×
Ad

ಬೀಡಿ ಕಾರ್ಮಿಕರಿಗೆ ಪರ್ಯಾಯ ಉದ್ಯೋಗಕ್ಕೆ ಆಗ್ರಹ

Update: 2017-07-19 21:59 IST

ಮಂಡ್ಯ, ಜು.19: ರಾಜ್ಯದಲ್ಲಿರುವ ಸುಮಾರು 10 ಲಕ್ಷ ಬೀಡಿ ಕಾರ್ಮಿಕರ ಬಗ್ಗೆ ಕೇಂದ್ರ ಮತ್ತು ರಾಜ್ಯ ಸರಕಾರಗಳು ಮಲತಾಯಿ ಧೋರಣೆ ತಾಳಿವೆ ಎಂದು ಬುಧವಾರ ನಗರದ ಬಾಲಭವನದಲ್ಲಿ ನಡೆದ ಜಿಲ್ಲಾ ಬೀಡಿ ಕಾರ್ಮಿಕರ 3ನೆ ಸಮ್ಮೇಳನದಲ್ಲಿ ಆರೋಪಿಸಲಾಗಿದೆ.

ಧೂಮಪಾನ ನಿಷೇಧವನ್ನು ಭರದಿಂದ ಜಾರಿ ಮಾಡುತ್ತಿರುವ ಸರಕಾರಗಳ ನೀತಿಯಿಂದ ಕೆಲಸ ಬೀಡಿ ಕಾರ್ಮಿಕರು ಕೆಲಸ ಕಳೆದುಕೊಳ್ಳುತ್ತಿದ್ದಾರೆ. ಈ ತಂಬಾಕು ಆಧಾರಿತ ಕೋಟಿಗಟ್ಟಲೆ ಕಾರ್ಮಿಕರಿಗೆ ಪರ್ಯಾಯ ಉದ್ಯೋಗ ಹಾಗು ಪರಿಹಾರ ಯೋಜನೆ ರೂಪಿಸಿಲ್ಲ ಎಂದು ಖಂಡಿಸಲಾಯಿತು.
ಬರುವ ಅಲ್ಪಮೊತ್ತವನ್ನು ಬ್ಯಾಂಕ್ ಖಾತೆ ಮೂಲಕ ಜಮಾ ಮಾಡಿಸಲು ಕೇಂದ್ರ ಸರಕಾರವು ಹೊರಟಿದ್ದು, ಬ್ಯಾಂಕ್‌ನಲ್ಲಿ 5 ಸಾವಿರ ರೂ. ನಗರಪ್ರದೇಶ, 2 ಸಾವಿರ ರೂ. ಗ್ರಾಮೀಣ ಪ್ರದೇಶದಲ್ಲಿ ಕನಿಷ್ಠ ಬಾಕಿ ಇರಿಸುವಂತೆ ಕಾನೂನು ರೂಪಿಸಿದೆ. ಇದರಿಂದ ಲಕ್ಷಗಟ್ಟಲೆ ಬಡಕಾರ್ಮಿಕರು, ಪಿಂಚಣಿದಾರರು ಸಂಕಷ್ಟಕ್ಕೆ ಸಿಲುಕಲಿದ್ದು, ಕೂಡಲೆ ಕಾನೂನನ್ನು ಹಿಂದಕ್ಕೆ ಪಡೆಯಬೇಕು ಎಂದು ಒತ್ತಾಯಿಸಲಾಯಿತು.

ಬೀಡಿ ಎಲೆ ದರ ಕೆಜಿಗೆ 350 ರಿಂದ 450 ರೂ.ಗೆ ಹೆಚ್ಚಳವಾಗಿದ್ದು, ಇದರ ಬಹುತೇಕ ಹೊರೆ ಕಾರ್ಮಿಕರ ಮೇಲೆ ಬೀಳಲಿದ್ದು, ಕಾರ್ಮಿಕರ ಕೂಲಿ ಕಡಿಮೆಯಾಗುತ್ತಿದೆ. ಕಾರ್ಮಿಕರಿಗೆ ಗುರುತಿನ ಚೀಟಿ, ಲಾಗ್ ಪುಸ್ತಕ, ಪಿಎಫ್, ಬೋನಸ್‌ನ್ನು ಸಮರ್ಪಕವಾಗಿ ನೀಡುವಲ್ಲಿ ಮೀನಾಮೇಷ ಎಣಿಸುತ್ತಿರುವ ಮಾಲಕರ ವಿರುದ್ಧ ಜಿಲ್ಲಾಡಳಿತ, ಕಾರ್ಮಿಕ ಇಲಾಖೆ ನಿರ್ದಾಕ್ಷೀಣ್ಯ ಕ್ರಮ ಜರುಗಿಸಬೇಕು ಎಂದು ಸಮ್ಮೇಳನದಲ್ಲಿ ಆಗ್ರಹಿಸಲಾಯಿತು.

