×
Ad

ಮಡಿಕೇರಿ : ಚಾರುಲತಾ ಸೋಮಲ್‍ಗೆ ಜಿ.ಪಂ.ವತಿಯಿಂದ ಬೀಳ್ಕೊಡುಗೆ

Update: 2017-07-17 19:38 IST

ಮಡಿಕೇರಿ,ಜು.17 :ಕಳೆದ ಒಂದು ವರ್ಷ ಏಳು ತಿಂಗಳು 17 ದಿನಗಳ ಕಾಲ ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಹಣಾಧಿಕಾರಿಯಾಗಿ ಸೇವೆ ಸಲ್ಲಿಸಿ ಮುಖ್ಯಮಂತ್ರಿಯವರ ಕಾರ್ಯಾಲಯಕ್ಕೆ ಉಪ ಕಾರ್ಯದರ್ಶಿಯಾಗಿ ವರ್ಗಾವಣೆಗೊಂಡಿರುವ ಚಾರುಲತಾ ಸೋಮಲ್ ಅವರನ್ನು ಜಿ.ಪಂ.ವತಿಯಿಂದ ಬೀಳ್ಕೊಡುಗೆ ನೀಡಲಾಯಿತು. 

ನಗರದ ಕೋಟೆ ಹಳೇ ವಿಧಾನ ಸಭಾಂಗಣದಲ್ಲಿ ಸೋಮವಾರ ನಡೆದ ಕಾರ್ಯಕ್ರಮದಲ್ಲಿ ಚಾರುಲತಾ ಸೋಮಲ್ ಅವರಿಗೆ ಶಾಲು, ಫಲ ತಾಂಬೂಲ, ವಡಿಗತ್ತಿ ನೀಡಿ ಸನ್ಮಾನಿಸಲಾಯಿತು. 

ಬೀಳ್ಕೊಡುಗೆ ಸ್ವೀಕರಿಸಿ ಮಾತನಾಡಿದ ಚಾರುಲತಾ ಸೋಮಲ್ ಅವರು ಜಿಲ್ಲಾ ಪಂಚಾಯತ್‍ನಲ್ಲಿ ಕಾರ್ಯನಿರ್ವಹಿಸಿರುವುದು ಇದೇ ಮೊದಲು, ಇದಕ್ಕೂ ಮೊದಲು ಉಪ ವಿಭಾಗಾಧಿಕಾರಿಯಾಗಿ ಉಡುಪಿ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸಿದ್ದೆ, ಜಿಲ್ಲಾ ಪಂಚಾಯತ್‍ನ ಎಲ್ಲಾ ಹಂತದ ಅಧಿಕಾರಿಗಳು ಮತ್ತು ಜಿ.ಪಂ.ವ್ಯಾಪ್ತಿಯ ನಾನಾ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ಸಹಕಾರದಿಂದ ಕೆಲಸ ಮಾಡಿದ್ದೇನೆ ಎಂದು ಅವರು ಹೇಳಿದರು.  
ಕೊಡಗು ಜಿಲ್ಲೆಯಲ್ಲಿ ಕಾರ್ಯನಿರ್ವಹಿಸಲು ಅವಕಾಶ ಸಿಕ್ಕಿದ್ದಕ್ಕೆ ಕೃತಜ್ಞತೆ ಸಲ್ಲಿಸಿದ ಚಾರುಲತಾ ಸೋಮಲ್ ಅವರು ಜನಪ್ರತಿನಿಧಿಗಳು, ಅಧಿಕಾರಿಗಳ ಸಹಕಾರದಿಂದ ಉತ್ತಮವಾಗಿ ಕಾರ್ಯನಿರ್ವಹಿಸಲು ಸಾಧ್ಯವಾಯಿತು ಎಂದು ಅವರು ಸ್ಮರಿಸಿದರು.  

