×
Ad

ಅರ್ಥಪೂರ್ಣ ಸ್ವಾತಂತ್ರ್ಯ ಆಚರಣೆಗೆ ನಿರ್ಧಾರ

Update: 2017-07-18 19:42 IST

ಚಿಕ್ಕಮಗಳೂರು, ಜು.18: ಜಿಲ್ಲಾಡಳಿತದ ವತಿಯಿಂದ ಸ್ವಾತಂತ್ರ್ಯ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಗುವುದೆಂದು ಜಿಲ್ಲಾಧಿಕಾರಿ ಜಿ.ಸತ್ಯವತಿ ಹೇಳಿದರು.

ಅವರು ಮಂಗಳವಾರ ಜಿಲ್ಲಾಧಿಕಾರಿಗಳ ಕಛೇರಿ ಸಭಾಂಗಣದಲ್ಲಿ ನಡೆದ ಸ್ವಾತಂತ್ರ್ಯ ದಿನಾಚರಣೆಯ ಪೂರ್ವ ಸಿದ್ದತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಆಗಸ್ಟ್ 15 ರಂದು ನಗರದ ನೇತಾಜಿ ಸುಭಾಷ್ ಚಂದ್ರಬೊಸ್ ಜಿಲ್ಲಾ ಆಟದ ಮೈದಾನದಲ್ಲಿ ಅಂದು ಬೆಳಿಗ್ಗೆ 9 ಗಂಟೆಗೆ ಜಿಲ್ಲಾ ಉಸ್ತುವಾರಿ ಸಚಿವರು ಧ್ವಜಾರೋಹಣ ನೆರವೇರಿಸಲಿದ್ದಾರೆ. ಹಾಗೂ ಧ್ವಜ ವಂದನೆ ಸ್ವೀಕರಿಸಿ ಜಿಲ್ಲೆಯ ಜನತೆಗೆ ಸ್ವಾತಂತ್ರ್ಯ ಸಂದೇಶವನ್ನು ನೀಡಲಿದ್ದಾರೆ ಎಂದು ನುಡಿದರು.

ಪೊಲೀಸ್ ಇಲಾಖೆ ಎನ್.ಸಿ.ಸಿ., ಸೇವಾದಳ, ಸ್ಕೌಟ್ ಅಂಡ್ ಗೈಡ್ಸ್, ವಿವಿಧ ಶಾಲಾ ಕಾಲೇಜು ವಿದ್ಯಾರ್ಥಿಗಳ ತಂಡಗಳು ಸೇರಿದಂತೆ ಸುಮಾರು 29 ತುಕಡಿಗಳಿಂದ ಆಕರ್ಷಕ ಪಥ ಸಂಚಲನ ನಡೆಯಲಿದೆಯಲ್ಲದೆ, ಶಾಲಾ ಕಾಲೇಜು ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಸಂಜೆ ಕಲಾ ಮಂದಿರದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ. ಸ್ವಾತಂತ್ರ್ಯ ದಿನದಂದು ಎಲ್ಲಾ ಸರ್ಕಾರಿ ಕಟ್ಟಡಗಳನ್ನು ವಿದ್ಯುತ್ ದೀಪಗಳಿಂದ ಅಲಂಕರಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
  
ಕಾರ್ಯಕ್ರಮ ಸುಗಮವಾಗಿ ನಡೆಯುವ ದೃಷ್ಠಿಯಿಂದ ವಿವಿಧ ಸಮಿತಿಗಳನ್ನು ರಚಿಸಿ, ಸಮಿತಿ ಅಧ್ಯಕ್ಷರು ತಮಗೆ ಸೂಚಿಸಿರುವ ಕಾರ್ಯಗಳ ಕುರಿತು ಶೀಘ್ರದಲ್ಲಿ ಸಭೆ ನಡೆಸಿ ಕಾರ್ಯ ಪ್ರವೃತ್ತರಾಗಬೇಕು. ಮಕ್ಕಳಿಗೆ ಕೆ.ಎಂ.ಎಫ್ ನಿಂದ ಪೇಡ ವಿತರಿಸಲಾಗುವುದು ಎಂದ ಅವರು, ಕಾಮಧೇನು ಗಣಪತಿ ದೇವಸ್ಥಾನದ ವತಿಯಿಂದ ಸ್ವಾತಂತ್ರ್ಯ ದಿನದ ಅಂಗವಾಗಿ ವೃದ್ಧಾಶ್ರಮಗಳಿಗೆ ಅನ್ನಸಂತರ್ಪಣೆ ಮಾಡಲಾಗುವುದೆಂದು ದೇವಸ್ಥಾನದ ಧರ್ಮದರ್ಶಿಗಳು ಸಭೆಗೆ ತಿಳಿಸಿದರು.  

ಸಭೆಯಲ್ಲಿ ಜಿ.ಪಂ ಮುಖ್ಯಕಾರ್ಯ ನಿರ್ವಹಣಾಧಿಕಾರಿ ಡಾ.ಆರ್ ರಾಗಪ್ರಿಯ, ಅಪರ ಜಿಲ್ಲಾಧಿಕಾರಿ ಎಂ.ಎಲ್.ವೈಶಾಲಿ, ಉಪ ವಿಭಾಗಾಧಿಕಾರಿ ಸಂಗಪ್ಪ, ಜಿ.ಪಂ. ಉಪಕಾರ್ಯದರ್ಶಿ ರಾಜಗೋಪಾಲ್, ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಹಾಗೊ ಕನ್ನಡ ಪರ ಸಂಘಟನೆಗಳ ಪದಾಧಿಕಾರಿಗಳು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News