೆ ಪಕ್ಷದ ಬಾವುಟ ನೀಡಿ ಬರ ಮಾಡಿಕೊಂಡರು.

ನಂತರ ಕಾರ್ಯಕರ್ತರನ್ನುದ್ದೇಶಿಸಿ ಹುಲ್ತಿಕೊಪ್ಪ ಶ್ರೀಧರ್ ಮಾತನಾಡಿ, ಸೊರಬದಲ್ಲಿ ರಾಜಕೀಯ ಬದಲಾವಣೆ ಅನಿವಾರ್ಯವಾಗಿದೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಸೇರ್ಪಡೆಯಾಗಿದ್ದೆನೆ. ಬಿಜೆಪಿಯ ಕೆಲ ಮುಖಂಡರು ಸರ್ವಾಧಿಕಾರಗಳಂತೆ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿದ ಅವರು, 'ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷ ಅತ್ಯದಿಕ ಸ್ಥಾನಗಳಲ್ಲಿ ಗೆಲುವು ಸಾಧಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಣೆ ಮಾಡುತ್ತೆನೆ' ಎಂದರು. 

ಬಾಸೂರು ಚಂದ್ರೇಗೌಡ ಮಾತನಾಡಿ, ಅನ್ಯಾಯದ ವಿರುದ್ಧ ಸತತವಾಗಿ ಹೋರಾಟ ಮಾಡುತ್ತಾ ಬೆಳೆದು ಬಂದವನು ತಾನು. ಜನಪರ ಸಂಘಟನೆ ಮಾಡಿ ಯಾವುದೇ ರಾಜಕೀಯವಿಲ್ಲದೆ, ಹಳ್ಳಿಗಳನ್ನು ಸುತ್ತಿ ಜನಮುಖಿ ಕೆಲಸ ಮಾಡಿದ್ದೆನೆ. ಮುಂದೆಯೂ ಈ ಕೆಲಸ ಮುಂದುವರಿಸುತ್ತೆನೆ ಎಂದರು. 
ಪಕ್ಷದ ಜಿಲ್ಲಾಧ್ಯಕ್ಷ ತೀ.ನಾ.ಶ್ರೀನಿವಾಸ್ ಮಾತನಾಡಿ, ಸೊರಬದಲ್ಲಿ ಬಂಗಾರಪ್ಪ ಅವರಿಗೆ ಇದ್ದ ಶಕ್ತಿ ಅವರ ಮಕ್ಕಳಿಗೂ ಇಲ್ಲ. ಆದ್ದರಿಂದ ಬಂಗಾರಪ್ಪರಂತೆ ಅವರ ಮಕ್ಕಳು ರಾಜಕೀಯದಲ್ಲಿ ಮಿನುಗುತ್ತಿಲ್ಲ. ಬಂಗಾರಪ್ಪ ಅವರ ಪುತ್ರರು ಯಾವುದೇ ಪಕ್ಷದಲ್ಲಿದ್ದರೂ ಪಕ್ಷ ಸಂಘಟನೆ ಮಾಡುವುದಿಲ್ಲ. ಇದರಿಂದ ಪಕ್ಷದಂತೆ ಅವರೂ ಸಹಾ ಬೆಳೆಯಲಿಲ್ಲ ಎಂದು ಟೀಕಿಸಿದರು. 

ಕುಮಾರ್ ಬಂಗಾರಪ್ಪ ಕಾಂಗ್ರೆಸ್‍ನಲ್ಲಿದ್ದರೂ ಪಕ್ಷವನ್ನು ಬೆಳೆಸದೆ ಹಾಳುಗೆಡವಿದರು. ಅಪರೂಪಕ್ಕೆ ಸೊರಬಕ್ಕೆ ಬರುವ ಮೂಲಕ ನಾಯಕರ ಜೊತೆ ಸಂಬಂಧ ಇಟ್ಟುಕೊಳ್ಳದೆ, ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ, ಜನರ ಸಮಸ್ಯೆಗೆ ಸ್ಪಂದಿಸದೆ ದೂರ ಉಳಿದರು ಎಂದು ಹೇಳಿದರು.
ಕಾಂಗ್ರೆಸ್ ಎಲ್ಲಾ ಜಾತಿ, ಜನಾಂಗದವರನ್ನು ಸಮಾನವಾಗಿ ಕಾಣುವ ಪಕ್ಷ.  ಜನರ ಸಮಸ್ಯೆಗಳಿಗೆ ಸ್ಪಂದಿಸುವ ಮತ್ತು ಅನ್ಯಾಯದ ವಿರುದ್ಧ ಹೋರಾಡುವ ಪಕ್ಷವಾಗಿದೆ. ಇದನ್ನು ಗಮನಿಸಿ ಹುಲ್ತಿಕೊಪ್ಪ ಶ್ರೀಧರ್ ಮತ್ತು ಬಾಸೂರು ಚಂದ್ರೇಗೌಡ ಪಕ್ಷ ಸೇರಿದ್ದಾರೆ ಎಂದರು.

ರಾಜ್ಯ ಸರ್ಕಾರವು ರೈತರ ಸುಮಾರು 8 ಸಾವಿರ ಕೋಟಿ ರೂ. ಸಾಲ ಮನ್ನಾ ಮಾಡಿದೆ. ಸಿಎಂ ವಿರುದ್ಧ ಸಾಲ ಮನ್ನಾಕ್ಕಾಗಿ ಗುಡುಗುತ್ತಿದ್ದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕೇಂದ್ರ ಸರ್ಕಾರದಿಂದ ರಾಷ್ಟ್ರೀಕೃತ ಬ್ಯಾಂಕ್‍ಗಳ ಸಾಲ ಮನ್ನಾ ಮಾಡಿಸಲಾಗದೆ ರೈತರಿಗೆ ಬೇರೆ ರೀತಿಯ ಸಹಾಯಮಾಡುವುದಾಗಿ ಹೇಳುತ್ತಿದ್ದಾರೆ. ರೈತ ಪರ ಕಾಳಜಿ ಇದ್ದಲ್ಲಿ ಯಾವ ರೀತಿಯ ಸಹಾಯ ಮಾಡುವುದಾಗಿ ಅವರು ಪ್ರಕಟಿಸಲಿ ಎಂದು ಆಗ್ರಹಿಸಿದರು. 

ಈ ಸಂದರ್ಭದಲ್ಲಿ ಡಿಸಿಸಿ ಉಪಾಧ್ಯಕ್ಷ ರಾಮೇಗೌಡ, ಸೇವಾದಳ ಮುಖ್ಯಸ್ಥ ವೈ.ಹೆಚ್.ನಾಗರಾಜ್, ಸೊರಬ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಿವಾನಂದಪ್ಪ, ಆನವಟ್ಟಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚೌಟಿ ಚಂದ್ರಶೇಖರ ಪಾಟೀಲ್, ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಮಂಜುನಾಥ್ ಸೇರಿದಂತೆ ಮೊದಲಾದವರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News