×
Ad

ಮಾನವತಾವಾದಿಗಳನ್ನು ಜಾತಿ, ಧರ್ಮಕ್ಕೆ ಸೀಮಿತಗೊಳಿಸಲಾಗಿದೆ; ಸಚಿವ ಪ್ರಿಯಾಂಕ ಖರ್ಗೆ ವಿಷಾದ

Update: 2017-07-18 21:27 IST

ಮಂಡ್ಯ, ಜು.18: ಬುದ್ಧ, ಬಸವ, ಡಾ. ಬಿ.ಆರ್.ಅಂಬೇಡ್ಕರ್ ಅವರನ್ನು ಒಂದೊಂದು ಜಾತಿ, ಧರ್ಮಗಳಿಗೆ ಮಾತ್ರ ಸೀಮಿತಗೊಳಿಸುವ ಹುನ್ನಾರ ನಡೆಯುತ್ತಿರುವುದು ದುರಂತ ಎಂದು ಪ್ರವಾಸೋದ್ಯಮ ಮತ್ತು ಐಟಿ-ಬಿಟಿ ಇಲಾಖೆ ಸಚಿವ ಪ್ರಿಯಾಂಕ ಖರ್ಗೆ ವಿಷಾದಿಸಿದ್ದಾರೆ.

ತಾಲೂಕಿನ ಮಾಚಹಳ್ಳಿ ಗ್ರಾಮ ಸಮೀಪದ ಬೋರೆಗುಡ್ಡ ಕಾಗೆಮಂಟಿಯ ನಾಗ ಪೂರ್ವಿಕರ ವೈಚಾರಿಕ ಮಹಾಮನೆಯಲ್ಲಿ ಮೈಸೂರಿನ ಚಾರ್ವಾಕ ಸೋಷಿಯಲ್ ಆಂಡ್ ಕಲ್ಚರಲ್ ಟ್ರಸ್ಟ್ ಸೋಮವಾರ ಸಂಜೆ ಆಯೋಜಿಸಿದ್ದ ಚಾರ್ವಾಕ ಗ್ರಾಮೀಣ ರಂಗಕಾಲ-2017 ಉದ್ಘಾಟನೆ ಮತ್ತು ಭಾರತದ ಪ್ರಜಾಪ್ರಭುತ್ವದಲ್ಲಿ ಅಸ್ಪಶ್ಯರು ಮತ್ತು ಅಸ್ಪತ್ಯತೆ ಕುರಿತ ವಿಚಾರ ಸಂಕಿರಣ ಹಾಗೂ ಪುಸ್ತಕ ಬಿಡುಗಡೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ವಿಶ್ವಕ್ಕೆ ಮಾನವೀಯ ಸಂದೇಶ ಮತ್ತು ಶಾಂತಿಯುತ ಬದುಕಿಗೆ ಬುನಾದಿ ಹಾಕಿಕೊಟ್ಟ ಮಹಾಮಾನವತವಾದಿಗಳ ಹೆಸರನ್ನು ಪಟ್ಟಭದ್ರಹಿತಶಕ್ತಿಗಳು ಸಂಕುಚಿತಗೊಳಿಸಿ, ಒಂದೊಂದು ಜಾತಿಗೆ ಸೀಮಿತಗೊಳಿಸುತ್ತಿದ್ದಾರೆಂದು ಅಸಮಾಧಾನ ವ್ಯಕ್ತಪಡಿಸಿದರು.

ಸಾನಿಧ್ಯ ವಹಿಸಿದ್ದ ಮೈಸೂರಿನ ಬಹುಜನ ಗುರುಪೀಠಾಧ್ಯಕ್ಷ ಜ್ಞಾನ ಪ್ರಕಾಶ ಸ್ವಾಮೀಜಿ ಮಾತನಾಡಿ, ಮನುಷ್ಯನಿಗೆ ವೈಜ್ಞಾನಿಕ ವಿಚಾರಗಳ ಬದಲು ಮೂಢನಂಬಿಕೆಗಳನ್ನು ತುಂಬಿ ಹಣದೋಚುವ ಷಢ್ಯಂತರ ಶತಶತಮಾನಗಳಿಂದ ನಿರಂತರವಾಗಿ ನಡೆದೊಂಡು ಬರುತ್ತಿದೆ ಎಂದು ಕಿಡಿಕಾರಿದರು.
ಇದರ ಪರಿವೇ ಇಲ್ಲದ ಅಜ್ಞಾನಿಗಳು ನೀವಾಗಿದ್ದಿರಿ ಎಂದು ಹೇಳಿದರು.
ಆಷಾಢ, ಅಮವಾಸ್ಯೆ, ಹುಣ್ಣಿಮೆ ದಿನಗಳಲ್ಲಿ ಶುಭಾಕಾರ್ಯಗಳು ನಡೆಸಬಾರದು ಎಂದು ಯಾವ ದೇವರು ಬಂದು ಹೇಳಿಲ್ಲ. ಮದುವೆ ಮಾಡಿಕೊಂಡ ಹೆಣ್ಣುಗಂಡುಗಳು ಸಮಾನಚಿತ್ತದಿಂದ ಬಾಳು ಕಟ್ಟಿಕೊಂಡರೆ ಅಷ್ಟೇ ಸಾಕು. ಮಾನಸಿಕ ಗುಲಾಮಗಿರಿಯಿಂದ ಹೊರಬರಹಬೇಕು ಎಂದು ಅವರು ಸಲಹೆ ಮಾಡಿದರು.

ಧಾರವಾಡದ ಗಣಕ ರಂಗ ತಂಡದ ಕಲಾವಿದರು ಡಾ.ಎಲ್.ಹನುಮಂತಯ್ಯ ಅವರ ಕೃತಿ ಆಧಾರಿತ "ಪೂನಾ ಒಪ್ಪಂದ" ನಾಟಕ ಪ್ರದರ್ಶಿಸಿದರು. ಟ್ರಸ್ಟ್ ಅಧ್ಯಕ್ಷ ಗಿರೀಶ್ ಮಾಚಹಳ್ಳಿ, ಅಂಬೇಡ್ಕರ್ ವಿಚಾರವಾದಿ ಎಂ.ಕೃಷ್ಣಮೂರ್ತಿ, ವಕೀಲ ಮೋಹನ್‌ಕುಮಾರ್, ಶಿವಲಿಂಗಯ್ಯ ಜಿಪಂ ಅಭಿಯಂತರ ಚಂದ್ರಹಾಸ್, ರೈತಸಂಘದ ಜಿಲ್ಲಾಧ್ಯಕ್ಷ ಎಸ್.ಸುರೇಶ್, ಪತ್ರಕರ್ತ ಡಾ. ಕೃಷ್ಣಮೂರ್ತಿ ಚಮರಂ, ತುಂಬಲರಾಮು, ಶಿವಲಿಂಗಯ್ಯ, ಸೋಸಲೆ ಸಿದ್ದರಾಜು, ಇತರ ಗಣ್ಯರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News