×
Ad

ಉನ್ನತ ಶಿಕ್ಷಣ ಸಚಿವರ ಕಚೇರಿ ಮುಂದೆ ಶಾಸಕರ ಧರಣಿ

Update: 2017-07-17 20:37 IST

ಬೆಂಗಳೂರು, ಜು. 17: ಆನ್‌ಲೈನ್ ಮೂಲಕ ಹೊಸದಾಗಿ ಅತಿಥಿ ಉಪನ್ಯಾಸಕರ ನೇಮಕಾತಿ ಮಾಡಿಕೊಳ್ಳುವುದನ್ನು ಕೈಬಿಟ್ಟು, ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವವರನ್ನೆ ಮುಂದುವರಿಸಬೇಕೆಂದು ಆಗ್ರಹಿಸಿ ಸೋಮವಾರ ಅತಿಥಿ ಉಪನ್ಯಾಸಕರು ಧರಣಿ ಸತ್ಯಾಗ್ರಹ ನಡೆಸಿದರು.

ಇಲ್ಲಿನ ನಗರದ ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರ ಕಚೇರಿ ಮುಂಭಾಗದಲ್ಲಿ ಸರಕಾರಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರ ಸಂಘದ ನೇತೃತ್ವದಲ್ಲಿ ನಡೆದ ಧರಣಿಯಲ್ಲಿ ನೂರಾರು ಅತಿಥಿ ಉಪನ್ಯಾಸಕರು ಪಾಲ್ಗೊಂಡು ಆನ್‌ಲೈನ್ ಮೂಲಕ ಹೊಸದಾಗಿ ಅತಿಥಿ ಉಪನ್ಯಾಸಕರ ನೇಮಕಾತಿ ಮಾಡಿಕೊಳ್ಳುವುದನ್ನು ಕೈಬಿಡಬೇಕೆಂದು ಆಗ್ರಹಿಸಿದರು.

ಪ್ರತಿಭಟನೆ ನೇತೃತ್ವ ವಹಿಸಿದ್ದ ಸಂಘಟನೆಯ ಗೌರವಾಧ್ಯಕ್ಷ ಬಿ.ರಾಜಶೇಖರ ಮೂರ್ತಿ ಮಾತನಾಡಿ, ಆನ್‌ಲೈನ್ ಮೂಲಕ ಹೊಸದಾಗಿ ಅತಿಥಿ ಉಪನ್ಯಾಸಕರ ನೇಮಕಾತಿ ಮಾಡಿಕೊಳ್ಳುವ ಸಂಬಂಧ ಹೊರಡಿಸಿರುವ ಆದೇಶವನ್ನು ಸರಕಾರ ಕೂಡಲೆ ಹಿಂಪಡೆಯಬೇಕು ಎಂದು ಮನವಿ ಮಾಡಿದರು.

2016-17ರ ಸಾಲಿನಲ್ಲಿ ಸೇವೆ ಸಲ್ಲಿಸಿದ ಅತಿಥಿ ಉಪನ್ಯಾಸಕರನ್ನು ಮುಂದಿನ ಅವಧಿಗೂ ಮುಂದುವರೆಸಬೇಕು. ಸೇವಾ ಹಿರಿತನ ಮತ್ತು ವಯೋಮಾನದ ಆಧಾರದಲ್ಲಿ ನೆರೆಯ ಕಾಲೇಜುಗಳಲ್ಲಿ ಸೇವೆ ಮುಂದುವರೆಸಲು ಅವಕಾಶ ನೀಡಬೇಕು ಎಂದು ಒತ್ತಾಯಿಸಿದರು.

ಅತಿಥಿ ಉಪನ್ಯಾಸಕರಿಗೆ ಸೇವಾ ಭದ್ರತೆ ಒದಗಿಸಲು ಸಮಿತಿಯನ್ನು ರಚಿಸಬೇಕು. ಮಾಸಿಕ ವೇತನವನ್ನು ಕನಿಷ್ಠ 25 ಸಾವಿರ ರೂ.ಗಳಿಗೆ ಹೆಚ್ಚಳ ಮಾಡಬೇಕು. ಮಹಿಳಾ ಅತಿಥಿ ಉಪನ್ಯಾಸಕರಿಗೆ ಸಂಬಳ ಸಹಿತ ಮೂರು ತಿಂಗಳು ಹೆರಿಗೆ ರಜೆ ನೀಡಲು ಕೂಡಲೆ ಕ್ರಮ ಕೈಗೊಳ್ಳಬೇಕೆಂದು ಅವರು ಆಗ್ರಹಿಸಿದರು.

ಪರಿಷತ್ ಸದಸ್ಯರ ಬೆಂಬಲ : ಅತಿಥಿ ಉಪನ್ಯಾಸಕರ ಧರಣಿ ಸತ್ಯಾಗ್ರಹಕ್ಕೆ ಬೆಂಬಲ ವ್ಯಕ್ತಪಡಿಸಿ ವಿಧಾನ ಪರಿಷತ್ ಸದಸ್ಯರಾದ ಶ್ರೀಕಂಠೇಗೌಡ, ರಮೇಶ್ ಬಾಬು, ಚೌಡಾರೆಡ್ಡಿ, ಪುಟ್ಟಣ್ಣ, ಗಣೇಶ್ ಕಾರ್ಣಿಕ್ ಮತ್ತಿತರರು ವಿಧಾನಸೌಧದಲ್ಲಿನ ಉನ್ನತ ಶಿಕ್ಷಣ ಸಚಿವರ ಕಚೇರಿ ಮುಂಭಾಗದಲ್ಲಿ ಧರಣಿ ನಡೆಸಿ ಬೆಂಬಲ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News