ಸನ್ಮಾನಕ್ಕೂ ಮೊದಲು ಮಾತನಾಡಿದ ಜಿ.ಪಂ.ಉಪ ಕಾರ್ಯದರ್ಶಿ ಸಿದ್ದಲಿಂಗಮೂರ್ತಿ ಅವರು ಚಾರುಲತಾ ಸೋಮಲ್ ಅವರ ಇಚ್ಛಾಶಕ್ತಿ, ಆತ್ಮಭಿಮಾನ, ಧೈರ್ಯವಂತಿಕೆ ಮೆಚ್ಚುವಂತಹದ್ದು ಎಂದು ಅವರು ಹೇಳಿದರು.   

ಜಿ.ಪಂ.ಮುಖ್ಯ ಲೆಕ್ಕಾಧಿಕಾರಿ ನಂದ ಅವರು ಮಾತನಾಡಿ ಜಿ.ಪಂ.ನಲ್ಲಿ ಎಲ್ಲರೊಂದಿಗೂ, ಎಲ್ಲಾ ಹಂತದ ಅಧಿಕಾರಿಗಳು, ಸಿಬ್ಬಂದಿಗಳು ಆಡಳಿತ ನಿರ್ವಹಣೆಯಲ್ಲಿ ಸಹಕಾರ ನೀಡುತ್ತಿದ್ದರು ಎಂದು ಅವರು ಸ್ಮರಿಸಿದರು. 

ಬಿಸಿಎಂ ಇಲಾಖೆ ಅಧಿಕಾರಿ ಕೆ.ವಿ.ಸುರೇಶ್ ಅವರು ಮಾತನಾಡಿ ಚಾರುಲತಾ ಸೋಮಲ್ ಅವರು ಅಧಿಕಾರಿಗಳನ್ನು ಮನೆಯ ಸದಸ್ಯರು ಎಂಬಂತೆ ಎಲ್ಲರನ್ನು ವಿಶ್ವಾಸದಿಂದ ಕಾಣುತ್ತಿದ್ದರು. ಇದರಿಂದ ಹೆಚ್ಚಿನ ಕೆಲಸ ನಿರ್ವಹಿಸಲು ಸಹಕಾರಿಯಾಗಿತ್ತು ಎಂದು ಅವರು ಹೇಳಿದರು.   
ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕರಾದ ಜಿ.ಆರ್.ಬಸವರಾಜ ಅವರು ಮಾತನಾಡಿ ಜಿ.ಪಂ.ಸಿಇಒ ಚಾರುಲತಾ ಸೋಮಲ್ ಅವರು ಒಳ್ಳೆಯ ಮಾರ್ಗದರ್ಶನ, ನಿರ್ದೇಶನ ಹಾಗೂ ಅತ್ಯುತ್ತಮ ಸಲಹೆ ನೀಡುತ್ತಿದ್ದರು. ಕೊಡಗು ಜಿಲ್ಲೆ ಎಸ್‍ಎಸ್‍ಎಲ್‍ಸಿ ಫಲಿತಾಂಶದಲ್ಲಿ 18 ರಿಂದ 9 ನೇ ಸ್ಥಾನಕ್ಕೆ ಏರಿಕೆಯಾಗುವಲ್ಲಿ ಚಾರುಲತಾ ಸೋಮಲ್ ಅವರ ಪಾತ್ರ ಅಪಾರ ಎಂದು ಅವರು ಬಣ್ಣಿಸಿದರು.  

