ದರೋಡೆ ಪ್ರಕರಣ: ಮೂವರು ಆರೋಪಿಗಳ ಬಂಧನ
ಮಂಡ್ಯ, ಜು.19: ಶ್ರೀರಂಗಪಟ್ಟಣ ತಾಲೂಕಿನಲ್ಲಿ ಕಳೆದ ತಿಂಗು ನಡೆದಿದ್ದ ಡಕಾಯಿತಿ ಪ್ರಕರಣವನ್ನು ಬೇಧಿಸಿರುವ ಶ್ರೀರಂಪಟ್ಟಣ ಗ್ರಾಮಾಂತರ ಠಾಣೆ ಪೊಲೀಸರು, ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
ಮಂಡ್ಯ ತಾಲೂಕಿನ ಕಾಳೇನಹಳ್ಳಿ ಗ್ರಾಮದ ಮರಿಸ್ವಾಮಿ ಎಂಬುವರ ಪುತ್ರ ಯಶ್ವಂತ್ ಅಲಿಯಾಸ್ ಯಶು, ಶ್ರೀರಂಗಪಟ್ಟಣ ತಾಲೂಕಿನ ತಡಗವಾಡಿ ಪುಟ್ಟೇಗೌಡ ಎಂಬುವರ ಪುತ್ರ ಕೆ.ಪಿ.ಸಚಿನ್ ಕೆ.ಪಿ ಹಾಗೂ ರಾಮಲಿಂಗೇಗೌಡ ಪುತ್ರ ಕೆ.ಆರ್.ಮಂಜುನಾಥ ಬಂಧಿತರು.
ಬಂಧಿತರಿಂದ ಕೃತ್ಯಕ್ಕೆ ಬಳಸುತ್ತಿದ್ದ ಇಂಡಿಕಾ ಕಾರು, ಕಬ್ಬಿಣದ ಲಾಂಗು, 3 ಚಾಕು ಹಾಗೂ 3 ಮೊಬೈಲ್, 600 ರೂ. ವಶಪಡಿಸಿಕೊಂಡಿದ್ದು, ಇತರ ಆರೋಪಿಗಳಾದ ಶ್ರೀರಂಗಪಟ್ಟಣ ತಾಲೂಕಿನ ಚಂದಗಾಲು ಗ್ರಾಮದ ದರ್ಶನ್, ಮಂಡ್ಯ ತಾಲೂಕಿನ ಕಬ್ಬಳ್ಳಿ ಕೋಣನಹಳ್ಳಿ ತಿಟ್ಟಿನ ದುರ್ಗೆಶ ಮತ್ತು ಹುಲಿಕೆರೆ ಗ್ರಾಮದ ಲಂಕೇಶ ಅಲಿಯಾಸ್ ಲಂಕಿ ಪರಾರಿಯಾಗಿದ್ದಾರೆ.
ಕಳೆದ ತಿಂಗಳು ಕೇರಳದ ಜಯಪ್ರಕಾಶ್ ಎಂಬುವರು ಬೆಂಗಳೂರಿನಲ್ಲಿ ತರಕಾರಿ ಮಾರಿ ವಾಪಸ್ ಬರುತ್ತಿದ್ದ ಮಾರ್ಗಮಧ್ಯೆ ಗಣಂಗೂರು ಬಳಿ ರಸ್ತೆಬದಿ ವಾಹನ ನಿಲ್ಲಿಸಿ ನಿದ್ರಿಸುತ್ತಿದ್ದಾಗ, ಈ ಆರು ಮಂದಿ ಆರೋಪಿಗಳು ಚಾಕು ತೋರಿಸಿ ದರೋಡೆ ನಡೆಸಿದ್ದರು. ಜತೆಗೆ, ಹಲವೆಡೆ ಹೆದ್ದಾರಿ ದರೋಡೆ ನಡೆಸಿರುವುದು ವಿಚಾರಣೆಯಿಂದ ತಿಳಿದು ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಡಿವೈಎಸ್ಪಿ ವಿಶ್ವನಾಥ್ ಹಾಗೂ ವೃತ್ತ ನೀರಿಕ್ಷಕ ಎಂ.ಚಂದ್ರಶೇಖರ್,ಪಿಎಸ್ಸೈ ಅಜರುದ್ದೀನ್ ನೇತೃತ್ವದ ತಂಡದ ಪೊಲೀಸರು ಇಂಡುವಾಳು ಅರಣ್ಯಪ್ರದೇಶದಲ್ಲಿ ಆರೋಪಿಗಳನ್ನು ಬಂಧಿಸಿದ್ದು, ಆರೋಪಿಗಳಿಗೆ ನ್ಯಾಯಾಂಗ ಬಂಧನ ಆದೇಶಿಸಲಾಗಿದೆ.