2015-16ನೆ ಸಾಲಿನಿಂದ ಬೀಡಿ ಕಾರ್ಮಿಕರಿಗೆ ನೀಡಬೇಕಾದ ತುಟ್ಟಿ ಭತ್ತೆಯನ್ನು ನೀಡದಂತೆ ಮಾಲಕರಿಗೆ ವಿನಾಯಿತಿ ನೀಡಿದ್ದ ಆದೇಶವನ್ನು ರಾಜ್ಯ ಉಚ್ಚ ನ್ಯಾಯಾಲಯದ ಆದೇಶದ ಹಿನ್ನೆಲೆಯಲ್ಲಿ ಸರಕಾರ ಹಿಂದಕ್ಕೆ ಪಡೆದಿದ್ದು, ಇದರಿಂದ ಕಾರ್ಮಿಕರು 1-4-2015 ರಿಂದ ಸಾವಿರ ಬೀಡಿಗೆ 12.75 ಪೈಸೆ ಪಡೆಯಲು ಕಾನೂನುಬದ್ದವಾಗಿ ಹಕ್ಕುದಾರರಾಗಿದ್ದಾರೆ ಎಂದು ಸಮ್ಮೇಳನದಲ್ಲಿ ಹೇಳಲಾಯಿತು.

ಅಖಿಲ ಭಾರತ ಬೀಡಿ ಕಾರ್ಮಿಕರ ಫೆಡರೇಷನ್ ಬೀಡಿ ಕಾರ್ಮಿಕರು ಬೇಡಿಕೆಗಳಾದ ಬಾಕಿ ತುಟ್ಟು ಭತ್ತೆ, ಗುರುತಿನ ಚೀಟಿ, ಲಾಗ್ ಪುಸ್ತಕ ಹಾಗೂ 1 ಸಾವಿರ ಬೀಡಿಗೆ 300 ರೂ, ವಿದ್ಯಾರ್ಥಿ ವೇತನ ಹೆಚ್ಚಳ, ತಿಂಗಳಿಗೆ ಕನಿಷ್ಠ 6,500 ರೂ. ಪಿಂಚಣಿ ನಿಗದಿಗೆ ಒತ್ತಾಯಿಸಿ ಕರೆ ನೀಡಿರುವ ಸಹಿ ಸಂಗ್ರಹ ಚಳವಳಿ ಯಶಸ್ವಿಗೊಳಿಸಲು ಕಾರ್ಮಿಕರಿಗೆ ಕರೆಕೊಡಲಾಯಿತು.


ಜಿಲ್ಲಾಧಿಕಾರಿ ಎಸ್.ಝೀಯಾವುಲ್ಲಾ ಸಮ್ಮೇಳನ ಉದ್ಘಾಟಿಸಿದರು. ಬೀಡಿ ಕಾರ್ಮಿಕರ ಫೆಡರೇಷನ್ ರಾಜ್ಯ ಪ್ರಧಾನ ಕಾರ್ಯದರ್ಶಿ ಸೈಯದ್ ಮುಜೀಬ್, ಕಾರ್ಮಿಕ ಅಧಿಕಾರಿ ನಾಗೇಂದ್ರ, ಬೀಡಿಕಾರ್ಮಿಕ ಸಂಘದ ಜಿಲ್ಲಾಧ್ಯಕ್ಷ ಅಬ್ದುಲ್ಲಾ, ಪ್ರ.ಕಾರ್ಯದರ್ಶಿ ಸಿ.ಕುಮಾರಿ, ಉಪಾಧ್ಯಕ್ಷೆ ಎಂ.ಎಚ್.ವಿಲಾಯತ್ ಉನ್ನೀಸಾ, ಇತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News