ಅಕ್ರಮ ಕಲ್ಲುಗಣಿಗಾರಿಕೆ ನಡೆಸುತ್ತಿಲ್ಲ: ಸಂಸದ ಪುಟ್ಟರಾಜು
ಮಂಡ್ಯ, ಜು.18: ಪಾಂಡವಪುರ ತಾಲೂಕಿನ ಚಿನಕುರುಳಿ ಹಾಗೂ ಹೊನಗಾನಹಳ್ಳಿ ಗ್ರಾಪಂಗೆ ಸೇರಿದ ಸರ್ವೆ ನಂ.127 ಹಾಗೂ ಸರ್ವೆ ನಂ.80ರಲ್ಲಿ ನಡೆಯುತ್ತಿರುವ ಕಲ್ಲುಗಣಿಗಾರಿಕೆ ಕಾನೂನು ಬದ್ಧವಾಗಿದೆ ಎಂದು ಸಂಸದ ಸಿ.ಎಸ್.ಪುಟ್ಟರಾಜು ಹೇಳಿದ್ದಾರೆ.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತನ್ನ ಕುಟುಂಬ ಒಡೆತನದ ಕಂಪನಿ ಅಕ್ರಮವಾಗಿ ಕಲ್ಲುಗಣಿಗಾರಿಕೆ ನಡೆಸುತ್ತಿಲ್ಲ. ರಾಜಕೀಯ ದುರುದ್ದೇಶದಿಂದ ತಮ್ಮ ವಿರುದ್ಧ ಸುಳ್ಳು ಆರೋಪ ಹೊರಿಸಲಾಗಿದೆ ಎಂದರು.
ಸದರಿ ಪ್ರದೇಶ ಅರಣ್ಯ ಇಲಾಖೆಗೆ ಸಂಬಂಧಿಸಿದ್ದಲ್ಲ, ಗ್ರಾಮ ಪಂಚಾಯತ್ ವ್ಯಾಪ್ತಿಗೆ ಬರುತ್ತದೆ. ಕಾನೂನು ಪ್ರಕಾರವಾಗಿಯೇ ಪರವಾನಗಿ ಪಡೆದು ಕಲ್ಲುಗಣಿಗಾರಿಕೆ ನಡೆಸಲಾಗುತ್ತಿದೆ. ಪರಿಸರಕ್ಕೆ ಹಾನಿಯಾಗುವಂತಹ ಸ್ಫೋಟಕ ಬಳಸುತ್ತಿಲ್ಲ ಎಂದು ಅವರು ಹೇಳಿದರು.
ಜು.1ರಂದು ಅರಣ್ಯಾಧಿಕಾರಿಗಳು ಸ್ಥಳ ಪರಿಶೀಲನೆಗೆ ಬಂದಾಗ ಅಲ್ಲಿದ್ದವರು ಮತ್ತು ಅಧಿಕಾರಿಗಳ ನಡುವೆ ಮಾತಿನ ಚಕಮಕಿ ನಡೆಯುತ್ತಿತ್ತು. ವಿಷಯ ತಿಳಿದು ಅಲ್ಲಿಗೆ ಹೋಗಿ ಸಮಾಧಾನಪಡಿಸಿದ್ದಲ್ಲದೆ, ಸದರಿ ಗಣಿ ನಡೆಯುತ್ತಿರುವ ಸ್ಥಳ ಅರಣ್ಯ ಇಲಾಖೆಗೆ ಸೇರಿಲ್ಲವೆಂದು ಅಧಿಕಾರಿಗಳಿಗೆ ಮಾಹಿತಿ ನೀಡಿದೆ ಅಷ್ಟೆ, ಯಾವುದೇ ಬೆದರಿಕೆ ಹಾಕಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ಪುಟ್ಟಣ್ಣಯ್ಯಗೆ ಸವಾಲು: ಕೆ.ಎಸ್.ಪುಟ್ಟಣ್ಣಯ್ಯ ಶಾಸಕರಾದ ನಂತರದಲ್ಲಿ ಗಣಿಗಾರಿಕೆ ಹೆಚ್ಚಾಗಿದೆ. ಅವರು ಶಾಸಕರಾಗುವ ಮುನ್ನ ಕಲ್ಲುಗಣಿಗಾರಿಕೆ ನಡೆಸುತ್ತಿದ್ದ ಸಂಸ್ಥೆಗಳ ಸಂಖ್ಯೆ 18 ಇತ್ತು. ಈಗ ಸಂಖ್ಯೆ 48ಕ್ಕೆ ಮುಟ್ಟಿದೆ. ಕಲ್ಲುಗಣಿಗಾರಿಕೆಗೆ ಕೇರಳದಿಂದ ಕರೆತಂದವರು ನಾನೋ, ಅವರೋ ಎಂಬುದನ್ನು ಸಾರ್ವಜನಿಕರ ಮುಂದೆ ತೆರೆದಿಡಬೇಕು ಎಂದು ಪುಟ್ಟರಾಜು ಸವಾಲು ಹಾಕಿದರು.
ಮುಂಬರುವ ಚುನಾವಣೆಯಲ್ಲಿ ಮೇಲುಕೋಟೆ ಕ್ಷೇತ್ರದಿಂದ ಸ್ಪರ್ಧಿಸಲು ಜೆಡಿಎಸ್ ವರಿಷ್ಠರು ನನಗೆ ಹಸಿರು ನಿಶಾನೆ ತೋರಿದ್ದಾರೆ. ಇದರಿಂದ ಹತಾಶರಾಗಿ ಪುಟ್ಟಣ್ಣಯ್ಯ ತನ್ನ ಕುಟುಂಬದ ವಿರುದ್ಧ ಸುಳ್ಳು ಆರೋಪ ಹೊರಿಸುವ ಯತ್ನ ನಡೆಸಿದ್ದಾರೆ ಎಂದವರು ಟೀಕಿಸಿದರು.
ಜಿಪಂ ಸದಸ್ಯರಾದ ಅಶೋಕ್, ತಿಮ್ಮೇಗೌಡ, ಅನುಸೂಯ, ತಾಪಂ ಅಧ್ಯಕ್ಷ ಕೆ.ಎಂ.ಬೀರಪ್ಪ, ಶಂಕರ್, ಯೋಗೇಶ್, ಇತರರು ಉಪಸ್ಥಿತರಿದ್ದರು.