ವಾರ್ತಾಧಿಕಾರಿ ಚಿನ್ನಸ್ವಾಮಿ ಮಾತನಾಡಿ ಚಾರುಲತಾ ಸೋಮಲ್ ಅವರು ಹೊಸತನಕ್ಕೆ ಒಗ್ಗಿಕೊಳ್ಳುತ್ತಿದ್ದರು. ಅಂಟಾರ್ಟಿಕ ಖಂಡಕ್ಕೆ ತೆರಳಿ ಅಲ್ಲಿನ ಅನುಭವ ಹಂಚಿಕೊಂಡಿದ್ದರು, ಜಿಲ್ಲೆಯ ಆದಿವಾಸಿ ಮಕ್ಕಳನ್ನು ಡಾರ್ಜಿಲಿಂಗ್ ಪ್ರವಾಸಕ್ಕೆ ಕಳುಹಿಸಿಕೊಟ್ಟಿದ್ದು ಸ್ಮರಣೀಯ ಕಾರ್ಯಕ್ರಮಗಳು ಎಂದರು.     
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರಾದ ಮಮ್ತಾಜ್ ಅವರು ಚಾರುಲತಾ ಸೋಮಲ್ ಅವರಲ್ಲಿ ಇದ್ದ ಮಾನವೀಯ ಮೌಲ್ಯ, ಸ್ನೇಹಪರ ವ್ಯಕ್ತಿತ್ವದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.   

ತಾ.ಪಂ.ನ ಪ್ರೀತಂ ಅವರು ಚಾರುಲತಾ ಸೋಮಲ್ ಅವರ ಅವಧಿಯಲ್ಲಿ  ಕೊಡಗು ಜಿಲ್ಲೆಗೆ ಹಾಗೂ ಸಂಪಾಜೆ ಮತ್ತು ಪಾಲಿಬೆಟ್ಟ ಗ್ರಾ.ಪಂ.ಗಳಿಗೆ ಪಂಚಾಯತ್ ಪುರಸ್ಕಾರ ದೊರೆತ್ತಿದ್ದು ವಿಶೇಷ ಎಂದರು. 

ಜಿ.ಪಂ.ಸಹಾಯಕ ಕಾರ್ಯದರ್ಶಿ ಶ್ರೀಕಂಠಮೂರ್ತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಒ.ಆರ್.ಶ್ರೀರಂಗಪ್ಪ, ವಿರಾಜಪೇಟೆ ತಾ.ಪಂ.ಇಒ ಪಡ್ನೇಕರ್, ಪಶುಪಾಲನಾ ಇಲಾಖೆಯ ಉಪ ನಿರ್ದೇಶಕರಾದ ಡಾ.ಸಿ.ನಾಗರಾಜು, ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರಾದ ಮಾಯಾದೇವಿ ಗಲಗಲಿ, ಐಟಿಡಿಪಿ ಇಲಾಖಾ ಅಧಿಕಾರಿ ಪ್ರಕಾಶ್, ಜಿ.ಪಂ.ಎಂಜಿನಿಯರ್ ರಾಜ್‍ಕುಮಾರ್ ರೆಡ್ಡಿ, ಮೀನುಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕರಾದ ಕೆ.ಟಿ.ದರ್ಶನ್, ಯುವ ಸಬಲೀಕರಣ ಇಲಾಖೆಯ ಸಹಾಯಕ ನಿರ್ದೇಶಕರಾದ ಜಯಲಕ್ಷ್ಮಿ ಬಾಯಿ, ಜಿಲ್ಲಾ ಆಯುಷ್ ಅಧಿಕಾರಿ ರಾಮಚಂದ್ರ, ಅಕ್ಷರ ದಾಸೋಹ ಅಧಿಕಾರಿ ರಾಜಶೇಖರ್, ಸಾರ್ವಜನಿಕ ಶಿಕ್ಷಣ ಇಲಾಖೆಯ ವಿಷಯ ಪರಿವೀಕ್ಷಕರಾದ ಮಹದೇವು, ಸಂಪೂರ್ಣ ಸ್ವಚ್ಛತಾ ಆಂದೋಲನದ ಸಮಾಲೋಚಕರಾದ ಸೂರಜ್, ಜಿ.ಪಂ.ನ ದಾಮೋದರ್, ವಸಂತ, ರಾಣಿ, ಐಟಿಡಿಪಿ ಇಲಾಖೆಯ ರಂಗನಾಥ್ ಇತರರು ಚಾರುಲತಾ ಸೋಮಲ್ ಅವರ ಆಡಳಿತದ ಬಗ್ಗೆ ಗುಣಗಾನ ಮಾಡಿದರು.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News