ನಕಲಿ ಡಿವಿಡಿ ಮಾರಾಟ ಪ್ರಕರಣ: ಶಿಕ್ಷೆ ಪ್ರಕಟ
ದಾವಣಗೆರೆ, ಜು.18: ಚಲನಚಿತ್ರದ ನಕಲಿ ಡಿವಿಡಿ ಮತ್ತು ಅಶ್ಲೀಲ ದೃಶ್ಯಗಳುಳ್ಳ ಡಿವಿಡಿಗಳನ್ನು ಮಾರಾಟ ಮಾಡುತ್ತಿದ್ದ ಆರೋಪದ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬನಿಗೆ ಮೂರು ತಿಂಗಳ ಸಜೆ ಮತ್ತು 5 ಸಾವಿರ ರು. ದಂಡ ವಿಧಿಸಿ ಸ್ಥಳಿಯ 3ನೇ ಜೆಎಂಎಫ್‌ಸಿ ನ್ಯಾಯಾಲಯ ಮಂಗಳವಾರ ತೀರ್ಪು ನೀಡಿದೆ.
ಶೇಖರಪ್ಪ ಶಿಕ್ಷೆಗೆ ಗುರಿಯಾದ ಆರೋಪಿ. ಕಳೆದ 2009ರಲ್ಲಿನಗರದ ಕೆ.ಆರ್. ರಸ್ತೆಯಲ್ಲಿ ನಾಗರಾಜ್ ಮತ್ತು ಶೇಖರಪ್ಪ ಎನ್ನುವವರು ನಕಲಿ ಡಿವಿಡಿ ಮತ್ತಿ ಅಶ್ಲೀಲ ದೃಶ್ಯವುಳ್ಳ ಡಿವಿಡಿಗಳನ್ನು ಮಾರಾಟ ಮಾಡುತ್ತಿದ್ದಾಗ ಬಸವನಗರ ಠಾಣಾ ಪೊಲೀಸರಿಗೆ ಸಿಕ್ಕಿಬಿದ್ದಿದ್ದರು. ಈ ಕುರಿತು ಪಿಎಸ್‌ಐ ಭರತ್ ಕೃತಿ ಸಾಮ್ಯ ಅಧಿ ನಿಯಮದಡಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.ವಿಚಾರಣೆ ವೇಳೆ 1ನೇ ಆರೋಪಿ ನಾಗರಾಜ್ ತಪ್ಪಿಸಿಕೊಂಡಿದ್ದು, 2ನೇ ಆರೋಪಿ ವಿರುದ್ಧ ಪ್ರಕರಣ ಮುಂದುವರಿದಿತ್ತು.
ಪ್ರಕರಣದ ವಾದ ವಿವಾದ ಆಲಿಸಿದ 3ನೇ ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶರಾದ ಕೆ.ಎನ್.ಶಿವಕುಮಾರ್ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಎರಡನೇ ಆರೋಪಿ ಶೇಖರಪ್ಪಗೆ 3 ತಿಂಗಳ ಸಾದಾ ಶಿಕ್ಷೆ ಹಾಗೂ 5 ಸಾವಿರ ರು. ದಂಡ ವಿಧಿಸಿ ತೀರ್ಪು ನೀಡಿದ್ದಾರೆ.
ಸರ್ಕಾರದ ಪರವಾಗಿ ಹಿರಿಯ ಸಹಾಯಕ ಸರ್ಕಾರಿ ಅಭಿಯೋಜಕ ಅಂಕದ ಮುರಿಗೇಶ ಹುಚ್ಚಪ್ಪ ವಾದ ಮಂಡಿಸಿದ್ದರು.